ಕೃಷಿ ಕಾನೂನುಗಳು: ಸಿಖ್ಖರನ್ನು ಗುರಿ ಮಾಡುತ್ತಿರುವ ನಕಲಿ ಸಿಖ್ ಪ್ರೊಫೈಲ್ ಗಳು ಬಯಲು !

Update: 2021-11-24 14:01 GMT
Photo: bbc.com

ಹೊಸದಿಲ್ಲಿ: ಸಿಖ್ಖರೆಂದು ಹೇಳಿಕೊಳ್ಳುವ ಮತ್ತು ವಿಭಜನೆಯ ನಿರೂಪಣೆಗಳನ್ನು ಉತ್ತೇಜಿಸುವ ಜನರ ನಕಲಿ ಸಾಮಾಜಿಕ ಜಾಲತಾಣ ಪ್ರೊಫೈಲ್ಗಳ ಜಾಲವನ್ನು ಬಹಿರಂಗಪಡಿಸಲಾಗಿದೆ. ಸೆಂಟರ್ ಫಾರ್ ಇಂಫಾರ್ಮೇಶನ್ ರೆಸಿಲಿಯನ್ಸ್ ಬುಧವಾರ ಪ್ರಕಟಣೆಗೆ ಮುಂಚೆ ವಿಶೇಷವಾಗಿ ಬಿಬಿಸಿ ಜತೆ ಹಂಚಿಕೊಂಡಿರುವ ಹೊಸ ವರದಿ, ಈ ನಕಲಿ ನೆಟ್ವರ್ಕ್ನಲ್ಲಿ 80 ಖಾತೆಗಳನ್ನು ಗುರುತಿಸಿದೆ, ಅವುಗಳು ನಕಲಿಯಾಗಿದ್ದ ಕಾರಣ ಅವುಗಳನ್ನು ಈಗ ಅಮಾನತುಗೊಳಿಸಲಾಗಿದೆ.

ಪ್ರಭಾವಿ ಕಾರ್ಯಾಚರಣೆಯು ಟ್ವಿಟರ್, ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಾದ್ಯಂತ ಹಿಂದೂ ರಾಷ್ಟ್ರೀಯತೆ ಮತ್ತು ಭಾರತ ಸರ್ಕಾರದ ಪರವಾದ ನಿರೂಪಣೆಗಳನ್ನು ಪ್ರಚಾರ ಮಾಡಲು ಈ ಖಾತೆಗಳನ್ನು ಬಳಸಿಕೊಂಡಿದೆ ಎಂದು ವರದಿ ತಿಳಿಸಿದೆ.

ವರದಿಯ ಲೇಖಕ ಬೆಂಜಮಿನ್ ಸ್ಟ್ರಿಕ್ ಪ್ರಕಾರ, "ಸಿಖ್ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಮೌಲ್ಯಗಳ ಸುತ್ತಲಿನ ಪ್ರಮುಖ ವಿಷಯಗಳ ಮೇಲಿನ ಗ್ರಹಿಕೆಗಳನ್ನು ಬದಲಾಯಿಸುವುದು" ಈ ನೆಟ್‍ವರ್ಕ್‍ನ ಗುರಿಯಾಗಿದೆ.

ಈ ನೆಟ್‍ವರ್ಕ್ ಭಾರತ ಸರ್ಕಾರದೊಂದಿಗೆ ನೇರವಾದ ಸಂಪರ್ಕ ಹೊಂದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಹಾಗೂ ಈ ಬಗ್ಗೆ ಪ್ರತಿಕ್ರಿಯೆಗಾಗಿ ಬಿಬಿಸಿ ವಿನಂತಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಈ ನೆಟ್‍ವರ್ಕ್ ಸ್ವಯಂಚಾಲಿತ "ಬಾಟ್‍ಗಳ" ಬದಲಿಗೆ ಸ್ವತಂತ್ರ ವ್ಯಕ್ತಿಗಳಂತೆ ನಟಿಸುವ ನೈಜ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ "ಕೈಗೊಂಬೆ" ಖಾತೆಗಳನ್ನು ಬಳಸಿಕೊಂಡಿವೆ.

