ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ

Update: 2021-11-14 18:28 GMT
photo: AFP

  ದುಬೈ, ನ.14: ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್(53, 38 ಎಸೆತ, 4 ಬೌಂಡರಿ, 3 ಸಿಕ್ಸರ್)ಅರ್ಧಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಆಸ್ಟ್ರೇಲಿಯ ಚೊಚ್ಚಲ ಟ್ವೆಂಟಿ-20 ವಿಶ್ವಕಪನ್ನು ಮುಡಿಗೇರಿಸಿಕೊಂಡಿದೆ.

ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗೆಲ್ಲಲು 173 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯವು 18.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ತನ್ನ ದೀರ್ಘಕಾಲದ ಟ್ವೆಂಟಿ-20 ವಿಶ್ವಕಪ್ ಕನಸನ್ನು ಈಡೇರಿಸಿಕೊಂಡಿತು.

 ಆಸ್ಟ್ರೇಲಿಯವು 2.3ನೇ ಓವರ್‌ನಲ್ಲಿ ನಾಯಕ ಆ್ಯರೊನ್ ಫಿಂಚ್(5)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆಗ ಜೊತೆಯಾದ ವಾರ್ನರ್ ಹಾಗೂ ಮಾರ್ಷ್ 2ನೇ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ವಾರ್ನರ್ ಅವರು ಬೌಲ್ಟ್‌ಗೆ ಕ್ಲೀನ್‌ಬೌಲ್ಡಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್(ಔಟಾಗದೆ 28, 18 ಎಸೆತ, 4 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಕೈಜೋಡಿಸಿದ ಮಾರ್ಷ್ 3ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡಕ್ಕೆ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

ಟಾಸ್ ಮತ್ತೊಮ್ಮೆ ನಿರ್ಣಾಯಕ ಪಾತ್ರವಹಿಸಿದ್ದು, ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಬಾಸ್ ಎನ್ನುವ ಮಾತು ನಿಜವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News