ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್ ಗೂ ಮುನ್ನ 2 ದಿನ ಆಸ್ಪತ್ರೆಯ ಐಸಿಯುನಲ್ಲಿದ್ದ ಮುಹಮ್ಮದ್ ರಿಝ್ವಾನ್
ದುಬೈ: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ರಿಝ್ವಾನ್ ಎದೆಯ ಸೋಂಕಿನಿಂದಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಎರಡು ದಿನಗಳನ್ನು ಕಳೆದಿದ್ದರೂ ಗುರುವಾರದ ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ 67 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು ಎಂದು ತಂಡದ ವೈದ್ಯರು ತಿಳಿಸಿದ್ದಾರೆ.
ಮುಹಮ್ಮದ್ ರಿಝ್ವಾನ್ ಹಾಗೂ ಅನುಭವಿ ಆಲ್ ರೌಂಡರ್ ಶುಐಬ್ ಮಲಿಕ್ ಜ್ವರದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವಾಗಿತ್ತು.
"ಮುಹಮ್ಮದ್ ರಿಝ್ವಾನ್ ಅವರು ನವೆಂಬರ್ 9 ರಂದು ತೀವ್ರ ಎದೆಯ ಸೋಂಕನ್ನು ಹೊಂದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚೇತರಿಸಿಕೊಳ್ಳಲು ಐಸಿಯುನಲ್ಲಿ ಎರಡು ರಾತ್ರಿಗಳನ್ನು ಕಳೆದಿದ್ದರು" ಎಂದು ಆಸ್ಟ್ರೇಲಿಯ ವಿರುದ್ಧ 5 ವಿಕೆಟ್ ಅಂತರದಿಂದ ಸೋತ ನಂತರ ಪಾಕಿಸ್ತಾನದ ತಂಡದ ವೈದ್ಯ ನಜೀಬ್ ಸೋಮ್ರೂ ಹೇಳಿದ್ದಾರೆ.
"ಅವರು ಬೇಗನೆ ಚೇತರಿಸಿಕೊಂಡರು ಮತ್ತು ಪಂದ್ಯದ ಮೊದಲು ಫಿಟ್ ಎಂದು ಪರಿಗಣಿಸಲ್ಪಟ್ಟರು. ಈ ವಿಚಾರದಲ್ಲಿ ಅವರ ಮಹಾನ್ ನಿರ್ಣಯ ಹಾಗೂ ದೃಢತೆಯನ್ನು ನಾವು ನೋಡಬಹುದು. ಅದು ದೇಶಕ್ಕಾಗಿ ಪ್ರದರ್ಶನ ನೀಡುವ ಅವರ ಮನೋಭಾವವನ್ನು ತೋರಿಸುತ್ತದೆ. ಅವರ ಆರೋಗ್ಯದ ಬಗ್ಗೆ ನಿರ್ಧಾರವನ್ನು ಇಡೀ ತಂಡದ ಆಡಳಿತವು ತೆಗೆದುಕೊಂಡಿದೆ. ಇದು ಇಡೀ ತಂಡದ ನೈತಿಕತೆಗೆ ಸಂಬಂಧಿಸಿದೆ ಮತ್ತು ಆದ್ದರಿಂದ ನಾವು ಆ ವಿಚಾರ ತಂಡದೊಳಗೆ ಇರಿಸಿದ್ದೇವೆ’’ ಎಂದರು.
52 ಎಸೆತಗಳಲ್ಲಿ 67 ರನ್ ಗಳಿಸಿದ್ದ ರಿಝ್ವಾನ್ ಅವರು ಫಖರ್ ಝಮಾನ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ ಪಾಕಿಸ್ತಾನವು ನಾಲ್ಕು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲು ನೆರವಾದರು.