ವರ್ಷಾಂತ್ಯದಲ್ಲಿ ಸತತ 7ನೇ ಬಾರಿ ವಿಶ್ವದ ನಂ.1 ಪಟ್ಟ

Update: 2021-11-07 18:28 GMT

ಪ್ಯಾರಿಸ್, ನ.7: ಈ ಬಾರಿ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ದಾಖಲೆ ಏಳನೇ ಬಾರಿ ವಿಶ್ವದ ನಂ.1 ಸ್ಥಾನದೊಂದಿಗೆ ಈ ವರ್ಷವನ್ನು ಕೊನೆಗೊಳಿಸುವ ಮೂಲಕ ಸಮಾಧಾನ ಪಟ್ಟಿದ್ದಾರೆ. ಈ ಸಾಧನೆಯೊಂದಿಗೆ ಟೆನಿಸ್ ದಂತಕತೆ ಪೀಟ್ ಸಾಂಪ್ರಾಸ್ ಅವರ ದಾಖಲೆಯೊಂದನ್ನು ಮುರಿದರು. ವರ್ಷಾಂತ್ಯದಲ್ಲಿ ಆರು ಬಾರಿ ವಿಶ್ವದ ನಂ.1 ಆಟಗಾರನಾಗಿದ್ದ ಸಾಂಪ್ರಾಸ್ ದಾಖಲೆಯನ್ನು ಸರಿಗಟ್ಟಿದ್ದ 34ರ ಹರೆಯದ ಜೊಕೊವಿಕ್ ಪ್ಯಾರಿಸ್ ಮಾಸ್ಟರ್ಸ್ ಫೈನಲ್‌ಗೆ ತಲುಪುವ ಮೂಲಕ ವರ್ಷದ ಕೊನೆಯಲ್ಲಿ ಮತ್ತೊಮ್ಮೆ ವಿಶ್ವದ ಅಗ್ರಮಾನ್ಯ ಆಟಗಾರನಾಗಿ ಹೊರಹೊಮ್ಮಿದರು. ಪ್ಯಾರಿಸ್ ಮಾಸ್ಟರ್ಸ್ ಫೈನಲ್‌ನಲ್ಲಿ ಜೊಕೊವಿಕ್ ಪೊಲ್ಯಾಂಡ್‌ನ ಹ್ಯೂಬರ್ಟ್ ಹುರ್ಕಾಝ್‌ರನ್ನು 3-6, 6-0, 7-6(7/5) ಅಂತರದಿಂದ ಸೋಲಿಸಿದರು.

ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ಅವರು ತನ್ನ ಗ್ರಾನ್‌ಸ್ಲಾಮ್ ಕನಸನ್ನು ಭಗ್ನಗೊಳಿಸಿದ ಬಳಿಕ ಜೊಕೊವಿಕ್ 7 ವಾರ ವಿರಾಮ ಪಡೆದಿದ್ದರು.

ವರ್ಷಾಂತ್ಯದಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡು ದಾಖಲೆ ಮುರಿಯುವ ಉದ್ದೇಶದಿಂದಲೇ ಈ ವಾರ ಟೆನಿಸ್‌ಗೆ ವಾಪಸಾಗಿದ್ದೇನೆ ಎಂದು 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಹೇಳಿದ್ದಾರೆ. ‘‘ದಾಖಲೆ ಮುರಿಯುವುದು ನನ್ನ ಕನಸಾಗಿತ್ತು. ನಾನು ಬಾಲಕನಾಗಿದ್ದಾಗ ಪೀಟ್ ನನ್ನ ರೋಲ್ ಮಾಡಲ್ ಆಗಿದ್ದರು. ಈ ಕ್ಷಣ ಆಗಮಿಸಲು ಕೇವಲ ನನ್ನ ಸಾಧನೆ ಮಾತ್ರವಲ್ಲ, ನನ್ನ ತಂಡದ ಸಾಧನೆಯೂ ಕಾರಣ. ಎಂದು ಜೊಕೊವಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News