ನಕಲಿ ಪ್ರೊಫೈಲ್‍ಗಳು ಸಿಖ್ ಹೆಸರುಗಳನ್ನು ಬಳಸಿಕೊಂಡಿವೆ ಮತ್ತು "ನಿಜವಾದ ಸಿಖ್ಖರು" ಎಂದು ಬಿಂಬಿಸಿಕೊಂಡಿವೆ. ಅವರು ವಿಭಿನ್ನ ರಾಜಕೀಯ ನಿಲುವುಗಳನ್ನು ದೃಢೀಕರಿಸಲು #RealSikh  ಹ್ಯಾಶ್‍ಟ್ಯಾಗ್‍ಗಳನ್ನು ಮತ್ತು ಅಪಖ್ಯಾತಿಗೊಳಿಸಲು #FakeSikh ಹ್ಯಾಶ್‍ಟ್ಯಾಗ್ ಬಳಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸೆಂಟರ್ ಫಾರ್ ಇನ್ಫಾರ್ಮೇಷನ್ ರೆಸಿಲಿಯನ್ಸ್ (ಸಿಐಆರ್) ಎಂಬ ಲಾಭರಹಿತ ಸಂಸ್ಥೆಯ ಈ ವರದಿಯು, ಈ ನೆಟ್‍ವರ್ಕ್‍ನಲ್ಲಿನ ಅನೇಕ ಖಾತೆಗಳು ಹಲವಾರು ಪ್ಲಾಟ್‍ಫಾರ್ಮ್‍ಗಳಲ್ಲಿ ಒಂದೇ ನಕಲಿ ಪ್ರೊಫೈಲ್‍ಗಳನ್ನು ಬಳಸಿರುವುದನ್ನು ಕಂಡುಹಿಡಿದಿದೆ. ಈ ಖಾತೆಗಳು ಒಂದೇ ಹೆಸರುಗಳು, ಪ್ರೊಫೈಲ್ ಚಿತ್ರಗಳು ಮತ್ತು ಕವರ್ ಫೋಟೋಗಳನ್ನು ಹಂಚಿಕೊಂಡಿವೆ ಮತ್ತು ಒಂದೇ ರೀತಿಯ ಪೋಸ್ಟ್‍ಗಳನ್ನು ಪ್ರಕಟಿಸಿವೆ.

ಹಲವು ಖಾತೆಗಳು ಪಂಜಾಬಿ ಚಿತ್ರರಂಗದ ನಟಿಯರು ಸೇರಿದಂತೆ ಸೆಲೆಬ್ರಿಟಿಗಳ ಪ್ರೊಫೈಲ್ ಚಿತ್ರಗಳನ್ನು ಬಳಸಿಕೊಂಡಿವೆ.

ಸೆಲೆಬ್ರಿಟಿಗಳ ಪ್ರೊಫೈಲ್ ಚಿತ್ರವನ್ನು ಬಳಸಿದ ಮಾತ್ರಕ್ಕೆ ಖಾತೆಯನ್ನು ನಕಲಿ ಎಂದು ಸಾಬೀತುಪಡಿಸಲಾಗದು. ಆದಾಗ್ಯೂ, ಸಂಯೋಜಿತ ಸಂದೇಶ ಕಳುಹಿಸುವಿಕೆ, ಆಗಾಗ್ಗೆ ಬಳಸುವ ಹ್ಯಾಶ್‍ಟ್ಯಾಗ್‍ಗಳು, ಇದೇ ರೀತಿಯ ಜೀವನಚರಿತ್ರೆ ವಿವರಣೆಗಳು ಮತ್ತು ಅನುಯಾಯಿಗಳ ಮಾದರಿಗಳೊಂದಿಗೆ ಸಂಯೋಜಿಸಲ್ಪಟ್ಟ ಚಿತ್ರಗಳು, ಈ ಪ್ರತಿಯೊಂದು ಖಾತೆಗಳು ಅಸಲಿ ಅಲ್ಲ ಎಂಬುದಕ್ಕೆ ಪುರಾವೆಗಳನ್ನು ಸೇರಿಸಿದೆ ಎಂದು ವರದಿ ಹೇಳುತ್ತದೆ.

