ಕಮ್ಯುನಿಸ್ಟ್ ಪಕ್ಷದ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಚೀನಾದ ಟೆನಿಸ್ ತಾರೆ ನಿಗೂಢ ನಾಪತ್ತೆ
ಬೀಜಿಂಗ್, ನ.15: ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖಂಡ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಬಳಿಕ ಚೀನಾದ ಖ್ಯಾತ ಟೆನಿಸ್ ತಾರೆ ಪೆಂಗ್ ಶುಯೀ ನಿಗೂಢವಾಗಿ ನಾಪತ್ತೆಯಾಗಿದ್ದು ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ಯವಾಗಿದೆ.
ಕಮ್ಯುನಿಸ್ಟ್ ಪಕ್ಷದ ಮುಖಂಡ, ಮಾಜಿ ಉಪಪ್ರಧಾನಿ ಝಾಂಗ್ ಗೌಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ ಈ ಕುರಿತ ವಿವರವಾದ ಮಾಹಿತಿಯನ್ನು ಪೆಂಗ್ ಶುಯೀ ಇಂಟರ್ನೆಟ್ ಮೂಲಕ ಬಹಿರಂಗಪಡಿಸಿದ್ದರು. 75 ವರ್ಷದ ಝಾಂಗ್ ಗೌಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಳಿಕ ಅವರೊಂದಿಗೆ ಹಲವು ವರ್ಷ ಸಂಬಂಧ ಹೊಂದಿದ್ದೆ ಎಂದು 35 ವರ್ಷದ ಫೆಂಗ್ ಶುಯಿ ‘ಮೀ ಟೂ’ ಅಭಿಯಾನದಡಿ ಹೇಳಿಕೆ ನೀಡಿದ್ದರು.
ಆದರೆ ಈಗ ಈ ಎಲ್ಲಾ ವಿವರಗಳೂ ಇಂಟರ್‌ನೆಟ್‌ನಲ್ಲಿ ಡಿಲೀಟ್ ಆಗಿವೆ. ಈ ವಿಷಯದಲ್ಲಿ ಗೂಗಲ್‌ನಲ್ಲಿ ಸರ್ಚ್ ಮಾಡಿದರೂ ಯಾವುದೇ ಮಾಹಿತಿ ಲಭಿಸುತ್ತಿಲ್ಲ. ಟ್ವಿಟರ್ಗೆ ಪ್ರತಿಸ್ಪರ್ಧಿಯಾಗಿರುವ ಚೀನಾದ ವೀಬೊ ವೇದಿಕೆಯಲ್ಲಿ ಪೆಂಗ್ ಶುಯೀ ಹೊಂದಿರುವ ಖಾತೆಯಿಂದಲೂ ಈ ಮಾಹಿತಿ ಡಿಲೀಟ್ ಆಗಿದೆ. ಜೊತೆಗೆ, ಪೆಂಗ್ಶುಯೀ ಎಲ್ಲಿದ್ದಾರೆ ಎಂಬ ಮಾಹಿತಿಯೂ ಲಭಿಸುತ್ತಿಲ್ಲ ಎಂದು ವರದಿಯಾಗಿದೆ.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ವಿಶ್ವದ ಮಾಜಿ ಅಗ್ರಶ್ರೇಯಾಂಕಿತೆ ಫೆಂಗ್ಶುಯಿ ವಿಂಬಲ್ಡನ್ ಟೆನಿಸ್ ಟೂರ್ನಿ ಮತ್ತು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಚಾಂಪಿಯನ್ ಟ್ರೋಫಿ ಗೆದ್ದವರು.
ಈ ಮಧ್ಯೆ, ಪೆಂಗ್ ಶುಯೀ ಆರೋಪದ ಬಗ್ಗೆ ಪೂರ್ಣಪ್ರಮಾಣ, ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ಯಾವುದೇ ಸೆನ್ಸಾರ್ಶಿಪ್ಗೆ ಅವಕಾಶವಿಲ್ಲದೆ ನಡೆಯಬೇಕು ಎಂದು ಮಹಿಳಾ ಟೆನಿಸ್ ಸಂಘಟನೆ(ಡಬ್ಲ್ಯೂಟಿಎ) ಆಗ್ರಹಿಸಿದೆ. ಪೆಂಗ್ ಶುಯೀ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ನಾವು ಅತ್ಯಧಿಕ ಆದ್ಯತೆ ನೀಡುತ್ತೇವೆ.
ಈ ಪ್ರಕರಣದಲ್ಲಿ ನ್ಯಾಯ ದೊರಕಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ’ ಎಂದು ಡಬ್ಲ್ಯೂಟಿಎ ಅಧ್ಯಕ್ಷ ಸ್ಟೀವ್ ಸಿಮನ್ಸ್ ಆಗ್ರಹಿಸಿದ್ದಾರೆ.
18 ಬಾರಿಯ ಗ್ರ್ಯಾಂಡ್‌ಸ್ಲ್ಯಾಂ ಪ್ರಶಸ್ತಿ ವಿಜೇತೆ ಬ್ರಿಟನ್‌ನ ಕ್ರಿಸ್ ಎವರ್ಟ್ ಅವರೂ ಟ್ವಿಟರ್ ಮೂಲಕ ಆತಂಕ ವ್ಯಕ್ತಪಡಿಸಿದ್ದು ‘ಅವರು 14 ವರ್ಷದವರಿದ್ದಾಗಿನಿಂದಲೂ ಅವರ ಆಟವನ್ನು ಗಮನಿಸುತ್ತಿದ್ದೇನೆ. ಇದೊಂದು ಗಂಭೀರ ವಿಷಯವಾಗಿದೆ. ಅವರೆಲ್ಲಿದ್ದಾರೆ ? ಅವರು ಸುರಕ್ಷಿತರಾಗಿದ್ದಾರೆಯೇ? ಈ ಕುರಿತ ಯಾವುದೇ ಮಾಹಿತಿ ಇದ್ದರೆ ಹಂಚಿಕೊಳ್ಳಿ’ ಎಂದು ಕ್ರಿಸ್ ಎವರ್ಟ್ ಟ್ವೀಟ್ ಮಾಡಿದ್ದಾರೆ. ಫೆಂಗ್ಶುಯಿಯ ಸುರಕ್ಷತೆ ಬಗ್ಗೆ ಹಲವು ಹಾಲಿ ಹಾಗೂ ಮಾಜಿ ಟೆನಿಸ್ ಆಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ‘ವೇರ್ ಈಸ್ ಪೆಂಗ್ ಶುಯೀ’ ಎಂಬ ಟ್ವಿಟರ್ ಹ್ಯಾಶ್‌ಟ್ಯಾಗ್ ವೈರಲ್ ಆಗಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ‘ಈ ವಿಷಯ ಇದುವರೆಗೆ ತನ್ನ ಗಮನಕ್ಕೆ ಬಂದಿಲ್ಲ. ಇದು ರಾಜತಾಂತ್ರಿಕ ಪ್ರಶ್ನೆಯಲ್ಲ’ ಎಂದಿದ್ದಾರೆ.