ಹಿಂದುತ್ವವನ್ನು ಐಸಿಸ್‌ಗೆ ಹೋಲಿಸಿರುವ ಖುರ್ಷಿದ್ ಕೃತಿಯ ನಿಷೇಧ ಕೋರಿ ನ್ಯಾಯಾಲಯದಲ್ಲಿ ದಾವೆ
ಹೊಸದಿಲ್ಲಿ,ನ.13: ಸಮಾಜದ ದೊಡ್ಡ ವರ್ಗವೊಂದರ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎನ್ನಲಾಗಿರುವ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ‘ಸನ್‌ರೈಸ್ ಓವರ್ ಅಯೋಧ್ಯಾ:ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಕೃತಿಯ ಪ್ರಕಟಣೆ,ಪ್ರಸಾರ ಮತ್ತು ಮಾರಾಟವನ್ನು ನಿಷೇಧಿಸುವಂತೆ ಕೋರಿ ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ.
ಪುಸ್ತಕದ 113ನೇ ಪುಟದಲ್ಲಿಯ ‘ದಿ ಸ್ಯಾಫ್ರನ್ ಸ್ಕೈ’ಅಧ್ಯಾಯದಲ್ಲಿ ‘ಇತ್ತೀಚಿನ ವರ್ಷಗಳ ಐಸಿಸ್ ಮತ್ತು ಬೋಕೊ ಹರಾಮ್‌ನಂತಹ ಜಿಹಾದಿ ಇಸ್ಲಾಂ ಗುಂಪುಗಳನ್ನೇ ಹೋಲುವ ಎಲ್ಲ ಮಾನದಂಡಗಳಿಂದಲೂ ಹಿಂದುತ್ವದ ರಾಜಕೀಯ ಆವೃತ್ತಿಯು ಸಾಧುಸಂತರಿಗೆ ಗೊತ್ತಿರುವ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂ ಧರ್ಮವನ್ನು ಪಕ್ಕಕ್ಕೆ ತಳ್ಳಿದೆ ’ಎಂದು ಹೇಳಲಾಗಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಈ ಪುಸ್ತಕದ ಬಿಡುಗಡೆಯು ರಾಜ್ಯದಲ್ಲಿಯ ಅಲ್ಪಸಂಖ್ಯಾತರ ಮತಗಳ ಧ್ರುವೀಕರಣ ಮತ್ತು ಗಳಿಕೆಯ ಶುದ್ಧ ಪ್ರಚಾರ ತಂತ್ರವಾಗಿದೆ ಎಂದು ಆರೋಪಿಸಿರುವ ಅರ್ಜಿಯು,ಸಮಾಜದ ಮತ್ತು ದೇಶದ ವ್ಯಾಪಕ ಹಿತಾಸಕ್ತಿಯ ದೃಷ್ಟಿಯಿಂದ ಸದ್ರಿ ಪುಸ್ತಕವನ್ನು ನಿಷೇಧಿಸುವಂತೆ ಕೋರಿದೆ.
ತನ್ನ ಕೃತಿಯಲ್ಲಿ ಹಿಂದೂ ಧರ್ಮವನ್ನು ಭೀತಿವಾದಕ್ಕೆ ಹೋಲಿಸುವ ಮೂಲಕ ಖುರ್ಷಿದ್ ವಿವಾದಕ್ಕೆ ಸಿಲುಕಿದ್ದಾರೆ.
ಅಯೋಧ್ಯಾ ತೀರ್ಪಿನ ಕುರಿತ ಖುರ್ಷಿದ್‌ರ ಈ ನೂತನ ಕೃತಿಯು ಕಳೆದ ವಾರ ಬಿಡುಗಡೆಗೊಂಡಿದೆ. ಅಯೋಧ್ಯಾ ವಿವಾದ ಕುರಿತು ಸವೋಚ್ಚ ನ್ಯಾಯಾಲಯದ ತೀರ್ಪನ್ನು ಕೃತಿಯು ವಿಶ್ಲೇಷಿಸಿದೆ.