ಕಾಶ್ಮೀರದ ಗಾಯಗಳು ಒಣಗುವುದೆಂದು?

Update: 2021-11-19 06:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

370ನೇ ವಿಧಿ ರದ್ದತಿಯ ಬಳಿಕವಾದರೂ ಕಾಶ್ಮೀರ ಈ ದೇಶದ ಭಾಗವಾಗಿ ಅಭಿವೃದ್ಧಿಯ ದಿಕ್ಕಿಗೆ ಮುನ್ನಡೆಯುತ್ತದೆ ಮತ್ತು ಅಲ್ಲಿ ಉಗ್ರರು ಮತ್ತು ಸೇನೆಯಿಂದ ನಡೆಯುತ್ತಿರುವ ಹಿಂಸಾಚಾರಗಳು ನಿಲ್ಲುತ್ತವೆ ಎಂದು ಜನರು ಭಾವಿಸಿದ್ದರು. ವಿಪರ್ಯಾಸವೆಂದರೆ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡುವಂತೆ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಹಿಂಸೆ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗಲಾರದು ಎನ್ನುವುದು ಗೊತ್ತಿರುವುದೇ. ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಭೇಟಿ ಕೊಟ್ಟು ‘‘ಎಲ್ಲ ಸರಿಯಾಗಿದೆ’’ ಎಂದು ಘೋಷಿಸಿದ್ದರು. ಆದರೆ ಅಲ್ಲಿಂದ ಬರುತ್ತಿರುವ ವರದಿಗಳು ಯಾವುದೂ ಸರಿಯಾಗಿಲ್ಲ ಮಾತ್ರವಲ್ಲ, ಅಲ್ಲಿನ ಪರಿಸ್ಥಿತಿ ಇನ್ನಷ್ಟು ಕೆಡುತ್ತಿದೆ ಎಂದು ಕೂಗಿ ಕೂಗಿ ಹೇಳುತ್ತಿವೆ. 370ನೇ ವಿಧಿ ರದ್ದತಿ ಮಾಡಿ ಬಳಿಕ ಕಾಶ್ಮೀರಿಗಳ ರಾಜಕೀಯ ಸ್ವಾತಂತ್ರವನ್ನು ಸೇನೆಯ ಬಲದಿಂದ ಸಂಪೂರ್ಣ ಕಸಿದುಕೊಂಡ ದಿನಗಳಿಂದ, ಅಲ್ಲಿ ಉಗ್ರರ ಹಿಂಸಾಚಾರ ಕಡಿಮೆಯೇನೂ ಆಗಿಲ್ಲ. ಬದಲಿಗೆ ಉಗ್ರರು ನಾಗರಿಕರ ಮೇಲೆ ಅಮಾನವೀಯ ದಾಳಿಗಳನ್ನು ಮಾಡತೊಡಗಿದ್ದಾರೆ.

ಶಿಕ್ಷಕರ ಮೇಲೆ, ಕೂಲಿಕಾರ್ಮಿಕರ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದು ಇದೇ ಮೊದಲು. ಆದರೆ ಇದಷ್ಟಕ್ಕೇ ಕಾಶ್ಮೀರ ಸುದ್ದಿಯಲ್ಲಿರುವುದಲ್ಲ. ಇತ್ತೀಚೆಗೆ ಇಬ್ಬರು ಉಗ್ರರನ್ನು ಮತ್ತು ಅವರ ಸಹಚರರನ್ನು ಗುಂಡಿಟ್ಟು