ದಿಲ್ಲಿ ವಾಯುಮಾಲಿನ್ಯ: ವಿದ್ಯುತ್ ಸ್ಥಾವರಗಳು ಸ್ಥಗಿತ, ಸಾರ್ವಜನಿಕ ಸಾರಿಗೆ ಬಳಸಲು ಕರೆ

Update: 2021-11-17 14:33 GMT

ಹೊಸದಿಲ್ಲಿ,ನ.17: ದಿನೇ ದಿನೇ ಹದಗಡುತ್ತಿರುವ ದಿಲ್ಲಿಯ ವಾಯಮಾಲಿನ್ಯ ಬಿಕ್ಕಟ್ಟನ್ನು ಎದುರಿಸುವ ಪ್ರಯತ್ನವಾಗಿ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ,11 ವಿದ್ಯುತ್ ಉತ್ಪಾದನಾ ಸ್ಥಾವರಗಳ ಪೈಕಿ ಆರನ್ನು ಸ್ಥಗಿತಗೊಳಿಸಲಾಗುತ್ತಿದೆ ಮತ್ತು ಸಾವಿರಾರು ಸರಕಾರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಆಗ್ರಹಿಸಲಾಗಿದೆ.

ಮಂಗಳವಾರ ಸಂಜೆ ಕೇಂದ್ರ ಪರಿಸರ ಸಚಿವಾಲಯದ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಸಭೆಯ ಬಳಿಕ ಹೊರಡಿಸಲಾದ ಆದೇಶದಲ್ಲಿ ದಿಲ್ಲಿಯಲ್ಲಿನ ಮತ್ತು ಸುತ್ತುಮುತ್ತಲಿನ ಶಾಲಾಕಾಲೇಜುಗಳನ್ನು ಮುಂದಿನ ನೋಟಿಸಿನವರೆಗೆ ಮುಚ್ಚುವಂತೆ ಹಾಗೂ ದಿಲ್ಲಿಗೆ ಸಮೀಪದ ಆರು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

ರವಿವಾರದವರೆಗೆ ತಮ್ಮ ಕನಿಷ್ಠ ಶೇ.50ರಷ್ಟು ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಮ್ ಹೋಮ್) ಅವಕಾಶ ನೀಡುವಂತೆ ಆಯೋಗವು ಖಾಸಗಿ ಕಚೇರಿಗಳಿಗೆ ಸಲಹೆ ನೀಡಿದೆ. ಎಲ್ಲ ರಾಜ್ಯ ಸರಕಾರಿ ಕಚೇರಿಗಳು ಶೇ.100ರಷ್ಟು ಮನೆಯಿಂದ ಕೆಲಸ ನೀತಿಯನ್ನು ಪಾಲಿಸಲಿವೆ ಎಂದು ದಿಲ್ಲಿ ಸರಕಾರವು ಹೇಳಿದರೆ,ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನಿರ್ಬಂಧಗಳು ತೀವ್ರ ಪರಿಣಾಮವನ್ನು ಬೀರಿರುವುದರಿಂದ ಮನೆಯಿಂದಲೇ ಕೆಲಸ ಮಾಡುವ ಪದ್ಧತಿಗೆ ತನ್ನ ಒಲವಿಲ್ಲ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಬದಲಿಗೆ ಅದು ಕಚೇರಿಗಳಿಗೆ ತೆರಳುವಾಗ ಸಾಧ್ಯವಿದ್ದಷ್ಟು ಮಟ್ಟಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ದಿಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿಯ ತನ್ನ ಎಲ್ಲ ನೌಕರರಿಗೆ ಸೂಚಿಸಿದೆ.

ದಿಲ್ಲಿಯಲ್ಲಿ ಅಗತ್ಯವಲ್ಲದ ಸರಕುಗಳನ್ನು ಹೊತ್ತ ಟ್ರಕ್‌ಗಳ ಸಂಚಾರ ಮತ್ತು ಖಾಸಗಿ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿರುವ ಆಯೋಗವು,ವಾಯುಮಾಲಿನ್ಯವು ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳುವ ಅನಿವಾರ್ಯ ಅಗತ್ಯವಿದೆ ಎಂದು ಹೇಳಿದೆ.

