ವಚನ ಭ್ರಷ್ಟರನ್ನು ರೈತರು ನಂಬುವುದೆಂತು?

Update: 2021-11-22 05:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಳೆ ನಿಂತರೂ ಮಳೆ ಹನಿ ತೊಟ್ಟಿಕ್ಕುವುದು ನಿಂತಿಲ್ಲ ಎಂಬಂತೆ, ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದ ಬಳಿಕವೂ, ಹೋರಾಟದ ಕಾವು ಏರುತ್ತಲೇ ಇದೆ. ಪ್ರಧಾನಿಯೇ ಬಂದು ಮೂರು ಕಾಯ್ದೆಗಳನ್ನು ಹಿಂದೆಗೆಯುತ್ತೇನೆ ಎಂದು ರೈತರಿಗೆ ಹೇಳಿದರೂ ಅವರು ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿಲ್ಲ. ಅದಕ್ಕೆ ಮುಖ್ಯ ಕಾರಣ, ಜನರು ಪ್ರಧಾನಿಯ ಮಾತಿನ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ಹಿಂದೆ ನೋಟು ನಿಷೇಧದ ಸಂದರ್ಭದಲ್ಲಿ ‘ನನಗೆ 50 ದಿನ ಕೊಡಿ. ಆ ಬಳಿಕವೂ ಸರಿಯಾಗದಿದ್ದರೆ ನನ್ನನ್ನು ಕೊಂದು ಹಾಕಿ’ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ಆಡಿದ್ದರು. ಆದರೆ ಈವರೆಗೂ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಕನಿಷ್ಠ, ನೋಟು ನಿಷೇಧದಿಂದ ಈ ದೇಶಕ್ಕಾದ ಲಾಭವೇನು, ಖಜಾನೆಗೆ ಎಷ್ಟು ಕಪ್ಪು ಹಣ ಬಂದಿದೆ ಎನ್ನುವ ಮಾಹಿತಿಯನ್ನೂ ಅವರು ನೀಡಿಲ್ಲ. ನೋಟು ನಿಷೇಧ ಭಾರೀ ದೊಡ್ಡ ಹಗರಣವಾಗಿ ಹಲವರು ಅದನ್ನು ಬಳಸಿಕೊಂಡು ತಮ್ಮ ಕಪ್ಪು ಹಣವನ್ನು ವಾಮಮಾರ್ಗದಲ್ಲಿ ಬಿಳಿಯಾಗಿಸಿಕೊಂಡರು. ಜಿಎಸ್‌ಟಿಯ ವಿಷಯದಲ್ಲೂ ಇದು ಪುನರಾವರ್ತನೆಯಾಯಿತು. ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ, ರಾಜ್ಯಗಳಿಗೆ ಪರಿಹಾರ ಧನ ಸಿಗುತ್ತದೆ ಎಂಬಿತ್ಯಾದಿ ಪ್ರಧಾನಿಯ ಭರವಸೆಗಳು ಹುಸಿಯಾದವು. ವ್ಯಾಪಾರ ಇನ್ನಷ್ಟು ಜಟಿಲವಾಯಿತು. ಬೆಲೆ ಹೆಚ್ಚಳವಾಯಿತು. ಜಿಎಸ್‌ಟಿ ಪರಿಹಾರಧನವನ್ನು ನೀಡದೆ ಕೇಂದ್ರ ಸರಕಾರ ರಾಜ್ಯಗಳಿಗೆ ವಂಚಿಸಿತು. ಸಿಎಎ - ಎನ್‌ಆರ್‌ಸಿ ವಿಷಯದಲ್ಲೂ ಮೋದಿ ಮಾಡಿದ್ದು ವಿಶ್ವಾಸ ದ್ರೋಹವೇ. ಎನ್‌ಆರ್‌ಸಿ ಜಾರಿಗೊಳಿಸುವ ಪ್ರಸ್ತಾಪವೇ ಇಲ್ಲ ಎನ್ನುತ್ತಾ ಅಸ್ಸಾಮಿನ ಜನರನ್ನು ದೇಶರಹಿತರನ್ನಾಗಿಸಿತು. ಅವರ ಪೌರತ್ವವನ್ನೇ ಅನುಮಾನಿಸಿತು. ಎನ್‌ಆರ್‌ಸಿಯನ್ನು ಸಿಎಎ ಮೂಲಕ ಜಾರಿಗೊಳಿಸುವ ವಂಚನೆಯ ದಾರಿ ಹಿಡಿಯಿತು. ಹೀಗಿರುವಾಗ ಬಾಯಿ ಮಾತಿನಲ್ಲಿ ‘ಮೂರು ಕಾಯ್ದೆಗಳನ್ನು ಹಿಂದೆಗೆದುಕೊಂಡಿದ್ದೇನೆ’ ಎಂದು ಪ್ರಧಾನಿ ಘೋಷಿಸಿದರೆ ಅದನ್ನು ರೈತರು ಯಾಕಾಗಿ ನಂಬಬೇಕು?

ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಭರವಸೆ ನೀಡಿದ ಮರುದಿನವೇ ಬಿಜೆಪಿಯೊಳಗಿರುವ ನಾಯಕರು ಮೋದಿಯ ಮಾತಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಉನ್ನಾವೋದ ಸಂಸದ ಸಾಕ್ಷಿ ಮಹಾರಾಜ್ ಮಾತನಾಡುತ್ತಾ ‘‘ಅಗತ್ಯ ಬಿದ್ದರೆ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರಲಾಗುವುದು’’ ಎಂದಿದ್ದಾರೆ. ಸಂಘಪರಿವಾರದ ನಾಯಕರೊಬ್ಬರು ‘‘ಎರಡು ಹೆಜ್ಜೆ ಹಿಂದಿಟ್ಟಿರುವುದು ನಾಲ್ಕು ಹೆಜ್ಜೆ ಮುಂದಿಡುವುದಕ್ಕೆ. ಕೃಷಿ ಕಾಯ್ದೆಯನ್ನು ಇನ್ನೊಂದು ರೂಪದಲ್ಲಿ ನಾವು ತಂದೇ ತೀರುತ್ತೇವೆ’’ ಎಂದಿದ್ದಾರೆ. ಹಾಗಾದರೆ, ‘ಕೃಷಿ ಕಾಯ್ದೆಯನ್ನು ಹಿಂದೆಗೆದಿದ್ದೇವೆ’ ಎನ್ನುವ ಪ್ರಧಾನಿ ಮೋದಿಯ ಮಾತಿಗೆ ಬೆಲೆ ಎಲ್ಲಿ ಉಳಿಯಿತು? ಸರಕಾರದೊಳಗೆ ಇಷ್ಟೊಂದು ದ್ವಂದ್ವಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕಾಯ್ದೆಯನ್ನು ಯಾವ ಬೆಲೆ ತೆತ್ತಾದರೂ ಜಾರಿಗೊಳಿಸುತ್ತೇವೆ ಎನ್ನುವ ಹಟ ಬಿಜೆಪಿ ನಾಯಕರ ಬಳಿ ಇದೆ. ಮುಂದಿನ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶಕ್ಕೆ ಪೂರಕವಾಗಿ ಕೇಂದ್ರ ಸರಕಾರ ಕೃಷಿ ಕಾಯ್ದೆಯ ಜಾರಿಯನ್ನು ನಿರ್ಧರಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಕ್ಕಿಂತ ವ್ಯಥೆಯ ವಿಷಯವೆಂದರೆ, ಕೇಂದ್ರ ಸರಕಾರ ರೈತರ ಹಿತಾಸಕ್ತಿಗೆ ಬದಲಿಗೆ, ಕಾರ್ಪೊರೇಟ್ ಶಕ್ತಿಗಳ ಹಿತಾಸಕ್ತಿಯನ್ನು ಜಾರಿಗೊಳಿಸಲು ತುದಿಗಾಲಿನಲ್ಲಿ ನಿಂತಿರುವುದು. ಇದೊಂದು ರೀತಿಯಲ್ಲಿ ಜನದ್ರೋಹವಾಗಿದೆ. ಆದುದರಿಂದಲೇ ರೈತರು ಸಂಸತ್ ಮುತ್ತಿಗೆ , ರ್ಯಾಲಿಯನ್ನು ಹಿಂದೆಗೆದುಕೊಂಡಿಲ್ಲ.

