ಅಕಾಲಿಕ ಅತಿವೃಷ್ಟಿ: ಸರಕಾರ ನೆರವಿಗೆ ಧಾವಿಸಲಿ

Update: 2021-11-23 05:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಕಡೆ ಅಕಾಲಿಕ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಬೆಳೆಗಳು ಹಾಳಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಅನೇಕ ಹಳ್ಳಿ ಮತ್ತು ನಗರಗಳಲ್ಲಿ ಮನೆಗಳು ಕುಸಿದು ಜನಸಾಮಾನ್ಯರು ಬೀದಿಗೆ ಬಿದ್ದಿದ್ದಾರೆ.ರಸ್ತೆಗಳು ಸಂಚರಿಸಲಾಗದಷ್ಟು ಹಾಳಾಗಿವೆ, ಸೇತುವೆಗಳು ಕುಸಿದು ಬಿದ್ದಿವೆ. ವಿಪರೀತ ಮಳೆಯ ಪರಿಣಾಮವಾಗಿ ಹದಿನೈದಕ್ಕೂ ಹೆಚ್ಚು ಮಂದಿ ಅಸು ನೀಗಿದ್ದಾರೆ. ಬಂಗಾಳ ಕೊಲ್ಲಿ ಮತ್ತು ಅರಬಿ ಸಮುದ್ರಗಳಲ್ಲಿ ವಾಯುಭಾರ ಕುಸಿತದಿಂದಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಇನ್ನೂ ಒಂದು ವಾರ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೊಯ್ಲಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಮಣ್ಣಿನ ಮಕ್ಕಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವಾರು ತಾಲೂಕುಗಳ ಜನ ಕೆಲವು ದಿನ ಸೂರ್ಯನ ಬೆಳಕನ್ನೇ ಕಂಡಿಲ್ಲ.

ಶಿವಮೊಗ್ಗ, ಉತ್ತರ ಕನ್ನಡ ಮುಂತಾದ ಕಡೆ ಭತ್ತದ ಕಟಾವು ಮಾಡಲು ಮಳೆ ಅವಕಾಶವನ್ನೇ ನೀಡುತ್ತಿಲ್ಲ. ಕೊಯ್ಲು ಮಾಡಿದ ಬೆಳೆಯನ್ನು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆ ಇಲ್ಲದೆ ಬೆಳೆ ಕೊಳೆತು ಹೋಗುತ್ತಿದೆ. ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕ ಬಳ್ಳಾಪುರ, ಕೋಲಾರ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ವಿಪರೀತ ಮಳೆಯಿಂದ ರಾಗಿ ಬೆಳೆ ನಾಶವಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ತೊಗರಿ ಗಿಡಗಳು ಹೂವು ಬಿಡಬೇಕಾದ ಸಮಯವಿದು. ಆದರೆ ಮಳೆಯ ಪರಿಣಾಮ ವಾಗಿ ತೊಗರಿ ಹೂವುಗಳು ಉದುರಿ ಹೋಗುತ್ತಿವೆ. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಾಫಿ, ಕಾಳು ಮೆಣಸು ಮತ್ತು ಅಡಿಕೆ ಬೆಳೆಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಈ ಅಕಾಲಿಕ ಮಳೆಗೆ ಏನು ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಷಯ. ಭೂ ಮಂಡಲ ಬಿಸಿಯಾಗುತ್ತಿರುವುದರಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಮಳೆ ಚಕ್ರ ತನ್ನ ದಿಕ್ಕು ಬದಲಿಸಿದೆ. ಹೀಗಾಗಿ ಬೆಳೆ ಪದ್ಧತಿ, ಬಿತ್ತನೆ ಅವಧಿಯಲ್ಲಿ ಮಾರ್ಪಾಡು ಮಾಡಬೇಕೇ ಎಂಬ ಬಗ್ಗೆ ಕೃಷಿ ಪರಿಣಿತರಲ್ಲಿ ಚರ್ಚೆಗಳು ನಡೆದಿವೆ.

