×
Ad

ಕೇಂದ್ರದ ಕೃಷಿ ಕಾನೂನುಗಳ ರದ್ದತಿ ನಿರ್ಧಾರ ಶುದ್ಧ ರಾಜಕೀಯ: ಸುಪ್ರೀಂ ಕೋರ್ಟ್ ರೈತ ಸಮಿತಿ ಸದಸ್ಯ ಪ್ರತಿಕ್ರಿಯೆ

Update: 2021-11-19 12:55 IST
Photo: ANI

ಮುಂಬೈ: ಕಳೆದ ವರ್ಷದಿಂದ ರೈತರ ಪ್ರತಿಭಟನೆಯ ಕೇಂದ್ರವಾಗಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಒಂದು ಪ್ರತಿಗಾಮಿ ಹೆಜ್ಜೆ ಎಂದು  ಸುಪ್ರೀಂ ಕೋರ್ಟ್ ನೇಮಿಸಿರುವ ರೈತ ಸಮಿತಿ ಸದಸ್ಯ ಅನಿಲ್ ಘನವತ್ ಇಂದು ವಿವರಿಸಿದ್ದಾರೆ.

"ಇದು ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಪ್ರತಿಗಾಮಿ ಹೆಜ್ಜೆಯಾಗಿದೆ. ಏಕೆಂದರೆ ಅವರು ರೈತರ ಅಭ್ಯುದಯಕ್ಕಾಗಿ ರಾಜಕೀಯವನ್ನು ಆರಿಸಿಕೊಂಡರು" ಎಂದು ಘನವತ್ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದರು.

"ನಮ್ಮ ಸಮಿತಿಯು ಮೂರು ಕೃಷಿ ಕಾನೂನುಗಳ ಮೇಲೆ ಹಲವಾರು ತಿದ್ದುಪಡಿಗಳು ಹಾಗೂ  ಪರಿಹಾರಗಳನ್ನು ಸಲ್ಲಿಸಿದೆ. ಆದರೆ ಇದನ್ನು ಬಿಕ್ಕಟ್ಟನ್ನು ಪರಿಹರಿಸಲು ಬಳಸುವ ಬದಲು, ಪ್ರಧಾನಿ ಮೋದಿ ಹಾಗೂ   ಬಿಜೆಪಿ ತನ್ನ ಹೆಜ್ಜೆ ಹಿಂದಿಡಲು ನಿರ್ಧರಿಸಿದೆ. ಅವರು ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ ಹಾಗೂ  ಬೇರೇನೂ ಇಲ್ಲ" ಎಂದು  ಘನವತ್ ಹೇಳಿದರು.

ಗುರುನಾನಕ್ ಜಯಂತಿ (ಗುರುಪುರಬ್) ಸಂದರ್ಭದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರು ಕೃಷಿ ಕಾನೂನುಗಳು ರೈತರ ಅನುಕೂಲಕ್ಕಾಗಿವೆ. ಆದರೆ "ಎಷ್ಟು ಪ್ರಯತ್ನ ಮಾಡಿದರೂ ನಾವು ರೈತರ ಒಂದು ವರ್ಗವನ್ನು ಮನವೊಲಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು.

ಶೇತ್ಕರಿ ಸಂಘಟನೆಯ ಅಧ್ಯಕ್ಷ ಘನವತ್ "ಸುಪ್ರೀಂಕೋರ್ಟ್‌ಗೆ ನಮ್ಮ ಶಿಫಾರಸುಗಳನ್ನು ಸಲ್ಲಿಸಿದ್ದರೂ ಈ ಸರಕಾರ ಅದನ್ನು ಓದಿಲ್ಲ ಎಂದು ತೋರುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಕೃಷಿ ಕಾನೂನುಗಳನ್ನು ರದ್ದುಪಡಿಸಿದ್ದು, ಕೃಷಿ ಕಾಯ್ದೆ ರದ್ದುಪಡಿಸುವ ನಿರ್ಧಾರವು ಶುದ್ಧ ರಾಜಕೀಯವಾಗಿದೆ'' ಎಂದರು.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವು "ಈಗ ಕೃಷಿ ಮತ್ತು ಅದರ ಮಾರುಕಟ್ಟೆ ವಲಯದಲ್ಲಿನ ಎಲ್ಲಾ ರೀತಿಯ ಸುಧಾರಣೆಗಳ ಬಾಗಿಲುಗಳನ್ನು ಮುಚ್ಚಿದೆ" ಎಂದು ಅನಿಲ್ ಘನವತ್ ಹೇಳಿದರು.

‘ಪಕ್ಷದ (ಬಿಜೆಪಿ) ರಾಜಕೀಯ ಹಿತಾಸಕ್ತಿಗೆ ರೈತರ ಹಿತಾಸಕ್ತಿ ಬಲಿಯಾಗಿದೆ’ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News