ವಿಶ್ವಕಪ್: ನಮೀಬಿಯ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ದುಬೈ: ಸ್ಪಿನ್ನರ್ ಗಳಾದ ರವೀಂದ್ರ ಜಡೇಜ(3-16) ಹಾಗೂ ಆರ್.ಅಶ್ವಿನ್(3-20), ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ(2-19) ಅವರ ಶಿಸ್ತುಬದ್ಧ ಬೌಲಿಂಗ್, ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ(56, 37 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಕೆ.ಎಲ್.ರಾಹುಲ್( ಔಟಾಗದೆ 54, 36 ಎಸೆತ, 4 ಬೌಂಡರಿ,2 ಸಿಕ್ಸರ್)ಅರ್ಧಶತಕದ ನೆರವಿನಿಂದ ಭಾರತವು ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12ರ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ನಮೀಬಿಯವನ್ನು 9 ವಿಕೆಟ್ ಗಳ ಅಂತರದಿಂದ ಸೋಲಿಸಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ನಮೀಬಿಯವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ನಮೀಬಿಯ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಗೆಲ್ಲಲು ಸುಲಭ ಸವಾಲು ಪಡೆದ ಭಾರತವು 15.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ರೋಹಿತ್ ಹಾಗೂ ರಾಹುಲ್ 9.5ನೇ ಓವರ್ ನಲ್ಲಿ 86 ರನ್ ಜೊತೆಯಾಟ ನಡೆಸಿ ಉತ್ತಮ ಬುನಾದಿ ಹಾಕಿಕೊಟ್ಟರು.
ರೋಹಿತ್ ಔಟಾದ ಬಳಿಕ ಕ್ರೀಸಿಗಿಳಿದ ಸೂರ್ಯಕುಮಾರ್ ಯಾದವ್(ಔಟಾಗದೆ 25, 19 ಎಸೆತ, 4 ಬೌಂಡರಿ) ಹಾಗೂ ರಾಹುಲ್ ಗೆಲುವಿನ ವಿಧಿವಿಧಾನ ಪೂರೈಸಿದರು.
ಭಾರತವು ಗ್ರೂಪ್-2ರಲ್ಲಿ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸೋತ ಬಳಿಕ ಅಫ್ಘಾನಿಸ್ತಾನ,ಸ್ಕಾಟ್ಲೆಂಡ್ ಹಾಗೂ ನಮೀಬಿಯ ವಿರುದ್ಧ ಸತತ ಮೂರು ಗೆಲುವು ಸಾಧಿಸಿದರೂ ಸೆಮಿ ಫೈನಲ್ ತಲುಪಲಾಗದೇ ಬರಿಗೈಯಲ್ಲಿ ವಾಪಸ್ ಆಗುತ್ತಿದೆ. ಭಾರತವು ಗ್ರೂಪ್ 2ರ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ಬಳಿಕ 3ನೇ ಸ್ಥಾನದಲ್ಲಿದೆ.