ಬಿಬಿಸಿ ಈ ಚಿತ್ರಗಳನ್ನು ಬಳಸಿದ ಎಂಟು ಪ್ರಸಿದ್ಧ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು ಹಾಗೂ ಅವರಿಂದ ಪ್ರತಿಕ್ರಿಯೆಯನ್ನು ವಿನಂತಿಸಿತು. ಒಬ್ಬರು ತಮ್ಮ ಮ್ಯಾನೇಜ್‍ಮೆಂಟ್ ಮೂಲಕ ಪ್ರತಿಕ್ರಿಯಿಸಿ, ತಮ್ಮ ಚಿತ್ರವನ್ನು ಈ ರೀತಿ ಬಳಸಿರುವುದು ಅವರಿಗೆ ತಿಳಿದಿಲ್ಲವೆಂದು ದೃಢಪಡಿಸಿದರು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮತ್ತೊಬ್ಬ ಸೆಲೆಬ್ರಿಟಿಯ ಮ್ಯಾನೇಜ್‍ಮೆಂಟ್ ತಮ್ಮ ಕಕ್ಷಿದಾರರ ಜತೆ ಸಂಬಂಧ ಹೊಂದಿದ ಇಂತಹ ಸಾವಿರಾರು ನಕಲಿ ಖಾತೆಗಳಿವೆ ಮತ್ತು ಆ ಬಗ್ಗೆ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆಂದು ಬಿಬಿಸಿ ವರದಿ ಮಾಡಿದೆ.

ರಾಜಕೀಯ ಉದ್ದೇಶಗಳು

ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಒಂದು ವರ್ಷದ ನಂತರ ಕಳೆದ ಶುಕ್ರವಾರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು,

ಒಂದು ವರ್ಷದ ಹಿಂದೆ ಇದೇ ವಾರ ಪ್ರಾರಂಭವಾದ ರೈತರ ಪ್ರತಿಭಟನೆಗಳು ಮತ್ತು ದಶಕಗಳಷ್ಟು ಹಳೆಯದಾದ ಖಾಲಿಸ್ತಾನಿ ಸ್ವಾತಂತ್ರ್ಯ ಚಳವಳಿಯನ್ನು ಈ ಜಾಲ ಪ್ರಮುಖವಾಗಿ ಚರ್ಚೆಗೆ ಗುರಿಮಾಡಿದ ಎರಡು ವಿಷಯಗಳು. ವರದಿಯ ಪ್ರಕಾರ, ಈ ಖಾತೆಗಳು ಸಿಖ್ ಸ್ವಾತಂತ್ರ್ಯದ ಯಾವುದೇ ಕಲ್ಪನೆಯನ್ನು ಉಗ್ರಗಾಮಿ ಎಂದು ಲೇಬಲ್ ಮಾಡಲು ಪ್ರಯತ್ನಿಸಿದವು ಮತ್ತು ರೈತರ ಪ್ರತಿಭಟನೆಗಳನ್ನು ಅನಧಿಕೃತ ಎಂದು ಬಿಂಬಿಸಲು "ಖಲಿಸ್ತಾನಿ ಭಯೋತ್ಪಾದಕರು" ಪ್ರತಿಭಟನೆ ಹೈಜಾಕ್ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು.

ಆದರೆ ಅದಕ್ಕೂ ಮೊದಲು, ಭಾರತ ಸರ್ಕಾರ ಕೂಡಾ ರೈತರ ಪ್ರತಿಭಟನೆಯಲ್ಲಿ "ಖಾಲಿಸ್ತಾನಿಗಳು ನುಸುಳಿದ್ದಾರೆ" ಎಂದು ಪ್ರತಿಪಾದಿಸಿತ್ತು.

ಇದು ಉದ್ದೇಶಪೂರ್ವಕ ರಾಜಕೀಯ ನಡೆ ಆಗಿರಬಹುದು ಎಂದು ಪ್ರತಿಭಟನೆ ಮುಂದುವರಿಸಿರುವ ರೈತರು ನಂಬಿದ್ದಾರೆ.