ಕೊಂದಿದ್ದೇವೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು. ಆದರೆ ಆ ಇಬ್ಬರು ಸಹಚರರು ಉಗ್ರಗಾಮಿಗಳಲ್ಲ ಎಂದು ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತರಲ್ಲಿ ಓರ್ವ ವೈದ್ಯನಾಗಿದ್ದರೆ ಇನ್ನೊಬ್ಬ ಉದ್ಯಮಿ. ಉದ್ಯಮಿಯ 13 ವರ್ಷದ ಪುತ್ರಿ ವೀಡಿಯೊ ಒಂದರಲ್ಲಿ, ಆಕೆಯ ತಂದೆಯನ್ನು ಪೊಲೀಸರು ಎರಡು ಬಾರಿ ವಿಚಾರಣೆಗೆ ಕರೆಸಿ, ಬಳಿಕ ಮೂರನೆಯ ಬಾರಿ ಕರೆಸಿಕೊಂಡವರು ಗುಂಡಿಟ್ಟು ಕೊಂದಿದ್ದಾರೆ. ಇದು ಉಗ್ರರೊಂದಿಗೆ ಎನ್‌ಕೌಂಟರ್ ನಡೆದಾಗ ಸಂಭವಿಸಿದ ದುರಂತವಲ್ಲ. ನನ್ನ ತಂದೆಯನ್ನು ಯಾಕೆ ಕೊಂದಿರಿ ಎಂದು ಕೇಳಿದರೆ, ಪೊಲೀಸರು ನನ್ನನ್ನು ನೋಡಿ ನಗುತ್ತಿದ್ದರು ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲ, ಮೃತ ಉದ್ಯಮಿ ಸ್ಥಳೀಯರಿಗೆ ತೀರಾ ಚಿರಪರಿಚಿತ ಎನ್ನುವುದು ಗೊತ್ತಾಗಿದೆ. ಇದೀಗ ಪೊಲೀಸರು, ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಾಗ ನಾಗರಿಕರ ಮೇಲೆ ಗುಂಡು ಹಾರಿರಬಹುದು ಎಂದು ತಮ್ಮ ಮಾತುಗಳನ್ನು ಬದಲಿಸಿದ್ದಾರೆ. ಉಗ್ರಗಾಮಿಗಳು ನಾಗರಿಕರನ್ನು ಗುರಾಣಿಗಳಾಗಿ ಬಳಸುತ್ತಿದ್ದಾರೆ ಎನ್ನುವುದು ಪೊಲೀಸರ ಆರೋಪ. ಪೊಲೀಸರ ಮಾತುಗಳಲ್ಲಿ ವಿರೋಧಾಭಾಸಗಳು ಸ್ಪಷ್ಟವಾಗಿ ಎದ್ದು ಕಾಣುತ್ತಿವೆ. ಈಗಾಗಲೇ ಮೃತರ ಕುಟುಂಬಸ್ಥರು ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ಸರಕಾರವೂ ಪ್ರತಿಭಟನೆಗೆ ತಲೆಬಾಗಿ ತನಿಖೆಗೆ ಆದೇಶ ನೀಡಿದೆ.

ಸೇನೆಯಿಂದ ಈ ಹಿಂದೆಯೂ ನಾಗರಿಕರ ಮೇಲೆ ಹಿಂಸಾಚಾರಗಳು ನಡೆದ ಆರೋಪಗಳು ಕೇಳಿ ಬಂದಿವೆ. ತನಿಖೆಗಳಿಂದ ಅವುಗಳು ನಿಜ ಎನ್ನುವುದೂ ಸಾಬೀತಾಗಿವೆ. ಸೇನೆಯ ದೌರ್ಜನ್ಯವನ್ನು ಅಲ್ಲಿನ ಉಗ್ರರು ತಮಗೆ ಪೂರಕವಾಗಿ ಬಳಸುತ್ತಿದ್ದರು ಎನ್ನುವುದು ಒಂದು ಕಹಿ ಸತ್ಯ. ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ. ಕಾಶ್ಮೀರಿಗಳ ಹಕ್ಕುಗಳನ್ನು ಕಿತ್ತುಕೊಂಡಾಕ್ಷಣ, ಕಾಶ್ಮೀರ ನಮ್ಮದಾಗುವುದಿಲ್ಲ. ದುಪ್ಪಟ್ಟು ಸೇನಾ ಬಲದಿಂದಲೂ ಕಾಶ್ಮೀರವನ್ನು ನಮ್ಮದಾಗಿಸಲು ಸಾಧ್ಯವಿಲ್ಲ. ಯಾಕೆಂದರೆ ಕಾಶ್ಮೀರವೆಂದರೆ ಬರೀ ಭೌಗೋಳಿಕ ನಕ್ಷೆ ಮಾತ್ರವಲ್ಲ. ಎಲ್ಲಿಯವರೆಗೆ ಅಲ್ಲಿರುವ ಕಾಶ್ಮೀರಿಗಳು ನಮ್ಮವರಾಗುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರವನ್ನು ನಮ್ಮದಾಗಿಸಲು ಸಾಧ್ಯವಿಲ್ಲ. ಕಾಶ್ಮೀರ ನಮ್ಮದು ಎಂದು ಭಾರತ ಘಂಟಾಘೋಷವಾಗಿ ವಿಶ್ವಸಂಸ್ಥೆಯಲ್ಲಿ ಹೇಳಬಹುದು. ಇದೇ ಸಂದರ್ಭದಲ್ಲಿ ಕಾಶ್ಮೀರಿಗಳೂ ‘ನಾವೆಲ್ಲ ಭಾರತೀಯರು’ ಎಂದು ಎದೆ ತುಂಬಿ ವಿಶ್ವಕ್ಕೆ ಕೇಳುವಂತೆ ಹೇಳುವ ವಾತಾವರಣ ಕಾಶ್ಮೀರದಲ್ಲಿ ನಿರ್ಮಾಣವಾಗಬೇಕು. ಕಾಶ್ಮೀರದ ರಾಜಕೀಯ ಬದಲಾವಣೆಗಳಿಗೆ ನಾವು ಸಂಭ್ರಮಿಸುವುದಕ್ಕಿಂತ ಹೆಚ್ಚು, ಕಾಶ್ಮೀರಿಗಳು ಸಂಭ್ರಮಿಸಬೇಕು. ಬದಲಾವಣೆ ಕಾಶ್ಮೀರಿಗಳಿಗೆ ಸಂಭ್ರಮವನ್ನು ತರದೇ ಇದ್ದರೆ ಅದು ಕಾಶ್ಮೀರವನ್ನು ಇನ್ನಷ್ಟು ರಕ್ತಪಾತದೆಡೆಗೆ ಕೊಂಡೊಯ್ಯುವ ಅಪಾಯವಿದೆ. ಆದುದರಿಂದ ಕಾಶ್ಮೀರದಲ್ಲಿರುವ ಸೈನಿಕರು, ಪೊಲೀಸರು ಕೋವಿಯ ಭಾಷೆಯಲ್ಲಿ ಮಾತನಾಡದೆ ಹೃದಯದ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಬೇಕು. ಸೇನೆ ಮತ್ತು ಪೊಲೀಸರು ನಾಗರಿಕರ ರಕ್ಷಣೆಗೆ, ಭದ್ರತೆಗೆ ಇದೆಯೇ ಹೊರತು, ದಬ್ಬಾಳಿಕೆಗಲ್ಲ ಎನ್ನುವುದನ್ನು ಸ್ಥಳೀಯರಿಗೆ ಮನದಟ್ಟು ಮಾಡಿಕೊಡುವುದು ಸೇನೆ ಮತ್ತು ಪೊಲೀಸರ ಕರ್ತವ್ಯವಾಗಿದೆ. ನಾಗರಿಕರು ಮತ್ತು ಉಗ್ರರ ನಡುವಿನ ವ್ಯತ್ಯಾಸವನ್ನು ಪೊಲೀಸರು ಮತ್ತು ಸೈನಿಕರು ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.

