ಭಯೋತ್ಪಾದನೆ ಆರೋಪ: ಸಿರಿಯಾದ ಗಾಯಕ ಸುಲೈಮಾನ್ ಟರ್ಕಿಯಲ್ಲಿ ಬಂಧನ

Update: 2021-11-18 17:28 GMT
photo:twitter

ಅಂಕಾರಾ, ನ.18: ನಿಷೇಧಿತ ಭಯೋತ್ಪಾದಕ ಸಂಘಟನೆ ಖುರ್ಡಿಷ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸಿರಿಯಾ ಗಾಯಕ ಒಮರ್ ಸುಲೈಮಾನ್‌ರನ್ನು ಟರ್ಕಿಯ ಅಧಿಕಾರಿಗಳು ಬಂಧಿಸಿರುವುದಾಗಿ ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ.

ಒಮರ್ ಅಲ್ಮಾಸಿಕ್ ಎಂಬ ಮೂಲ ಹೆಸರು ಹೊಂದಿರುವ ಸುಲೈಮಾನ್ ವಿರುದ್ಧ ಸರ್ಚ್ ವಾರಾಂಟ್ ಜಾರಿಗೊಳಿಸಲಾಗಿತ್ತು. ಇವರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಲಭಿಸಿದ ಬಳಿಕ ಟರ್ಕಿಯ ಆಗ್ನೇಯ ಗಡಿಭಾಗದ ಸನ್ಲೀರ್ಫ ನಗರದಲ್ಲಿರುವ ಮನೆಯಲ್ಲಿದ್ದ ಸುಲೈಮಾನ್‌ರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಭದ್ರತಾ ಪಡೆ ಹೇಳಿರುವುದಾಗಿ ‘ರಾಯ್ಟರ್ಸ್’ ವರದಿ ಮಾಡಿದೆ.

ತನ್ನ ತಂದೆಯ ವಿರುದ್ಧ ಹರಡಲಾದ ದುರುದ್ದೇಶಪೂರಿತ ಸುಳ್ಳು ಸುದ್ಧಿಯ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸುಲೈಮಾನ್ ಪುತ್ರ ಮುಹಮ್ಮದ್ ಪ್ರತಿಕ್ರಿಯಿಸಿದ್ದಾರೆ.ಸಿರಿಯಾದಲ್ಲಿ 2011ರಲ್ಲಿ ಅಂತರ್ಯುದ್ಧ ಭುಗಿಲೆದ್ದ ಹಿನ್ನೆಲೆಯಲ್ಲಿ ಟರ್ಕಿಗೆ ಓಡಿಹೋಗಿದ್ದ ಸುಲೈಮಾನ್ ಅಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದರು. ಮದುವೆ ಸಮಾರಂಭಗಳಲ್ಲಿ ಹಾಡುವ ಮೂಲಕ ಕ್ರಮೇಣ ಜನಪ್ರಿಯಗೊಂಡ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಹಲವು ಮ್ಯೂಸಿಕ್ ಆಲ್ಬಂಗಳನ್ನು ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News