ಈ ನಡುವೆ ಬುಧವಾರ ಸರಕಾರವನ್ನು ಟೀಕಿಸಿದ ಸರ್ವೋಚ್ಚ ನ್ಯಾಯಾಲಯವು,ದಿಲ್ಲಿಯ ನೆರೆಯ ಪ್ರದೇಶಗಳನ್ನು ವರ್ಕ್ ಫ್ರಮ್ ಹೋಮ್ ನಿರ್ದೇಶದ ವ್ಯಾಪ್ತಿಗೆ ತರಲಾಗಿಲ್ಲ ಮತ್ತು ಟ್ರಕ್‌ಗಳ ತಾತ್ಕಾಲಿಕ ನಿಷೇಧದ ಮೇಲೆ ಮಾತ್ರ ಗಮನವನ್ನು ಹರಿಸಲಾಗಿದೆ ಎಂದು ಹೇಳಿದೆ.

ಅಧಿಕಾರಶಾಹಿಯು ಜಡತ್ವವನ್ನು ಮೈಗೂಡಿಸಿಕೊಂಡಿದೆ ಮತ್ತು ನೀರು ಸಿಂಪಡಣೆ,ಬೆಂಕಿಗಳನ್ನು ತಡೆಯುವುದು ಹೀಗೆ ಎಲ್ಲವನ್ನೂ ನ್ಯಾಯಾಲಯವೇ ಮಾಡಬೇಕೆಂದು ಬಯಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಕಟುವಾಗಿ ಹೇಳಿದರು.

‘ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಸರಕಾರದ ಅಫಿಡವಿಟ್‌ಗಳಲ್ಲಿಯ ಅಂಕಿಅಂಶಗಳು ಏನೇ ಆಗಿದ್ದರೂ ನಾವು ರೈತರ ಸಂಕಷ್ಟಗಳನ್ನು ಪರಿಗಣಿಸಬೇಕಿದೆ. ಅವರು ಕೃಷಿತ್ಯಾಜ್ಯವನ್ನು ಸುಡುವುದನ್ನು ಅನಿವಾರ್ಯವಾಗಿಸಿರುವ ಕಾರಣವೇನು? ಆ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ದಿಲ್ಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ನಿದ್ರಿಸುವ ಜನರು ರೈತರನ್ನು ದೂರುತ್ತಾರೆ. ಸಣ್ಣ ಕೃಷಿ ಹಿಡುವಳಿದಾರರತ್ತ ನೋಡಿ,ನೀವು ಹೇಳುವ ಯಂತ್ರಗಳನ್ನು ಖರೀದಿಸಲು ಅವರಿಗೆ ಸಾಧ್ಯವೇ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತು.

ವರ್ಕ್ ಫ್ರಮ್ ಹೋಮ್ ಮತ್ತು ಲಾಕ್‌ಡೌನ್ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಮತ್ತು ಕೇಂದ್ರ ಸರಕಾರಗಳು ಆಗ್ರಹಿಸಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮು.ನ್ಯಾ.ಎನ್.ರಮಣ ಅವರು, ‘ನಮ್ಮ ಎರಡು ಗಂಟೆ ಸಮಯ ವ್ಯರ್ಥವಾಗಿದೆ. ಜಂಟಿ ಸಭೆಗಳ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಾವೀಗಾಗಲೇ ನಿಮಗೆ ಸೂಚಿಸಿದ್ದೇವೆ ’ಎಂದು ಹೇಳಿದರು. ಯಾವುದೇ ಹೊಸ ಆದೇಶವನ್ನು ಹೊರಡಿಸುವ ಗೋಜಿಗೆ ಹೋಗದ ಸರ್ವೋಚ್ಚ ನ್ಯಾಯಾಲಯವು,ಸದ್ಯಕ್ಕೆ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಆದೇಶವನ್ನು ಪಾಲಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News