ಎನ್‌ಎಸ್‌ಎ ಮುಖ್ಯಸ್ಥರಾಗಿರುವ ದೋವಲ್ ಯಾವುದೋ ನಾಗರಿಕನ ಜೊತೆಗೆ ಚಾ ಕುಡಿಯುವ ಫೋಟೊ ಹೊಡೆಸಿಕೊಂಡು, ಗೃಹ ಸಚಿವರು ಸೈನಿಕರ ಜೊತೆ ವಾಸ್ತವ್ಯ ಮಾಡಿದ ಫೋಟೊಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದಾಕ್ಷಣ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದಿಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಮಾಡಿದ ಸಾವಿರ ಕೆಲಸಗಳು ಪೊಲೀಸರು ನಡೆಸುವ ಒಂದು ನಕಲಿ ಎನ್‌ಕೌಂಟರ್‌ನಿಂದ ವ್ಯರ್ಥವಾಗಿ ಬಿಡಬಹುದು. ಈಗಾಗಲೇ ಕಾಶ್ಮೀರಿಗಳಲ್ಲಿ ‘ನಮಗೆ ಮೋಸವಾಗಿದೆ’ ಎನ್ನುವ ಆಳವಾದ ಗಾಯವೊಂದಿದೆ. ಇಂತಹ ನಕಲಿ ಎನ್‌ಕೌಂಟರ್‌ಗಳು ಆ ಗಾಯಗಳನ್ನು ಇನ್ನಷ್ಟು ಆಳವಾಗಿಸಬಹುದು. ಕಾಶ್ಮೀರದ ವಿಷಯದಲ್ಲಿ ಪಕ್ಕದ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ತೀರಾ ಆಸಕ್ತಿಯನ್ನು ಹೊಂದಿವೆ. ಕಾಶ್ಮೀರಿಗಳ ಮೇಲೆ ದೌರ್ಜನ್ಯಗಳು ಹೆಚ್ಚಿದಷ್ಟು ಅದರ ಲಾಭವನ್ನು ನಮ್ಮ ನೆರೆಯ ಶತ್ರು ರಾಷ್ಟ್ರಗಳು ತಮ್ಮದಾಗಿಸಿಕೊಳ್ಳುತ್ತವೆ. ಆದುದರಿಂದ, ಸದ್ಯ ನಡೆದಿರುವ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಗಂಭೀರ ತನಿಖೆ ನಡೆಸುವುದು ಅತ್ಯಗತ್ಯ.

ಒಂದು ವೇಳೆ ನಾಗರಿಕರ ಮೇಲೆ ಅನ್ಯಾಯ ನಡೆದಿದ್ದರೆ ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿ, ಕಾಶ್ಮೀರ ಅಭಿವೃದ್ಧಿಗೊಳ್ಳುತ್ತಿದೆ, ಕಾಶ್ಮೀರದಲ್ಲಿ ಹಿಂಸಾಚಾರಗಳು ನಿಂತಿವೆ ಎಂದು ಕಾಶ್ಮೀರದ ಹೊರಗೆ ನಿಂತು ನಾವು ಮಾತನಾಡಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಈ ಎಲ್ಲ ಮಾತುಗಳು ಕಾಶ್ಮೀರಿಗಳ ಬಾಯಿಯಿಂದ ಹೊರಬೀಳಬೇಕು. ಈಗಾಗಲೇ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆ ತನ್ನ ಕಳವಳ ವ್ಯಕ್ತಪಡಿಸಿದೆ. ಅದಕ್ಕೆ ಭಾರತ ತನ್ನ ಆಕ್ಷೇಪವನ್ನೂ ಹೇಳಿದೆ. ಆದರೆ ಕಾಶ್ಮೀರದಲ್ಲಿ ಕೆಟ್ಟ ಬೆಳವಣಿಗೆ ನಡೆಯುತ್ತಿದ್ದರೆ ಅದಕ್ಕಾಗಿ ಮೊದಲು ಆತಂಕ ಪಡಬೇಕಾದವರು ನಾವಾಗಬೇಕು. ಯಾಕೆಂದರೆ ಕಾಶ್ಮೀರ ಭಾರತದ ಒಂದು ಅವಿಭಾಜ್ಯ ಅಂಗ. ಅಲ್ಲಿ ಹಿಂಸೆಗಳು ನಡೆದರೆ, ಅಭಿವೃದ್ಧಿ ತಟಸ್ಥವಾದರೆ, ನಾಗರಿಕರು ಉಗ್ರವಾದದತ್ತ ಜಾರಿದರೆ ಅದರಿಂದ ನಷ್ಟ ಭಾರತಕ್ಕೇ ಆಗಿರುತ್ತದೆ. ಆದುದರಿಂದ, ಕಾಶ್ಮೀರದಲ್ಲಿ ನಡೆಯುತ್ತಿರುವ ವಾಸ್ತವವನ್ನು ಒಪ್ಪಿಕೊಂಡು ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವುದು ಭಾರತದ ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News