ಅದೇನೇ ಇರಲಿ. ಇಂತಹ ಸಂಕಷ್ಟ ಕಾಲದಲ್ಲಿ ರೈತರ, ಜನಸಾಮಾನ್ಯರ ನೆರವಿಗೆ ಬರಬೇಕಾದ ಸರಕಾರ ಏನು ಮಾಡುತ್ತಿದೆ? ರಾಜ್ಯದ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಸಚಿವರು, ಶಾಸಕರು ವಿಧಾನ ಪರಿಷತ್ ಚುನಾವಣೆಯ ರಾಜಕಾರಣದಲ್ಲಿ ಮುಳುಗಿದ್ದಾರೆ. ಮಳೆಯಿಂದ ತತ್ತರಿಸಿದ ಪ್ರದೇಶಗಳಿಗೆ ಭೇಟಿ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದೇ? ಮಂತ್ರಿ, ಶಾಸಕರು ಒತ್ತಟ್ಟಿಗೆ ಇರಲಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ನಿಮ್ಮನ್ನು ಚುನಾಯಿಸಿ ಅಧಿಕಾರ ನೀಡಿದ ಜನರ ನೋವು ಸಂಕಟಗಳಿಗಿಂತ ವಿಧಾನ ಪರಿಷತ್ ಚುನಾವಣೆ ನಿಮಗೆ ಮುಖ್ಯವಾಯಿತೇ?

ಸರಕಾರದ ಸೂತ್ರ ಹಿಡಿದವರು ಕಾಟಾಚಾರದ ಹೇಳಿಕೆ ನೀಡಿ ಘೋಷಣೆ ಮಾಡಿದರೆ ಬೀದಿಗೆ ಬಿದ್ದವರ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುವುದಿಲ್ಲ. ಮಳೆಯಿಂದ ಹೆಚ್ಚು ನಷ್ಟವನ್ನು ಅನುಭವಿಸುತ್ತಿರುವವರು ಸಣ್ಣ ಮತ್ತು ಮಧ್ಯಮ ರೈತರು. ಕೋವಿಡ್ ಕಾಲದಲ್ಲಿ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆ ಅನುಭವಿಸಿದ ಜನರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸರಕಾರ ಮಳೆಯಿಂದಾಗಿ ಯಾವ್ಯಾವ ಬೆಳೆಗೆ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಬೇಕು. ನಷ್ಟಕ್ಕೊಳಗಾದ ಬೆಳೆಗಳು ಹಾಗೂ ರೈತರ ಪಟ್ಟಿಯನ್ನು ಸಿದ್ಧಪಡಿಸಿ ಸೂಕ್ತವಾದ ಪರಿಹಾರವನ್ನು ವಿಳಂಬ ಮಾಡದೆ ನೀಡಬೇಕಾಗಿದೆ. ಒಕ್ಕಲುತನವನ್ನೇ ನಂಬಿದ ಕೃಷಿ ಕೂಲಿಕಾರರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಅವರ ಬದುಕಿಗೆ ನೆಮ್ಮದಿ ನೀಡಬೇಕು. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯದ ನೆರವಿಗೆ ಬರಬೇಕು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಲಾಜಿಲ್ಲದೆ ನೆರವಿಗಾಗಿ ಒಕ್ಕೂಟ ಸರಕಾರದ ಮೇಲೆ ಒತ್ತಡ ತರಬೇಕು. ಪ್ರತಿಪಕ್ಷಗಳು ಕೂಡ ಚುನಾವಣಾ ರಾಜಕೀಯದಲ್ಲಿ ಮುಳುಗದೆ ಮಳೆಯಿಂದ ತೊಂದರೆಗೀಡಾಗಿರುವ ಜನರ ನೆರವಿಗೆ ಬರುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು.

ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದ ಬೆಳೆಗೆ ಹಾನಿಯಾಗಿರುವ ಬಗ್ಗೆ ಸೋಮವಾರ ಸಮೀಕ್ಷೆ ಆರಂಭಿಸಿರುವುದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಆದರೆ ಅಕಾಲಿಕ ವಿಪರೀತ ಮಳೆ ಸುರಿಯಲಾರಂಭಿಸಿ ಹದಿನೈದು ದಿನಗಳಾದವು. ಒಕ್ಕೂಟ ಸರಕಾರ ಇಷ್ಟು ತಡಮಾಡಿ ಕಾಟಾಚಾರಕ್ಕೆ ಸ್ಪಂದಿಸುತ್ತಿರುವುದು ಸರಿಯಲ್ಲ. ತಡವಾಗಿ ಸ್ಪಂದಿಸಿದರೂ ನಷ್ಟಕ್ಕೆ ಒಳಗಾದ ರೈತರಿಗೆ, ಜನಸಾಮಾನ್ಯರಿಗೆ ಪರಿಹಾರ ನೀಡಲು ವಿಳಂಬ ಆಗಬಾರದು. ರಾಜ್ಯ ಮತ್ತು ಒಕ್ಕೂಟ ಸರಕಾರಗಳು ತುರ್ತಾಗಿ ಜನರ ನೆರವಿಗೆ ಬರಬೇಕು.

