ಸ್ಪೀಕರ್ ಕಾಗೇರಿಗಾಗಿ ಕಾದು ಕುಳಿತು ವಾಪಸ್ ಆದ ಶಾಸಕ ಶ್ರೀನಿವಾಸಮಾನೆ, ಡಿ.ಕೆ.ಶಿವಕುಮಾರ್

Update: 2021-11-12 12:31 GMT

ಬೆಂಗಳೂರು, ನ. 11: ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕಾರಕ್ಕಾಗಿ ವಿಧಾನಸಭಾ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಾಗಿ ಶಾಸಕ ಮಾನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಖಂಡರು ಗಂಟೆಗಟ್ಟಲೆ ಕಾದು ಕುಳಿತ ಪ್ರಸಂಗ ನಡೆಯಿತು.

ಗುರುವಾರ ಇಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶ್ರೀನಿವಾಸ ಮಾನೆ ಹಾಗೂ ರಮೇಶ್ ಬೂಸನೂರ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಪ್ರಮಾಣ ವಚನ ಸ್ವೀಕಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಗಮನ ವಿಳಂಬದ ಹಿನ್ನೆಲೆಯಲ್ಲಿ 12 ಗಂಟೆಗೆ ಸಯಮ ಮರುನಿಗದಿ ಮಾಡಿ ಸ್ಪೀಕರ್ ಹೊರಟು ಹೋದರು.

ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೂತನ ಶಾಸಕ ಶ್ರೀನಿವಾಸ್ ಮಾನೆ, ಶಾಸಕ ರಿಝ್ವಾನ್ ಅರ್ಶದ್ ಸೇರಿದಂತೆ ಕಾಂಗ್ರೆಸ್ ನಾಯಕರು ಮಾನೆ ಪ್ರಮಾಣ ವಚನ ಸ್ವೀಕಾರಕ್ಕಾಗಿ ಸ್ಪೀಕರ್ ಕಚೇರಿಯಲ್ಲಿ ಗಂಟೆಗೂ ಹೆಚ್ಚು ಕಾಲ ಕಾದು ಕುಳಿತರೂ ಸ್ಪೀಕರ್ ಕಾಗೇರಿ ಅವರು ಮಾತ್ರ ಕಚೇರಿಗೆ ಆಗಮಿಸಲೇ ಇಲ್ಲ. ಇದರಿಂದಾಗಿ ಕಾಂಗ್ರೆಸ್ ನಾಯಕರು ತೀವ್ರ ಮುಜುಗರ ಅನುಭವಿಸಬೇಕಾಯಿತು.

ಅನಂತರ ಸ್ಪೀಕರ್ ಅವರಿಗೆ ಕರೆ ಮಾಡಿದ ಡಿ.ಕೆ.ಶಿವಕುಮಾರ್, `ಐದು ನಿಮಿಷ ಬಂದು ಪ್ರಮಾಣ ವಚನ ಮುಗಿಸಿ' ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, `ಬೇರೆಯವರಿಗೆ ಸಮಯ ಕೊಟ್ಟಿದ್ದೇನೆ' ಎಂದು ಉತ್ತರಿಸಿದರು. ಅದಕ್ಕೆ `ನಿಮ್ಮಿಷ್ಟ ನೋಡಿ' ಎಂದು ಡಿಕೆಶಿ ತಿಳಿಸಿದರು. ಈ ವೇಳೆ ಶಿವಕುಮಾರ್ ಅವರು ಸ್ಪೀಕರ್ ಕಚೇರಿಯಲ್ಲಿ ಹಾಕಿದ್ದ `ಪರಿವರ್ತನೆ ಜಗದ ನಿಯಮ'. `ಆದೆದ್ದಲ್ಲಾ ಒಳ್ಳೆಯದಕ್ಕೇ ಆಗಿದೆ, ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ. ಮುಂದೆ ಆಗಲಿರುವುದು ಒಳ್ಳೆಯದೇ ಆಗಲಿದೆ' ಎನ್ನುವ ಗೀತೆಯ ಸಾರಾಂಶವನ್ನು ಓದಿ ಶಾಸಕ ಶ್ರೀನಿವಾಸ ಮಾನೆ ಅವರಿಗೆ ವಿವರಿಸಿದರು.

