ಕ್ರಿಸ್ಮಸ್ ಮೆರವಣಿಗೆಗೆ ನುಗ್ಗಿದ ವಾಹನ: ಐದು ಮಂದಿ ಮೃತ್ಯು ,40ಕ್ಕೂ ಅಧಿಕ ಜನರಿಗೆ ಗಾಯ

Update: 2021-11-22 08:11 GMT

Screengrab(Twitter/@TPostMillennial)
 

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ರವಿವಾರ ಕ್ರಿಸ್‌ಮಸ್ ಮೆರವಣಿಗೆಗೆ ವಾಹನವೊಂದು ನುಗ್ಗಿದ ಪರಿಣಾಮ ಐದು ಮಂದಿ ಮೃತಪಟ್ಟಿದ್ದು,  40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 4:30 ನಂತರ ಸಂಭವಿಸಿದ ಘಟನೆಯ ಕುರಿತು ಅಧಿಕಾರಿಗಳು ಇನ್ನೂ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

"ಐದು ಜನರು ಸಾವನ್ನಪ್ಪಿದ್ದಾರೆ ಹಾಗೂ  40 ಜನರು ಗಾಯಗೊಂಡಿದ್ದಾರೆ ಎಂದು ನಾವು ಖಚಿತಪಡಿಸಬಹುದು. ಆದಾಗ್ಯೂ, ನಾವು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಂತೆ ಈ ಸಂಖ್ಯೆಗಳು ಬದಲಾಗಬಹುದು" ಎಂದು ವೌಕೇಶ ಪೊಲೀಸ್ ಇಲಾಖೆ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

"ವೌಕೇಶಾ ಕ್ರಿಸ್‌ಮಸ್ ಪರೇಡ್ ನಡೆಯುತ್ತಿದ್ದಾಗ ಕೆಂಪು ಕಾರೊಂದು ಬ್ಯಾರಿಕೇಡ್‌ಗಳನ್ನು ಭೇದಿಸಿ, ಪಶ್ಚಿಮಕ್ಕೆ, ಮುಖ್ಯ ರಸ್ತೆಯಲ್ಲಿ ಸಾಗಿತು" ಎಂದು ಪೊಲೀಸ್ ಮುಖ್ಯಸ್ಥ ಡಾನ್ ಥಾಂಪ್ಸನ್ ಸುದ್ದಿಗಾರರಿಗೆ ತಿಳಿಸಿದರು.

"ವಾಹನವು ಮಕ್ಕಳು ಸೇರಿದಂತೆ 20 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯ ಪರಿಣಾಮವಾಗಿ ಕೆಲವು ಸಾವುನೋವುಗಳು ಸಂಭವಿಸಿವೆ" ಎಂದು ಅವರು ಹೇಳಿದರು.

ಒಟ್ಟು 11 ವಯಸ್ಕರು ಹಾಗೂ  12 ಮಕ್ಕಳನ್ನು ಆರು  ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಸ್ಟೀವನ್ ಹೊವಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News