"ಅವರ ತಪ್ಪೇನಿದೆ?": ತಬ್ಲೀಗಿ ಜಮಾಅತ್ ಸದಸ್ಯರಿಗೆ ಆಶ್ರಯ ನೀಡಿದವರ ಕುರಿತು ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2021-11-13 06:08 GMT

ಹೊಸದಿಲ್ಲಿ: ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ದಿಲ್ಲಿಯಲ್ಲಿ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ವಿದೇಶೀಯರಿಗೆ ಅನುಕೂಲ ಕಲ್ಪಿಸಿದ ಕೆಲ ಭಾರತೀಯ ನಾಗರಿಕರು ಏನು ತಪ್ಪು ಮಾಡಿದ್ದಾರೆ ಎಂದು ದಿಲ್ಲಿ ಹೈಕೋರ್ಟ್ ಇಂದು ನಗರದ ಪೊಲೀಸರನ್ನು ಪ್ರಶ್ನಿಸಿದೆ. ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ  ಜನರು ಉಳಿದುಕೊಳ್ಳುವುದಕ್ಕೆ ಸರಕಾರ ಯಾವುದೇ ನಿಷೇಧ ಹೇರಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಬ್ಲೀಗಿ ಕಾರ್ಯಕ್ರಮದ ಆಯೋಜಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆ ವೇಳೆ ಜಸ್ಟಿಸ್ ಮುಕ್ತಾ ಗುಪ್ತಾ ಮೇಲಿನಂತೆ ಹೇಳಿದ್ದಾರೆ. ಲಾಕ್ ಡೌನ್ ಜಾರಿಯಾದಾಗ ಜಮಾಅತ್‌ನಲ್ಲಿ ಭಾಗವಹಿಸಿದವರು ಆಶ್ರಯ ಕೋರಿದ್ದರು ಹಾಗೂ ಲಾಕ್‌ಡೌನ್ ಆದೇಶಗಳನ್ನು ಉಲ್ಲಂಘಿಸಿದ್ದಾರೆಂಬುದಕ್ಕೆ ಯಾವುದೇ ಆರೋಪಗಳಿರಲಿಲ್ಲ ಎಂದರು.

"ದಿಢೀರ್ ಎಂದು ಲಾಕ್‌ಡೌನ್ ಜಾರಿಯಾದಾಗ ಅವರು ಎಲ್ಲಿಗೆ ಹೋಗುವುದು? ಏನು  ತಪ್ಪು ಮಾಡಿದ್ದಾರೆ. ಮಧ್ಯ ಪ್ರದೇಶದ ನಿವಾಸಿಗಳು ದಿಲ್ಲಿಯಲ್ಲಿ, ಯಾವುದೇ ಮಸೀದಿ, ದೇವಸ್ಥಾನ ಅಥವಾ ಗುರುದ್ವಾರದಲ್ಲಿ ವಾಸಿಸುವುದಕ್ಕೆ ನಿಷೇಧವಿದೆಯೇ? ಅವರಿಗೆಲ್ಲಿ ಬೇಕೋ ಅಲ್ಲಿ ಉಳಿದುಕೊಳ್ಳಬಹುದು. ಎಲ್ಲಿ ಉಳಿದುಕೊಂಡಿದ್ದರೂ ಅಲ್ಲಿಂದ ಹೊರಹಾಕಲಾಗುವುದು ಎಂದು  ನೋಟಿಸ್ ಜಾರಿಗೊಳಿಸಲಾಗಿತ್ತೇ?,'' ಎಂದು ಪ್ರಶ್ನಿಸಿದ ನ್ಯಾಯಾಧೀಶರು ದಿಲ್ಲಿ ಪೊಲೀಸರಿಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶವನ್ನು ಅವರ ವಕೀಲರ ಕೋರಿಕೆಯಂತೆ ನೀಡಿದರು.

ಎಫ್‌ಐಆರ್ ಅಥವಾ ಚಾರ್ಜ್ ಶೀಟ್‌ನಲ್ಲಿ ತಮಗೆ ಕೋವಿಡ್ ಸೋಂಕು ತಗಲಿತ್ತು ಅಥವಾ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News