ಕೊನೆಗೆ ಕಾದು ಕಾದು ಬೇಸತ್ತು, ಸ್ಪೀಕರ್ ಕಾಗೇರಿ ಅವರಿಗೆ ಕರೆ ಮಾಡಿ ಕೇಳುವಂತೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಆ ವೇಳೆ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿದ್ದು, ಈಗ ಪ್ರಮಾಣ ವಚನ ಸ್ವೀಕಾರ ಮಾಡಲು ಆಗುವುದಿಲ್ಲ. ಮುಂದೆ ಸೂಕ್ತ ಸಮಯ ನಿಗದಿ ಮಾಡುತ್ತೇನೆಂದು ಕಾರ್ಯದರ್ಶಿ ವಿಶಾಲಾಕ್ಷಿಗೆ ಹೇಳಿದರು. ಆ ಬಳಿಕ `ಬಂದ ದಾರಿಗೆ ಸುಂಕ ಇಲ್ಲ' ಎಂಬಂತೆ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಿರಿಯ ಮುಖಂಡ ಐವಾನ್ ಡಿಸೋಜಾ ಸೇರಿದಂತೆ ಇನ್ನಿತರು ವಾಪಸ್ ಹೊರಟರು.

ಸ್ಪೀಕರ್ ವರ್ತನೆಗೆ ಬೇಸರ: `ಸ್ಪೀಕರ್ ಕಾಗೇರಿ ಅವರು ನೂತನ ಶಾಸಕ ಶ್ರೀನಿವಾಸ ಮಾನೆ ಅವರ ಪ್ರಮಾಣ ವಚನಕ್ಕೆ ಇಂದು ಬೆಳಗ್ಗೆ 11 ಗಂಟೆಗೆ ಸಮಯ ನೀಡಿದ್ದರು. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ನಾನು ಬರುವುದು 5 ನಿಮಿಷ ತಡವಾಯಿತು, ನಮ್ಮದು ತಪ್ಪಿದೆ. ಆದರೆ, ಅವರ ಸ್ವಲ್ಪ ಸಮಯಾವಕಾಶ ನೀಡಬಹುದಾಗಿತ್ತು. ಸ್ಪೀಕರ್ ಅವರು ಬಹಳ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಬೇರೆ ಕಾರ್ಯಕ್ರಮ ಇದೆ ಎಂದು 12 ಗಂಟೆಗೆ ಸಮಯ ನಿಗದಿ ಮಾಡಿ ಹೊರಟರು. ನಾವು ಸ್ಪೀಕರ್ ಅವರಿಗೆ ಗೌರವ ಕೊಡಬೇಕು, ಕೊಡುತ್ತಿದ್ದೇವೆ. ಒಂದೂವರೆ ಗಂಟೆಯಿಂದ ನಾವು ಕಾಯುತ್ತಿದ್ದೇವೆ' ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

`ನಮಗೆ ಸ್ಪೀಕರ್ ಕಾಗೇರಿ ಅವರ ಭಾವನೆಯೂ ಅರ್ಥವಾಗುತ್ತದೆ. ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿನ ಸೋಲಿನ ಆಕ್ರೋಶವನ್ನು ಸ್ಪೀಕರ್ ಕಾಗೇರಿ ಅವರು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅವರು ಯಾವಾಗ ಸಮಯ ನಿಗದಿ ಮಾಡುತ್ತಾರೋ ಮಾಡಲಿ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಇರಲಿ, ಇಲ್ಲಿ ರಾಜಕಾರಣ ಮಾತನಾಡುವುದು ಬೇಡ' ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ತಡವಾಗಿ ಬರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರಾ ಎಂಬ ಪ್ರಶ್ನೆಗೆ, `ಖಂಡಿತವಾಗಿ ನಾವು ಮಾಹಿತಿ ನೀಡಿದ್ದೆವು. ಅವರು ಶಿಸ್ತುಬದ್ಧ, ಸಂವಿಧಾನಬದ್ಧವಾಗಿ ವಿಧಾನ ಮಂಡಲ ಅಧಿವೇಶನ ನಡೆಸಿಕೊಂಡು ಬಂದಿದ್ದಾರೆ. ನಾವು ಧರಣಿ ಮಾಡಬಹುದು, ಆದರೆ, ನಾವು ತಾಳ್ಮೆಯಿಂದ ಅನುಸರಿಸಿಕೊಂಡು ಹೋಗುತ್ತೇವೆ' ಎಂದು ಶಿವಕುಮಾರ್, ಸ್ಪೀಕರ್ ಕಾಗೇರಿ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News