ಖತರ್ ಫುಟ್ಬಾಲ್ ವಿಶ್ವಕಪ್‌ಗೆ ಅರ್ಹತೆ ಪಡೆದ ಸರ್ಬಿಯ, ಸ್ಪೇನ್, ಕ್ರೊಯೇಶಿಯ

Update: 2021-11-15 18:18 GMT
photo:twitter

ದೋಹಾ (ಖತರ್), ನ. 15: ಮುಂದಿನ ವರ್ಷ ಖತರ್‌ನಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್‌ಗೆ ಸ್ಪೇನ್, ಸರ್ಬಿಯ ಮತ್ತು ಕ್ರೊಯೇಶಿಯಗಳು ರವಿವಾರ ಅರ್ಹತೆ ಪಡೆದಿವೆ. ಅದೇ ವೇಳೆ, ಸ್ವೀಡನ್, ಪೋರ್ಚುಗಲ್ ಮತ್ತು ರಶ್ಯಗಳು ಅರ್ಹತೆಗಾಗಿ ಇನ್ನೂ ಕಾಯಬೇಕಾಗಿದೆ.

ಪೋರ್ಚುಗಲ್ ರಾಜಧಾನಿ ಲಿಸ್ಬನ್‌ನಲ್ಲಿ ರವಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯವೊಂದರಲ್ಲಿ ಸರ್ಬಿಯವು ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಆಘಾತ ನೀಡಿತು. ಸರ್ಬಿಯದ ಅಲೆಕ್ಸಾಂಡರ್ ಮಿಟ್ರೊವಿಚ್ 90ನೇ ನಿಮಿಷದಲ್ಲಿ ತಲೆಯಿಂದ ಬಾರಿಸಿದ ಗೋಲಿನ ನೆರವಿನಿಂದ ಅವರ ತಂಡವು ಆತಿಥೇಯ ಪೋರ್ಚುಗಲ್ ತಂಡವನ್ನು ಮಣಿಸಿತು. ಈ ವಿಜಯದೊಂದಿಗೆ ಸರ್ಬಿಯ ಖತರ್ ಫುಟ್ಬಾಲ್ ವಿಶ್ವಕಪ್‌ಗೆ ಅರ್ಹತೆಯನ್ನು ಗಳಿಸಿದೆ.

ಅರ್ಹತೆ ಪಡೆಯಲು ಪೋರ್ಚುಗಲ್‌ಗೆ ಇನ್ನೂ ಅವಕಾಶಗಳಿವೆ. ಆದರೆ, ಅದು ಮಾರ್ಚ್‌ನಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯಗಳಲ್ಲಿ ನಾಲ್ಕು ತಂಡಗಳನ್ನು ಹಿಮ್ಮೆಟ್ಟಿಸಬೇಕಾಗಿದೆ.

ಯುರೋಪ್‌ನಲ್ಲಿ ರವಿವಾರ ವಿಶ್ವಕಪ್‌ಗೆ ಅರ್ಹತೆ ಪಡೆದ ಎಲ್ಲ ತಂಡಗಳು ನಾಟಕೀಯ ತಡ ಗೋಲುಗಳ ಮೂಲಕ ಸ್ಥಾನಗಳನ್ನು ಸಂಪಾದಿಸಿವೆ.

ಅರ್ಹತೆ ಪಡೆಯಲು ಸ್ಪೇನ್ ತಂಡವು ಸ್ವೀಡನ್ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ಡ್ರಾ ಮಾಡಿದರೆ ಸಾಕಿತ್ತು. ಆದರೆ, 86ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಬಾರಿಸಿದ ಅಲ್ವಾರೊ ಮೊರಾಟ ಸ್ಪೇನ್‌ಗೆ 1-0 ಅಂತರದ ಗೆಲುವು ದೊರಕಿಸಿಕೊಟ್ಟರು. ಸ್ವೀಡನ್ ಇನ್ನು ಪ್ಲೇಆಫ್‌ಗಳ ಮೂಲಕ ವಿಶ್ವಕಪ್‌ಗೆ ಸ್ಥಾನ ಸಂಪಾದಿಸಬೇಕಾಗಿದೆ.

ಇನ್ನೊಂದು ಪಂದ್ಯದಲ್ಲಿ ಕ್ರೊಯೇಶಿಯವು ರಶ್ಯವನ್ನು 1-0 ಅಂತರದಿಂದ ಸೋಲಿಸಿ ವಿಶ್ವಕಪ್‌ಗೆ ಪ್ರವೇಶ ಪಡೆದಿದೆ. ಮಳೆಯಿಂದಾಗಿ ಒದ್ದೆಯಾದ ಮೈದಾನದಲ್ಲಿ ರಶ್ಯದ ರಕ್ಷಣಾ ಆಟಗಾರ ಫೆಡರ್ ಕುಡ್ರಿಯಶೊವ್ 81ನೇ ನಿಮಿಷದಲ್ಲಿ ಬಾರಿಸಿದ ಸ್ವಯಂಗೋಲು ಕ್ರೊಯೇಶಿಯಕ್ಕೆ ಗೆಲುವಿಗೆ ನೆರವಾಗಿದೆ. ಇನ್ನು ರಶ್ಯವೂ ಪ್ಲೇಆಫ್ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News