​ಕಾನ್ಪುರದಲ್ಲಿ 123 ಝೀಕಾ ವೈರಸ್ ಪ್ರಕರಣ ಪತ್ತೆ

Update: 2021-11-15 03:45 GMT

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದುವರೆಗೆ ಒಟ್ಟು 123 ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 96 ಸಕ್ರಿಯ ಪ್ರಕರಣಗಳಿವೆ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಹೊಸದಾಗಿ ಕನೌಜ್‌ನಲ್ಲಿ ಒಂದು ಹಾಗೂ ಲಕ್ನೋದಲ್ಲಿ ಮೂರು ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇವರ ಸಂಪರ್ಕಗಳನ್ನು ಪತ್ತೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾನ್ಪುರದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ಅಕ್ಟೋಬರ್ 23ರಂದು ಪತ್ತೆಯಾಗಿತ್ತು. ಭಾರತೀಯ ವಾಯುಪಡೆಯ ವಾರೆಂಟ್ ಆಫೀಸರ್ ಒಬ್ಬರಲ್ಲಿ ಝೀಕಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಕಳೆದ ಕೆಲ ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಕಳೆದ ವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆರೋಗ್ಯ ಇಲಾಖೆಯ ಉನ್ನತ ಅಧೀಕಾರಿಗಳ ಜತೆ ಸಭೆ ನಡೆಸಿ ಝೀಕಾ ವೈರಸ್ ಸೋಂಕು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದರು. ಕಟ್ಟುನಿಟ್ಟಿನ ಸರ್ವೇಕ್ಷಣೆ ನಡೆಸುವಂತೆ ಹಾಗೂ ಮನೆಮನೆಗೆ ನೈರ್ಮಲ್ಯ, ಫಾಗಿಂಗ್ ವ್ಯವಸ್ಥೆ ಮಾಡುವ ಮೂಲಕ ಸೊಳ್ಳೆಗಳ ಹರಡುವಿಕೆ ತಡೆಯುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು.

ಕಾನ್ಪುರದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡಾ ಉನ್ನತ ಮಟ್ಟದ ಅಧ್ಯಯನ ತಂಡವನ್ನು ಕಳುಹಿಸಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News