ಅಸ್ಸಾಂ ಭೂಭಾಗದಲ್ಲಿ ಮಿಝೋರಾಂ ಜನರಿಂದ ರಸ್ತೆ ನಿರ್ಮಾಣಕ್ಕೆ ಪೊಲೀಸರ ತಡೆ

Update: 2021-11-11 10:33 GMT
ಸಾಂದರ್ಭಿಕ ಚಿತ್ರ

ಗುವಹಾಟಿ: ಅಸ್ಸಾಂ ರಾಜ್ಯದ ಕಚರ್ ಜಿಲ್ಲೆಯಲ್ಲಿ ಮಿಜೋರಾಂನ ಜನರ ಗುಂಪೊಂದು ರಸ್ತೆ ನಿರ್ಮಿಸುವುದಕ್ಕೆ ಅಸ್ಸಾಂ ಪೊಲೀಸರು ತಡೆ ಹೇರಿದ್ದಾರೆ. ಮಿಝೋರಾಂ ಜನರು ನಿರ್ಮಿಸುತ್ತಿರುವ ರಸ್ತೆ ಅಸ್ಸಾಂ ಭೂಭಾಗದಲ್ಲಿದೆ ಎಂದು ಅಲ್ಲಿನ ಪೊಲೀಸರು ಹೇಳುತ್ತಿದ್ದಾರೆ.

ಅಸ್ಸಾಂನ ಕಚರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳು ಮಿಜೋರಾಂನ ಕೊಲಸಿಬ್, ಐಝ್ವಾಲ್ ಮತ್ತು ಮಮಿತ್ ಗ್ರಾಮಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಎರಡೂ ರಾಜ್ಯಗಳ ಗಡಿಗಳು ಹಲವೆಡೆ ವಿವಾದಿತವಾಗಿವೆ.

ನವೆಂಬರ್ 8ರಂದು ಕಚರ್ ಜಿಲ್ಲೆಯ ನಾಗರಿಕರು, ತಮ್ಮ ರಾಜ್ಯದ ಅರಣ್ಯ ಭಾಗವೊಂದರಲ್ಲಿ ಮಿಝೋರಾಂನ ಕೆಲ ಜನರು ರಸ್ತೆಯನ್ನು ನಿರ್ಮಿಸುವುದನ್ನು ನೋಡಿ ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ಕಾಮಗಾರಿಗೆ ತಡೆ ಹೇರಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣದೀಪ್ ಕೌರ್, ಮಿಜೋರಾಂನ ಜನರು ಅಸ್ಸಾಂ ಭೂಭಾಗದಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ ಎಂದಿದ್ದಾರೆ.

ಜುಲೈ ತಿಂಗಳಲ್ಲಿ ಎರಡೂ ರಾಜ್ಯಗಳ ನಡುವೆ ಏರ್ಪಟ್ಟ ಒಂದು ವಿವಾದ ಹಿಂಸಾ ರೂಪಕ್ಕೆ ತಿರುಗಿ ಅಸ್ಸಾಂನ ಐದು ಪೊಲೀಸ್ ಅಧಿಕಾರಿಗಳು ಮೃತಪಟ್ಟ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಆಗಸ್ಟ್ 5ರಂದು  ಗಡಿ ವಿವಾದಕ್ಕೆ ಪರಿಹಾರಕ್ಕಾಗಿ ಎರಡೂ ರಾಜ್ಯಗಳು ಜಂಟಿ ಹೇಳಿಕೆಗೆ ಸಹಿ ಹಾಕಿದ್ದವು.

ಸೇತುವೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಿನಲ್ಲಿ ಮತ್ತೆ  ವಿವಾದವೇರ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News