ಮೊತ್ತ ಮೊದಲು ರೈತರ ಹಿತಾಸಕ್ತಿಯೇನು ಎನ್ನುವುದನ್ನು ರೈತರಿಂದ ಆಲಿಸಬೇಕು. ಆದರೆ ಮೋದಿಯವರು ರೈತರ ಹಿತಾಸಕ್ತಿಯನ್ನು ಅಂಬಾನಿ, ಅದಾನಿಗಳ ಮೂಲಕ ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಯಾವತ್ತೂ ಕೃಷಿಯನ್ನೇ ಮಾಡದ ಆರೆಸ್ಸೆಸ್ ಶಾಖೆಗಳ ನಿರ್ದೇಶನದಂತೆ ಕಾರ್ಯವೆಸಗುತ್ತಿದ್ದಾರೆ. ಇದು ರೈತರ ಮುಂದೆ ಇನ್ನೂ ಬೃಹತ್ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಹೇಳುತ್ತದೆ. ಇಂದು ರೈತರಿಗೆ ಒಳಿತು ಮಾಡುವ ಆಸೆ ಸರಕಾರಕ್ಕಿದ್ದರೆ, ಬೆಂಬಲ ಬೆಲೆಯೂ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಅವರು ಸರಕಾರದ ಮುಂದೆ ಇಟ್ಟಿದ್ದಾರೆ. ಅವುಗಳನ್ನು ಈಡೇರಿಸಲಿ. ರೈತರು ತಾನು ಬೆಳೆದ ಅಕ್ಕಿಯನ್ನು ಯಾರಿಗೆ ಮಾರಬೇಕು, ಯಾರು ಅದರ ಬೆಲೆಯನ್ನು ನಿರ್ಧರಿಸಬೇಕು, ರೈತರು ತಾವು ಸಾಕಿದ ಗೋವುಗಳನ್ನು ಯಾರಿಗೆ ಮಾರಾಟ ಮಾಡಬೇಕು, ಯಾವಾಗ ಮಾರಾಟ ಮಾಡಬೇಕು ಎನ್ನುವುದನ್ನು ಸರಕಾರ ನಿರ್ಧರಿಸುವುದರಿಂದ ಇಡೀ ಕೃಷಿ ವಲಯವೇ ನಾಶವಾಗಬಹುದು. ಮತ್ತು ಸರಕಾರ ಈ ನಿರ್ಧಾರ ರೈತರ ಬೇಡಿಕೆಯಂತೆ ಜಾರಿಗೊಳ್ಳುತ್ತಿರುವುದಲ್ಲ. ಬದಲಿಗೆ ಕೃಷಿಯೊಂದಿಗೆ ಯಾವುದೇ ಸಂಬಂಧ ಇಲ್ಲದ ಜನರು ಈ ಕಾನೂನುಗಳನ್ನು ರೂಪಿಸಲು ಸರಕಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಕಾಯ್ದೆಯನ್ನು ಜಾರಿಗೊಳಿಸಿ ರೈತರು ತಮ್ಮ ಗೋವುಗಳನ್ನು ಮಾರಾಟ ಮಾಡುವ ಹಕ್ಕುಗಳನ್ನು ಕಳೆದುಕೊಂಡ ಪರಿಣಾಮವಾಗಿ ಜಾನುವಾರು ಸಾಕಣೆ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಗೋಶಾಲೆಗಳನ್ನು ಸ್ಥಾಪಿಸಿ ಅವುಗಳನ್ನು ನಿಭಾಯಿಸಲಾಗದೆ ಸರಕಾರ ಒದ್ದಾಡುತ್ತಿದೆ. ಜನರ ಅಭಿವೃದ್ಧಿಗೆ ವ್ಯಯವಾಗಬೇಕಾದ ಹಣವನ್ನು ಅನುಪಯುಕ್ತ ಹಸುಗಳನ್ನು ಸಾಕಲು ಉಪಯೋಗಿಸುತ್ತಿದೆ. ಇದರ ಲಾಭಗಳನ್ನು ರೈತೇತರ ಜನರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಬೆರಳೆಣಿಕೆಯ ಜನರ ಹಿತಾಸಕ್ತಿಗಾಗಿ ಕಾನೂನು ಜಾರಿಗೊಳಿಸಿದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಗ್ರಾಮೀಣ ಹೈನೋದ್ಯಮವಿದೆ. ಇದೀಗ ಕೃಷಿ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ತರಾತುರಿಯಲ್ಲಿದೆ ಸರಕಾರ.

