ಅಮೆರಿಕ: ಹಿಂದೂ ಸಂಘಟನೆಯ ವಿರುದ್ಧದ ಮೊಕದ್ದಮೆ 5 ರಾಜ್ಯಗಳಿಗೆ ವಿಸ್ತರಣೆ

Update: 2021-11-11 18:27 GMT
Photo: Facebook

ವಾಷಿಂಗ್ಟನ್, ನ.11: ಅಮೆರಿಕದಲ್ಲಿರುವ ಪ್ರಮುಖ ಹಿಂದು ಸಂಘಟನೆಯೊಂದು ಭಾರತದಿಂದ ಕಾರ್ಮಿಕರನ್ನು ಕಳ್ಳಸಾಗಾಣಿಕೆಯ ಮೂಲಕ ಅಮೆರಿಕಕ್ಕೆ ಕರೆಸಿಕೊಂಡು ಹಿಂದು ದೇವಸ್ಥಾನದಲ್ಲಿ ಕೆಲಸ ಮಾಡಲು ಬಲವಂತಪಡಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು 5 ರಾಜ್ಯಗಳಿಗೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ. 

ಬಿಎಪಿಎಸ್ (ಬೊಚಸನ್ವಾಸಿ ಅಕ್ಷರ ಸ್ವಾಮಿನಾರಾಯಣ ಸಂಸ್ಥಾ ) ಎಂಬ ಪ್ರಮುಖ ಹಿಂದು ಸಂಘಟನೆಯು ಭಾರತದಿಂದ ಕೆಳಜಾತಿಯ ಕಾರ್ಮಿಕರನ್ನು ಅಮೆರಿಕಕ್ಕೆ ಕರೆಸಿಕೊಂಡು ದೇಶದಲ್ಲಿರುವ ಹಿಂದು ದೇವಸ್ಥಾನದ ಕೆಲಸಕ್ಕೆ ಬಳಸಿಕೊಂಡು ಅವರನ್ನು ಶೋಷಿಸುತ್ತಿದೆ ಎಂದು ಆರೋಪಿಸಲಾಗಿದೆ. ಕೆಲಸದ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ ಬಳಿಕ ದಿನದ 12 ಗಂಟೆ ದುಡಿಮೆ, ವರ್ಷದಲ್ಲಿ ಕೇವಲ 5 ರಜೆ ನೀಡಲಾಗುತ್ತಿದೆ. 

ನ್ಯೂಜೆರ್ಸಿಯ ರಾಬಿನ್ಸ್ವಿಲೆ ಉಪನಗರದಲ್ಲಿ ಹಿಂದು ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ ಎಂದು 200 ಭಾರತೀಯ ಕಾರ್ಮಿಕರ ಪರವಾಗಿ ಮೇ ತಿಂಗಳಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ಅಮೆರಿಕದಲ್ಲಿ ಕನಿಷ್ಟ ಕೂಲಿ ಗಂಟೆಗೆ 7.25 ಡಾಲರ್, ನ್ಯೂಜೆರ್ಸಿ ರಾಜ್ಯದಲ್ಲಿ ಗಂಟೆಗೆ 12 ಡಾಲರ್ ನಿಗದಿಯಾಗಿದ್ದರೂ ತಮಗೆ ಗಂಟೆಗೆ ಕೇವಲ 1.20 ಡಾಲರ್ ಹಣ ನೀಡಲಾಗುತ್ತಿದೆ ಎಂದು ದೂರಲಾಗಿತ್ತು. 

ಬಳಿಕ ಈ ದೂರಿಗೆ ಕ್ಯಾಲಿಫೋರ್ನಿಯಾದ ಚಿನೊ ಹಿಲ್ಸ್, ಚಿಕಾಗೋದ ಬಾರ್ಟ್ಲೆಟ್, ಟೆಕ್ಸಾಸ್ನ ಸ್ಟಫರ್ಡ್, ಜಾರ್ಜಿಯಾದ ಲಿಲ್ಬರ್ನ್ ನಗರದ ಹಿಂದು ದೇವಸ್ಥಾನಗಳ ಪ್ರಕರಣವನ್ನು ಸೇರಿಸಲಾಗಿದೆ. ಭಾರತದಲ್ಲಿನ ದುರ್ಬಲ ವರ್ಗದ ಸಮುದಾಯದ, ವಿಶೇಷವಾಗಿ ದಲಿತರು ಮತ್ತು ಆದಿವಾಸಿ ಸಮುದಾಯದ ಕಾರ್ಮಿಕರನ್ನು ಬಿಎಪಿಎಸ್ ಶೋಷಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ್ಯೂಜೆರ್ಸಿಯಲ್ಲಿ ಕಚೇರಿ ಹೊಂದಿರುವ ಬಿಎಪಿಎಸ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಜತೆ ನಿಕಟ ಸಂಬಂಧ ಹೊಂದಿದ್ದು ವಿಶ್ವದಾದ್ಯಂತ ಹಿಂದು ದೇವಸ್ಥಾನಗಳ ನಿರ್ಮಾಣದ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News