ಅಫೀಮಿನಂಥ ನೋವು ನಿವಾರಕ ಗುಳಿಗೆ ಮಾರಾಟ: ಜಾನ್ಸನ್ ಕಂಪೆನಿಯ ದಂಡ ರದ್ದುಪಡಿಸಿದ ಓಕ್ಲಹೋಮ ಸುಪ್ರೀಮ್ ಕೋರ್ಟ್

Update: 2021-11-10 15:15 GMT

ನ್ಯೂಯಾರ್ಕ್, ನ. 10: ಓಪಿಯಾಯ್ಡ್ ಬಿಕ್ಕಟ್ಟಿನಲ್ಲಿ (ನೋವು ನಿವಾರಕ ಗುಳಿಗೆಗಳ ಅತಿ ಮಾರಾಟದಿಂದ ಜನರಲ್ಲಿ ಉದ್ಭವಿಸಿದ ಆರೋಗ್ಯ ಸಮಸ್ಯೆ) ವಹಿಸಿದ ಪಾತ್ರಕ್ಕಾಗಿ ಅಮೆರಿಕದ ಔಷಧ ತಯಾರಿಕಾ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ಗೆ 465 ಮಿಲಿಯ ಡಾಲರ್ (ಸುಮಾರು 3,450 ಕೋಟಿ ರೂಪಾಯಿ) ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ಓಕ್ಲಹೋಮ ರಾಜ್ಯದ ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಓಪಿಯಾಯ್ಡ್ ಬಿಕ್ಕಟ್ಟು ನಿವಾರಣೆಯ ನಿಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕ್ರಮಗಳಿಗೆ ಈ ದಂಡದ ಮೊತ್ತವನ್ನು ನೀಡಬೇಕು ಎಂಬುದಾಗಿ 2019ರಲ್ಲಿ ನ್ಯಾಯಾಧೀಶರೊಬ್ಬರು ಆದೇಶ ನೀಡಿದ್ದರು.
ಒಪಿಯಾಯ್ಡ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ 20 ವರ್ಷಗಳಲ್ಲಿ 5 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿವೆ.
ತನ್ನ ಈ ನೋವು ನಿವಾರಕ ಗುಳಿಗೆಗಳ ಮಾರಾಟದ ಮೂಲಕ ಕಂಪೆನಿಯು ‘ಸಾರ್ವಜನಿಕರಿಗೆ ಉಪದ್ರವ’ ನೀಡಿತ್ತು ಎಂದು ಹೇಳಿದ್ದ ನ್ಯಾಯಾಧೀಶರು, ‘‘ಅದು ವಂಚಕ ಮಾರುಕಟ್ಟೆ ವಿಧಾನಗಳ ಮೂಲಕ ತನ್ನ ಅಫೀಮಿನಂಥ ನೋವು ನಿವಾರಕ ಗುಳಿಗೆಗಳನ್ನು ಮಾರಾಟ ಮಾಡಿತ್ತು’’ ಎಂದಿದ್ದರು.

ಜನರನ್ನು ಈ ಅಫೀಮಿನಂಥ ಗುಳಿಗೆಗಳ ಚಟದಿಂದ ಮುಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳಿಗೆ 17 ಬಿಲಿಯ ಡಾಲರ್ (ಸುಮಾರು 1.26 ಲಕ್ಷ ಕೋಟಿ ರೂಪಾಯಿ) ವೆಚ್ಚವಾಗಿದೆ ಎಂದು ಹೇಳಿದ್ದ ಸರಕಾರವು, ಅಷ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದಿತ್ತು. ಆದರೆ, ನ್ಯಾಯಾಧೀಶರು 465 ಮಿಲಿಯ ಡಾಲರ್ ಪಾವತಿಸುವಂತೆ ಕಂಪೆನಿಗೆ ಆದೇಶ ನೀಡಿದ್ದರು. ಆದೇಶವನ್ನು ಪ್ರಶ್ನಿಸಿ ಕಂಪೆನಿಯು ಮೇಲ್ಮನವಿ ಸಲ್ಲಿಸಿತ್ತು.
ಜಾನ್ಸನ್ ಕಂಪೆನಿಯ ಉತ್ಪನ್ನವನ್ನು ಖಂಡಿಸಲು ನ್ಯಾಯಾಧೀಶರು ಸಾರ್ವಜನಿಕ ಉಪದ್ರವ ಕಾನೂನನ್ನು ಬಳಸಬಾರದಿತ್ತು ಎಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಓಕ್ಲಹೋಮ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಹಾಗೂ ಆದೇಶವನ್ನು ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News