ವಿತ್ತೀಯ ಒಳಗೊಳ್ಳುವಿಕೆ ಮಾನದಂಡಗಳಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ: ಎಸ್‌ಬಿಐ ವರದಿ

Update: 2021-11-09 15:22 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ನ.9: ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ಹೆಚ್ಚಳ ಮತ್ತು ಬ್ಯಾಂಕ್ ಶಾಖೆಗಳು ಹೆಚ್ಚುತ್ತಿರುವುದರೊಂದಿಗೆ ವಿತ್ತೀಯ ಒಳಗೊಳ್ಳುವಿಕೆ ಮಾನದಂಡಗಳಲ್ಲಿ ಭಾರತವೀಗ ಚೀನಾವನ್ನು ಹಿಂದಿಕ್ಕಿದೆ. 2015ರಲ್ಲಿ ಪ್ರತಿ 1,000 ವಯಸ್ಕರಿಗೆ 183ರಷ್ಟಿದ್ದ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳ ಸಂಖ್ಯೆ 2020ರಲ್ಲಿ 13,615ಕ್ಕೇರಿದೆ ಮತ್ತು 2015ರಲ್ಲಿ ಪ್ರತಿ ಒಂದು ಲಕ್ಷ ವಯಸ್ಕರಿಗೆ 13.6 ಬ್ಯಾಂಕ್ ಶಾಖೆಗಳಿದ್ದರೆ ಅದು 2020ರಲ್ಲಿ 14.7ಕ್ಕೆ ಏರಿಕೆಯಾಗಿದೆ. 

ಇದು ಜರ್ಮನಿ,ಚೀನಾ ಮತ್ತು ದ.ಆಫ್ರಿಕಾಗಿಂತಲೂ ಹೆಚ್ಚು ಎಂದು ಎಸ್ಬಿಐ ನೋಟು ನಿಷೇಧಕ್ಕೆ ಐದು ವರ್ಷಗಳು ತುಂಬಿದ ಸಂದರ್ಭದಲ್ಲಿ ಬಿಡುಗಡೆಗೊಳಿಸಿರುವ ತನ್ನ ವರದಿಯಲ್ಲಿ ಹೇಳಿದೆ. ಹೆಚ್ಚಿನ ವಿತ್ತೀಯ ಒಳಗೊಳ್ಳುವಿಕೆ/ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಅಪರಾಧಗಳಲ್ಲಿ ಹಾಗೂ ಮದ್ಯ ಮತ್ತು ತಂಬಾಕು ಸೇವನೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಎಸ್‌ಬಿಐ ನ ಗ್ರೂಪ್ ಚೀಫ್ ಇಕನಾಮಿಕ್ ಅಡ್ವೈಸರ್ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯು ತಿಳಿಸಿದೆ.

ವಿತ್ತೀಯ ಒಳಗೊಳ್ಳುವಿಕೆ ಅಭಿಯಾನದಡಿ ಕಳೆದ ಏಳು ವರ್ಷಗಳಲ್ಲಿ ಹೆಚ್ಚುವರಿ ಸೌಲಭ್ಯರಹಿತ ಖಾತೆಗಳ ಯೋಜನೆಯಡಿ ತೆರೆಯಲಾದ ಖಾತೆಗಳ ಸಂಖ್ಯೆಯು 43.7 ಕೋ.ಗೆ ತಲುಪಿದ್ದು,2021,ಅ.20ಕ್ಕೆ ಇದ್ದಂತೆ ಒಟ್ಟು 1.46 ಲ.ಕೋ.ರೂ.ಠೇವಣಿಯನ್ನು ಹೊಂದಿವೆ. ಈ ಪೈಕಿ ಸುಮಾರು ಮೂರನೇ ಎರಡರಷ್ಟು ಖಾತೆಗಳು ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿವೆ. ಶೇ.78ಕ್ಕೂ ಅಧಿಕ ಖಾತೆಗಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿದ್ದರೆ,ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಶೇ.18.2ರಷ್ಟು ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಕೇವಲ ಶೇ.3ರಷ್ಟು ಖಾತೆಗಳಿವೆ.

ಈ ಅವಧಿಯಲ್ಲಿ ಮಾರ್ಚ್ 2010ರಲ್ಲಿ 33,378ರಷ್ಟಿದ್ದ ಗ್ರಾಮೀಣ ಪ್ರದೇಶಗಳಲ್ಲಿಯ ಬ್ಯಾಂಕ್ ಶಾಖೆಗಳ ಸಂಖ್ಯೆ ಡಿಸೆಂಬರ್ 2020ರಲ್ಲಿ 55,073ಕ್ಕೆ ಏರಿದೆ. ಗ್ರಾಮೀಣ ಪ್ರದೇಶಗಳಲ್ಲಿಯ ಬ್ಯಾಂಕಿಂಗ್ ಔಟ್‌ಲೆಟ್‌ಗಳು/ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಸಂಖ್ಯೆಯು 2020 ಮಾರ್ಚ್‌ನಲ್ಲಿ 34,174 ಇದ್ದುದು 2020 ಡಿಸೆಂಬರ್‌ನಲ್ಲಿ 12.4 ಲ.ಕ್ಕೆ ಜಿಗಿದಿದೆ.

ಈ ಅವಧಿಯಲ್ಲಿ ಪ್ರತಿ ಒಂದು ಲಕ್ಷ ವಯಸ್ಕರಿಗೆ ವಾಣಿಜ್ಯ ಬ್ಯಾಂಕ್ ಶಾಖೆಗಳ ಸಂಖ್ಯೆ 13.5ರಿಂದ 14.7ಕ್ಕೆ ಮತ್ತು ಬ್ಯಾಂಕುಗಳಲ್ಲಿಯ ಠೇವಣಿ ಖಾತೆಗಳ ಸಂಖ್ಯೆ 1,536ರಿಂದ 2031ಕ್ಕೆ ಹಾಗೂ ಸಾಲಖಾತೆಗಳ ಸಂಖ್ಯೆ 154ರಿಂದ 267ಕ್ಕೆ ಏರಿಕೆಯಾಗಿವೆ. ವಿತ್ತೀಯ ಒಳಗೊಳ್ಳುವಿಕೆಯ ಹೆಚ್ಚಿನ ಹೆಗ್ಗಳಿಕೆ 2016 ಜನವರಿಯಲ್ಲಿ ಶಾಖೆರಹಿತ ಬ್ಯಾಂಕಿಂಗ್ ನ  ಬಿಸಿನೆಸ್ ಕರೆಸ್ಪಾಂಡೆಂಟ್ ಮಾದರಿಗೆ ಅವಕಾಶ ಕಲ್ಪಿಸಿದ್ದ ಆರ್ಬಿಐಗೆ ಸೇರಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News