ರಷ್ಯಾದಿಂದ ಎಕೆ-203 ರೈಫಲ್ ಖರೀದಿಗೆ ಹಾದಿ ಸುಗಮ

Update: 2021-11-24 02:28 GMT

ಹೊಸದಿಲ್ಲಿ: ಧೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಎಕೆ-203 ಕಲಶ್ನಿಕೊವ್ ರೈಫಲ್ ಒಪ್ಪಂದಕ್ಕೆ ಇದ್ದ ಅಡೆ ತಡೆಗಳು ನಿವಾರಣೆಯಾಗಿದೆ. ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಮಾತುಕತೆಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳುವ ವೇಳೆ ಉಭಯ ದೇಶಗಳು ಒಪ್ಪಂದಕ್ಕೆ ಅಂಕಿತ ಹಾಕುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ಈ ಜಂಟಿ ಸಹಭಾಗಿತ್ವದ ಯೋಜನೆಯ ಪ್ರಮುಖ ಆಯಾಮಗಳ ಬಗ್ಗೆ ಚರ್ಚಿಸಲಾಗಿದ್ದು, ಒಪ್ಪಂದ ಅಂತಿಮಪಡಿಸಲು ಇದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ 5000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದದ ಅಡಿಯಲ್ಲಿ ಇಂಡೋ-ರಷ್ಯನ್ ಜಂಟಿ ಸಹಭಾಗಿತ್ವದಲ್ಲಿ ಆರು ಲಕ್ಷ ಎಕೆ-203 ರೈಫಲ್‌ಗಳನ್ನು ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಥಾಪನೆಯಾಗಲಿರುವ ಫ್ಯಾಕ್ಟರಿಯಲ್ಲಿ ಮುಂದಿನ 10 ವರ್ಷಗಳಲ್ಲಿ ಉತ್ಪಾದಿಸಲಾಗುತ್ತದೆ. ಈ ಸಂಬಂಧ ಇದ್ದ ವ್ಯಾಜ್ಯದ ಅಂಶಗಳನ್ನು ಬಗೆಹರಿಸಲಾಗಿದ್ದು, ವೆಚ್ಚ ಅಂಶಗಳನ್ನು ಇದೀಗ ಸೇರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ರಾಜನಾಥ್ ಸಿಂಗ್ ಅವರು ಮಾಸ್ಕೊ ಭೇಟಿಗೆ ತೆರಳಿದ ಸಂದರ್ಭದಲ್ಲಿ ಉಭಯ ದೇಶಗಳು ಈ ಒಪ್ಪಂದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದವು.

ಈ ಜಂಟಿ ಸಹಭಾಗಿತ್ವದ ಯೋಜನೆಯಡಿ ಎಕೆ-203 ಕಲಶ್ನಿಕೊವ್ ರೈಫಲ್‌ಗಳನ್ನು ರಫ್ತು ಮಾಡುವ ಸಾಧ್ಯತೆಯನ್ನೂ ಪರಿಶೀಲಿಸುವ ನಿರೀಕ್ಷೆ ಇದೆ. ಡಿಸೆಂಬರ್ 6ರಂದು ಮೋದಿ ಜತೆಗೆ ಚರ್ಚೆಗೆ ಪುಟಿನ್ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News