 ಕೃಷಿ ಕಾಯ್ದೆಯನ್ನು ಸರಕಾರ ಅಧಿಕೃತವಾಗಿ ಹಿಂದೆಗೆದುಕೊಳ್ಳುವುದು ಮಾತ್ರವಲ್ಲ, ಇನ್ನೊಮ್ಮೆ ಇಂತಹ ಪ್ರಯತ್ನವನ್ನು ನಡೆಸದಂತೆ ಸರಕಾರಕ್ಕೆ ಎಚ್ಚರಿಕೆಯನ್ನೂ ರೈತ ಸಂಘಟನೆಗಳು ನೀಡಬೇಕಾಗಿದೆ. ರೈತರೊಂದಿಗೆ ಚರ್ಚಿಸದೇ ಈ ಕಾನೂನನ್ನು ರೂಪಿಸಲಾಗಿದೆ ಎನ್ನುವುದನ್ನು ಸ್ವತಃ ಪ್ರಧಾನಮಂತ್ರಿಯವರೇ ಒಪ್ಪಿದ್ದಾರೆ. ಹಾಗಾದರೆ ಇಲ್ಲಿಯವರೆಗಿನ ಎಲ್ಲ ನಾಶ ನಷ್ಟಗಳಿಗೂ ಸರಕಾರವೇ ಕಾರಣವಾಗಿದೆ ಎಂದಾಯಿತು. ಹೀಗಿರುವಾಗ ಪ್ರತಿಭಟನೆಯಲ್ಲಿ ಮೃತಪಟ್ಟ 700 ರೈತರ ಹೊಣೆಗಾರಿಕೆಯೂ ಸರಕಾರಕ್ಕೇ ಸೇರಿದೆ. ಅವರ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುವ ಮೂಲಕ, ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆಯಲ್ಲಿ ಸಹಾಯಕ ಗೃಹ ಸಚಿವರ ಪುತ್ರನೇ ಕಾರು ಹರಿಸಿದ ಆರೋಪವನ್ನು ಹೊಂದಿದ್ದಾನೆ. ಅದರ ತನಿಖೆ ಯಾವ ರೀತಿಯಲ್ಲೂ ಮೂಲೆಗುಂಪಾಗಬಾರದು. ಉದ್ದೇಶ ಪೂರ್ವಕವಾಗಿ ಆತ ಕಾರು ಹರಿಸಿದ್ದಾದರೆ, ಆತನಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ. ಸಚಿವರ ಪುತ್ರನೆನ್ನುವ ಕಾರಣಕ್ಕೆ ಆತನನ್ನು ರಕ್ಷಿಸಬಾರದು. ಜೊತೆಗೆ, ಸಹಾಯಕ ಗೃಹ ಸಚಿವರಿಂದ ರಾಜೀನಾಮೆಯನ್ನು ಪಡೆದುಕೊಳ್ಳಬೇಕು. ಪ್ರತಿಭಟನಾಕಾರರ ಬಗ್ಗೆ ಕೆಟ್ಟ ಅಭಿರುಚಿಯ ಟೀಕೆಗಳನ್ನು ಮಾಡಿದ ಸಂಪುಟದಲ್ಲಿರುವ ಸಚಿವರಿಂದ ಕನಿಷ್ಠ ರೈತರ ಬಳಿ ಕ್ಷಮೆಯನ್ನಾದರೂ ಯಾಚಿಸುವಂತೆ ಸೂಚಿಸಬೇಕು. ಹೊಸದಾಗಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗುವುದಾದರೆ ಅದು ವಿರೋಧಪಕ್ಷಗಳು ಮತ್ತು ರೈತರ ಜೊತೆಗಿನ ಪೂರ್ಣ ಚರ್ಚೆಯ ಬಳಿಕವೇ ನಡೆಯಲಿ. ಕೃಷಿ ಕಾಯ್ದೆ ಉದ್ಯಮಿಗಳ ಹಿತಾಸಕ್ತಿಯನ್ನು ಎತ್ತಿ ಹಿಡಿಯದೆ ರೈತರ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News