ಭಾರೀ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರವಿವಾರ ಚಿಕ್ಕ ಬಳ್ಳಾಪುರದಲ್ಲಿ ಘೋಷಿಸಿರುವುದು ಸೂಕ್ತವಾಗಿದೆ. ಆದರೆ ಇದು ಬರೀ ಘೋಷಣೆ ಯಾಗಿ ಉಳಿಯಬಾರದು. ಆಡಳಿತ ಯಂತ್ರವನ್ನು ಚುರುಕುಗೊಳಿಸಿ, ಅಧಿಕಾರಶಾಹಿಯನ್ನು ಎಚ್ಚರಿಸಿ ಕಾರ್ಯೋನ್ಮುಖಗೊಳಿಸಿದರೆ ಮಾತ್ರ ಸರಕಾರದ ಹೇಳಿಕೆ ಸಾರ್ಥಕವಾಗುತ್ತದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಳೆ ಬಂದರೆ ಮನೆಯೊಳಗೆ ಹಾಗೂ ಬಹು ಅಂತಸ್ತಿನ ವಸತಿ ಸಂಕೀರ್ಣಗಳಲ್ಲಿ ನೀರು ನುಗ್ಗಿ ಅನಾಹುತವಾಗುವುದು ಹೊಸದಲ್ಲ. ಇದು ಪ್ರತಿ ವರ್ಷ ಮಳೆಗಾಲದಲ್ಲಿ ಸಂಭವಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಬಹು ಹಿಂದೆ ನೀರು ಹರಿದು ಹೋಗಲು ನಿರ್ಮಿಸಲಾದ ರಾಜ ಕಾಲುವೆಗಳ ಒತ್ತುವರಿ ಹಾಗೂ ಅವುಗಳ ಮೇಲೆ ಅಕ್ರಮ ಕಟ್ಟಡಗಳ ನಿರ್ಮಾಣವಲ್ಲದೆ ಬೇರೇನೂ ಅಲ್ಲ. ಅನೇಕ ಕಡೆ ಕೆರೆಗಳನ್ನು ಒತ್ತುವರಿ ಮಾಡಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿರುವುದರಿಂದ ಮಳೆ ನೀರು ಮನೆಯೊಳಗೆ ನುಗ್ಗಿ ಸಾಕಷ್ಟು ತೊಂದರೆಯಾಗುತ್ತದೆ. ಸರಕಾರ ದೃಢ ಮನಸ್ಸು ಮಾಡಿ ಕೆರೆ ಒತ್ತುವರಿ ಹಾಗೂ ರಾಜ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಜನಪ್ರತಿನಿಧಿಗಳು,ಅಧಿಕಾರಿಗಳು ಹೊಂದಿಕೊಂಡು ಕೆಲಸ ಮಾಡಿದರೆ ಮಾತ್ರ ಇಂತಹ ನೈಸರ್ಗಿಕ ಪ್ರಕೋಪಗಳನ್ನು ಎದುರಿಸಲು ಸಾಧ್ಯ.

ನೈಸರ್ಗಿಕ ಪ್ರಕೋಪದ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಒಕ್ಕೂಟ ಸರಕಾರ ತಡ ಮಾಡದೆ ನೆರವಿಗೆ ಬರಬೇಕು. ಕರ್ನಾಟಕದ ಪಾಲಿನ ಜಿಎಸ್‌ಟಿ ತೆರಿಗೆ ಹಣವನ್ನಾದರೂ ಬಿಡುಗಡೆ ಮಾಡಬೇಕು. ಅಲ್ಲದೆ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News