ಬುಧವಾರದಿಂದ ಜೂನಿಯರ್ ಹಾಕಿ ವಿಶ್ವಕಪ್

Update: 2021-11-23 18:33 GMT
photo:twitter/@SujitBisoyiTOI

ಭುವನೇಶ್ವರ, ನ. 23: ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಈ ಕ್ರೀಡೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ಬುಧವಾರ ಆರಂಭಗೊಳ್ಳಲಿದೆ.

ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಆರು ಬಾರಿಯ ಚಾಂಪಿಯನ್ ಜರ್ಮನಿ, ಬೆಲ್ಜಿಯಮ್, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಸ್ಪೇನ್, ಅರ್ಜೆಂಟೀನ, ಪಾಕಿಸ್ತಾನ, ದಕ್ಷಿಣ ಕೊರಿಯ ಮತ್ತು ಆತಿಥೇಯ ಭಾರತ ಸೇರಿದಂತೆ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಜಾಗತಿಕ ಹಾಕಿ ಪಂದ್ಯಾವಳಿಗಳನ್ನು ಸಂಘಟಿಸಿದ ಅನುಭವವನ್ನು ಒಡಿಶಾ ಹೊಂದಿದೆಯಾದರೂ, ಪ್ರಸಕ್ತ ಪಂದ್ಯಾವಳಿಯು ಕೋವಿಡ್ ಕಾಲದಲ್ಲಿ ನಡೆಯುತ್ತಿರುವುದರಿಂದ ಅದಕ್ಕೆ ವಿಶೇಷ ಮಹತ್ವವಿದೆ.

‘‘ಪಂದ್ಯಾವಳಿಯು ಒಡಿಶಾದಲ್ಲಿ ನಡೆಯಲಿದೆ ಎಂಬುದಾಗಿ ಈ ವರ್ಷದ ಸೆಪ್ಟಂಬರ್‌ನಲ್ಲಷ್ಟೇ ಘೋಷಿಸಲಾಗಿತ್ತು. ಈ ಮಟ್ಟದ ಪಂದ್ಯಾವಳಿಯೊಂದನ್ನು, ಅದರಲ್ಲೂ ಮುಖ್ಯವಾಗಿ ಸಾಂಕ್ರಾಮಿಕದ ಅವಧಿಯಲ್ಲಿ ಆಯೋಜಿಸಲು ತುಂಬಾ ಕಡಿಮೆ ಸಮಯಾವಕಾಶ ನಮಗೆ ಲಭಿಸಿದೆ. ಆದರೆ, ದೇಶದ ಪ್ರತಿಷ್ಠೆಯನ್ನು ಪರಿಗಣಿಸಿ ನಾವು ಈ ಕ್ರೀಡಾಕೂಟವನ್ನು ಆಯೋಜಿಸಲು ತಕ್ಷಣ ಒಪ್ಪಿಕೊಂಡಿದ್ದೇವೆ’’ ಎಂದು ಅಂದು ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದರು.

ಸಾಂಕ್ರಾಮಿಕದ ಕಾರಣದಿಂದಾಗಿ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳು ಪಂದ್ಯಾವಳಿಯಿಂದ ಹಿಂದೆ ಸರಿದಿವೆ.

ಭಾರತ, ಬೆಲ್ಜಿಯಮ್, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ಗಳು ಪ್ರಶಸ್ತಿ ಗೆಲ್ಲಬಹುದಾದ ನೆಚ್ಚಿನ ತಂಡಗಳಾಗಿವೆ. ಅದೇ ವೇಳೆ, ಕೊರೋನ ವೈರಸ್ ಸಾಂಕ್ರಾಮಿಕ ಹರಡುವ ಭೀತಿಯಲ್ಲಿ ಈ ಬಾರಿಯ ಜೂನಿಯರ್ ವಿಶ್ವಕಪ್ ಪಂದ್ಯಗಳನ್ನು ಸ್ಟೇಡಿಯಮ್‌ನಲ್ಲಿ ವೀಕ್ಷಿಸುವಂತಿಲ್ಲ.

► ಇಂದು ಭಾರತ ಫ್ರಾನ್ಸ್

ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಹಾಲಿ ಚಾಂಪಿಯನ್ ಭಾರತವು ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಭಾರತವು ಮೂರನೇ ಪ್ರಶಸ್ತಿಯೊಂದಿಗೆ ವರ್ಷವನ್ನು ಮುಗಿಸುವ ನಿರೀಕ್ಷೆಯಲ್ಲಿದೆ.

ಭಾರತವು ತನ್ನ ಮೊದಲ ಜೂನಿಯರ್ ವಿಶ್ವಕಪ್‌ನ್ನು ಆಸ್ಟ್ರೇಲಿಯದಲ್ಲಿ 2001ರಲ್ಲಿ ಗೆದ್ದಿತ್ತು. ಬಳಿಕ, ಕಳೆದ ಬಾರಿ ಲಕ್ನೊದಲ್ಲಿ ನಡೆದ 2016ರ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಮತ್ತೊಮ್ಮೆ ಬಾಚಿದೆ.

ವಿವೇಕ್ ಸಾಗರ್ ಪ್ರಸಾದ್ ನೇತೃತ್ವದ ಭಾರತೀಯ ತಂಡದ ಹಲವು ಸದಸ್ಯರು ಈ ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಿ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ. ವಿವೇಕ್ ಸಾಗರ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡದ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News