"ಈ ಖಾತೆಗಳನ್ನು ಸರ್ಕಾರದ ಆದೇಶದ ಮೇರೆಗೆ ಸ್ಥಾಪಿಸಲಾಗಿದೆ ಎಂದು ನಾವು ನಂಬುತ್ತೇವೆ ಮತ್ತು ಪ್ರತಿಭಟನೆಗಳ ವಿರುದ್ಧ ನಿರೂಪಣೆಯನ್ನು ಹೊಂದಿಸಲು ಇದನ್ನು ರೂಪಿಸಲಾಗಿದೆ" ಎಂದು ಪ್ರತಿಭಟನೆಯಲ್ಲಿ ಕುಳಿತಿರುವ ಸುಮಾರು 30 ಒಕ್ಕೂಟಗಳಲ್ಲಿ ಒಂದಾದ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ಜಗಜಿತ್ ಸಿಂಗ್ ದಲೇವಾಲ್ ಹೇಳಿದ್ದಾರೆ.

ಕೆಲವು ಖಾತೆಗಳು ಬ್ರಿಟನ್ ಮತ್ತು ಕೆನಡಾದಲ್ಲಿನ ಸಿಖ್ ಸಮುದಾಯಗಳನ್ನು ಖಾಲಿಸ್ತಾನಿ ಚಳುವಳಿಗೆ ಆಶ್ರಯ ನೀಡಿವೆ ಎಂದು ಬಣ್ಣಿಸಿದ್ದವು.

ಈ ಖಾತೆಗಳು ಸಾವಿರಾರು ಅನುಯಾಯಿಗಳನ್ನು ಹೊಂದಿದ್ದವು ಮತ್ತು ನೆಟ್‍ವರ್ಕ್‍ನಿಂದ ಪೋಸ್ಟ್ ಗಳನ್ನು ನಿಜವಾದ ಪ್ರಭಾವಿಗಳು ಇಷ್ಟಪಟ್ಟಿದ್ದಾರೆ ಮತ್ತು ಮರುಟ್ವೀಟ್ ಮಾಡಿದ್ದಾರೆ ಮತ್ತು ಸುದ್ದಿ ಸೈಟ್‍ಗಳಲ್ಲಿ ಉಲ್ಲೇಖಿಸಲಾಗಿತ್ತು.

ಅನೇಕ ಪ್ರಭಾವದ ಕಾರ್ಯಾಚರಣೆಗಳು ನೈಜ ವ್ಯಕ್ತಿಗಳನ್ನು ಅವರು ರಚಿಸುವ ನಕಲಿ ಖಾತೆಗಳ ಜತೆ ಸಂವಾದ ನಡೆಸಲು ವಿಫಲವಾಗುತ್ತವೆ. ಈ ನೆಟ್‍ವರ್ಕ್‍ನ ವಿಷಯದಲ್ಲಿ, ಸಂಶೋಧನೆಯು ಸಾರ್ವಜನಿಕ ವ್ಯಕ್ತಿಗಳ ದೃಢೀಕೃತ ಖಾತೆಗಳೊಂದಿಗೆ ಸಂವಾದ ನಡೆಸಿದ ಮತ್ತು ಅನುಮೋದಿಸಲ್ಪಟ್ಟ ಪೋಸ್ಟ್ ಗಳನ್ನು ಗುರುತಿಸಿದೆ.

ಸುದ್ದಿ ಬ್ಲಾಗ್‍ಗಳು ಮತ್ತು ಕಾಮೆಂಟರಿ ಸೈಟ್‍ಗಳಲ್ಲಿ ಎಂಬೆಡ್ ಮಾಡಲಾದ ನಕಲಿ ಪ್ರೊಫೈಲ್‍ಗಳಿಂದ ವಿಷಯವನ್ನು ಕೂಡಾ ವರದಿ ಗುರುತಿಸಿದೆ.

ಪ್ರಭಾವದ ಕಾರ್ಯಾಚರಣೆಗಳ ತಜ್ಞರು ಇದನ್ನು "ವರ್ಧನೆ" ಎಂದು ವಿವರಿಸುತ್ತಾರೆ, ಮತ್ತು ಈ ನೆಟ್‍ವರ್ಕ್ ಹೆಚ್ಚು ಹೆಚ್ಚು ಸ್ವೀಕರಿಸಿದಂತೆಲ್ಲ ಅದು ಹೆಚ್ಚು ಪರಿಣಾಮವನ್ನು ಬೀರುತ್ತದೆ ಎಂದು ಹೇಳುತ್ತಾರೆ.

