×
Ad

ತ್ರಿಪುರಾ ಹಿಂಸಾಚಾರ ಪ್ರಕರಣ: ಪತ್ರಕರ್ತ ಮತ್ತು ವಕೀಲರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸೂಚನೆ

Update: 2021-11-17 13:24 IST

ಹೊಸದಿಲ್ಲಿ,ನ.17: ತ್ರಿಪುರಾದಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರ ಕುರಿತು ತಮ್ಮ ಸತ್ಯಶೋಧನಾ ವರದಿ ಮತ್ತು ಟ್ವೀಟ್‌ಗಳಿಗಾಗಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ,1967 (ಯುಎಪಿಎ) ಅಡಿ ಪ್ರಕರಣ ದಾಖಲಿಸಲ್ಪಟ್ಟಿರುವ ಇಬ್ಬರು ವಕೀಲರು ಮತ್ತು ಓರ್ವ ಪತ್ರಕರ್ತನ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಜರುಗಿಸದಂತೆ ಸವೋಚ್ಚ ನ್ಯಾಯಾಲಯವು ಬುಧವಾರ ರಾಜ್ಯದ ಪೊಲೀಸರಿಗೆ ನಿರ್ದೇಶ ನೀಡಿದೆ.

 ತಮ್ಮ ವಿರುದ್ಧದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಮತ್ತು ಯುಎಪಿಎದ ಕೆಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ವಕೀಲರಾದ ಪಿಯುಸಿಎಲ್ ಸದಸ್ಯ ಮುಕೇಶ ಮತ್ತು ಮಾನವ ಹಕ್ಕುಗಳ ಸಂಘಟನೆಯ ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿ ಅನ್ಸಾರ್ ಇಂದೋರಿ ಹಾಗೂ ನ್ಯೂಸ್‌ಕ್ಲಿಕ್‌ನ ಪತ್ರಕರ್ತ ಶ್ಯಾಮ ಮೀರಾಸಿಂಗ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೋಟಿಸನ್ನು ಹೊರಡಿಸಿತು.

#ಈ ಇಬ್ಬರು ವಕೀಲರು ‘ತ್ರಿಪುರಾದಲ್ಲಿ ಮಾನವತೆಯ ಮೇಲೆ ದಾಳಿ ಮುಸ್ಲಿಂ ಲೈವ್ಸ್ ಮ್ಯಾಟರ್ ’ಶೀರ್ಷಿಕೆಯಡಿ ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯನ್ನು ಹತ್ತಿಕ್ಕಲು ಮತ್ತು ಕೇವಲ ‘ತ್ರಿಪುರಾ ಹೊತ್ತಿ ಉರಿಯುತ್ತಿದೆ ’ಎಂದು ಟ್ವೀಟ್ ಮಾಡಿದ್ದಕ್ಕಾಗಿ ಮೀರಾಸಿಂಗ್ ವಿರುದ್ಧ ಯುಎಪಿಎಯನ್ನು ಹೇರಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ತ್ರಿಪುರಾದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಕುರಿತು ವಾಸ್ತವಾಂಶಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಮುನ್ನೆಲೆಗೆ ತರಲು ಪ್ರಯತ್ನಿಸಿದ್ದ ವಕೀಲರು ಮತ್ತು ಪತ್ರಕರ್ತರು ಸೇರಿದಂತೆ ನಾಗರಿಕ ಸಮಾಜದ ಸದಸ್ಯರ ವಿರುದ್ಧ ಯುಎಪಿಎ ಹೇರುವ ಮೂಲಕ ಪೀಡಿತ ಪ್ರದೇಶಗಳಿಂದ ಮಾಹಿತಿಗಳು ಮತ್ತು ವಾಸ್ತವಾಂಶಗಳು ಹೊರಬರುವುದನ್ನು ತಡೆಯಲು ಸರಕಾರವು ಯತ್ನಿಸುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

 ಸತ್ಯಶೋಧನೆ ಮತ್ತು ವರದಿಗಾರಿಕೆಯನ್ನು ಅಪರಾಧೀಕರಿಸಲು, ಅದೂ ನಿರೀಕ್ಷಣಾ ಜಾಮೀನನ್ನು ನಿಷೇಧಿಸಲಾಗಿರುವ ಮತ್ತು ಜಾಮೀನು ದೂರದ ಸಾಧ್ಯತೆಯಾಗಿರುವ ಯುಎಪಿಎಯ ಕಠಿಣ ನಿಬಂಧನೆಗಳಡಿ ಸರಕಾರಕ್ಕೆ ಅವಕಾಶ ನೀಡಿದರೆ,ನಾಗರಿಕ ಸಮಾಜದ ಸದಸ್ಯರ ವಾಕ್‌ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ತೀವ್ರ ಹೊಡೆತ ಬೀಳುತ್ತದೆ ಮತ್ತು ಸರಕಾರಕ್ಕೆ ಅನುಕೂಲಕರವಾದ ಅಂಶಗಳು ಮಾತ್ರ ಹೊರಬರುತ್ತವೆ. ಸತ್ಯದ ಅನ್ವೇಷಣೆ ಮತ್ತು ಅದರ ವರದಿಗಾರಿಕೆಯನ್ನು ಅಪರಾಧೀಕರಿಸಿದರೆ ಈ ಪ್ರಕ್ರಿಯೆಯಲ್ಲಿ ನ್ಯಾಯದ ಪರಿಕಲ್ಪನೆಯು ಬಲಿಪಶುವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

 ಯುಎಪಿಎದ ಕಲಂ 13ರ ಜೊತೆಗೆ ಓದಲಾಗುವ ಕಲಂ 2(1)( ಒ ) ಮತ್ತು ಕಲಂ 45(ಡಿ)(5) ಅನ್ನು ಅಸಾಂವಿಧಾನಿಕವೆಂದು ಘೋಷಿಸಲು ನಿರ್ದೇಶವನ್ನೂ ಅರ್ಜಿಯು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News