×
Ad

'ಕಂಗನಾ ರಣಾವತ್‌ರನ್ನು ಬಂಧಿಸಿ, ಪದ್ಮಶ್ರೀ ವಾಪಸ್ ಪಡೆಯಬೇಕು’: ಕಾಂಗ್ರೆಸ್,ಎನ್ ಸಿಪಿ ಒತ್ತಾಯ

Update: 2021-11-12 13:55 IST

ಹೊಸದಿಲ್ಲಿ: ನಟಿ ಕಂಗನಾ ರಣಾವತ್ ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಹಾಗೂ  ಆಕೆಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸಬೇಕು ಎಂದು ಹಲವಾರು ರಾಜಕೀಯ ಪಕ್ಷಗಳು ಒತ್ತಾಯಿಸಿವೆ.

 2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು  ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸಿದ್ದ ರಣಾವತ್  1947 ಸ್ವಾತಂತ್ರ್ಯವು ಭಿಕ್ಷೆ ಆಗಿತ್ತು ಎಂದು ಹೇಳುವುದರೊಂದಿಗೆ ವಿವಾದ ಸೃಷ್ಟಿಸಿದ್ದರು.

"ರಣಾವತ್ ಗೆ ನೀಡಲಾದ ಪದ್ಮ ಪ್ರಶಸ್ತಿಯನ್ನು ತಕ್ಷಣವೇ ಹಿಂಪಡೆಯಬೇಕು. ಅಂತಹ ಪ್ರಶಸ್ತಿಗಳನ್ನು ನೀಡುವ ಮೊದಲು ಮಾನಸಿಕ ಮೌಲ್ಯಮಾಪನವನ್ನು ಮಾಡಬೇಕು. ಹೀಗೆ ಮಾಡಿದರೆ ಭವಿಷ್ಯದಲ್ಲಿ ಅಂತಹ ವ್ಯಕ್ತಿಗಳು ರಾಷ್ಟ್ರ ಹಾಗೂ  ರಾಷ್ಟ್ರದ ವೀರರನ್ನು ಅಗೌರವಗೊಳಿಸುವುದಿಲ್ಲ" ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವಿಟರ್‌ನಲ್ಲಿ ಹೇಳಿದ್ದಾರೆ.  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಕಂಗನಾ ರಣಾವತ್  ಹೇಳಿಕೆಯನ್ನು ನಾಚಿಕೆಗೇಡಿನ ಮತ್ತು ಆಘಾತಕಾರಿ ಎಂದು ಕರೆದಿರುವ ಶರ್ಮಾ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ  ಸರ್ದಾರ್ ವಲಭಭಾಯಿ ಪಟೇಲ್  ಅವರನ್ನು ಆಕೆ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಝಾದ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕುಗ್ಗಿಸಿದ್ದಾರೆ ಎಂದರು. 

ನಟಿ ಕಂಗನಾ ಡ್ರಗ್ಸ್ ಸೇವಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿವಾದಾತ್ಮಕ  ಹೇಳಿಕೆ ನೀಡಿದರು.

"ಕಂಗನಾ ಅಂತಹ ಹೇಳಿಕೆ ನೀಡುವ ಮೊದಲು ಮಲಾನಾ ಕ್ರೀಮ್ (ವಿವಿಧ ಹಶಿಶ್) ಅನ್ನು ಭಾರೀ ಪ್ರಮಾಣದಲ್ಲಿ ತೆಗೆದುಕೊಂಡಂತೆ ಕಾಣುತ್ತಿದೆ" ಎಂದು ಸಚಿವರು ಟೀಕಿಸಿದ್ದಾರೆ.

"ನಟಿ ಕಂಗನಾ ರಣಾವತ್  ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಕೆಯು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರ ಸರಕಾರವು ಕಂಗನಾ ರಿಂದ ಪದ್ಮಶ್ರೀಯನ್ನು ಹಿಂಪಡೆಯಬೇಕು ಹಾಗೂ  ಆಕೆಯನ್ನು ಬಂಧಿಸಬೇಕು" ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಹೇಳಿದ್ದಾರೆ.

ಬಿಜೆಪಿ ಸಂಸದ ವರುಣ್ ಗಾಂಧಿ,  ರಣಾವತ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News