ನೆಟ್‍ವರ್ಕ್‍ನಲ್ಲಿನ ಪೋಸ್ಟ್ ಗಳೊಂದಿಗೆ ಸಂವಹನ ನಡೆಸಿದ ಕೆಲವು ದೃಢೀಕೃತ ಖಾತೆಗಳನ್ನು ಬಿಬಿಸಿ ಸಂಪರ್ಕಿಸಿದೆ.

ಟ್ವಿಟರ್ ನಲ್ಲಿ ತನ್ನನ್ನು ಮಾನವೀಯ ಮತ್ತು ಸಮಾಜ ಸೇವಕ ಎಂದು ಬಣ್ಣಿಸಿಕೊಂಡಿರುವ ರೂಬಲ್ ನಾಗಿ, ನಕಲಿ ಖಾತೆಗಳ ಟ್ವೀಟ್‍ಗಳಲ್ಲಿ ಒಂದಕ್ಕೆ ಎರಡು ಚಪ್ಪಾಳೆ ತಟ್ಟುವ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. "ಇದು ನಕಲಿ ಖಾತೆ ಎಂದು ತಿಳಿದು ಬೇಸರವಾಗಿದೆ" ಎಂದು ಅವರು ಹೇಳಿದರು.

ತಮ್ಮನ್ನು ಭೌಗೋಳಿಕ ರಾಜಕೀಯ ಮಿಲಿಟರಿ ವಿಶ್ಲೇಷಕ ಎಂದು ಕರೆದುಕೊಂಡಿರುವ ಕರ್ನಲ್ ರೋಹಿತ್ ದೇವ್ ಅವರು ಈ ಖಾತೆಗಳ ಪೋಸ್ಟ್ ಗಳಲ್ಲಿ ಒಂದಕ್ಕೆ ಥಮ್ಸ್-ಅಪ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ, ಆದರೆ ಹ್ಯಾಂಡಲ್‍ನ ಹಿಂದೆ ಇರುವ ವ್ಯಕ್ತಿಯನ್ನು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ಪ್ರಭಾವ ನೆಟ್‍ವರ್ಕ್‍ಗಳು ನಿರ್ದಿಷ್ಟ ದೃಷ್ಟಿಕೋನದಿಂದ ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ ಎಂದು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ಮತ್ತು ತಂತ್ರಜ್ಞಾನ ನೀತಿ ವೆಬ್‍ಸೈಟ್ ಮೀಡಿಯಾನಾಮ ಸಂಪಾದಕ ನಿಖಿಲ್ ಪಹ್ವಾ ಹೇಳುತ್ತಾರೆ.

"ಈ 80ಕ್ಕೂ ಹೆಚ್ಚು ಖಾತೆಗಳು ಟ್ರೆಂಡ್ ಮಾಡಲು ಸಾಕಾಗಲಾರವು; ಆದರೆ ಸ್ಥಿರವಾದ ಪೋಸ್ಟ್ ನೊಂದಿಗೆ, ಅವರು ಕೆಲ ದೃಷ್ಟಿಕೋನವನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಾರೆ" ಎಂದು ಅವರು ಅಭಿಪ್ರಾಯಪಡುತ್ತಾರೆ.

"ಇದು ಅತ್ಯಾಧುನಿಕ ವಿಧಾನವೆಂದು ತೋರುತ್ತದೆ ಮತ್ತು ದೊಡ್ಡ ಕಾರ್ಯಾಚರಣೆಯ ಭಾಗವಾಗಿದೆ" ಎನ್ನುವುದು ಅವರ ಅಭಿಮತ.

ಭಾರತದಲ್ಲಿ ಸಿಖ್ಖರಿಗೆ ಅತಿ ದೊಡ್ಡ ಭಾಷೆ ಎನಿಸಿದ ಪಂಜಾಬಿಯಲ್ಲಿ ಪಠ್ಯವನ್ನು ಒಳಗೊಂಡಿರುವ ವಿಷಯವು ತುಂಬಾ ಕಡಿಮೆ ಮತ್ತು ಬಹುತೇಕ ಎಲ್ಲಾ ವಿಷಯಗಳು ಇಂಗ್ಲಿಷ್‍ನಲ್ಲಿದ್ದವು.

ಎಲ್ಲ ಕಡೆಯಿಂದ ರೈತರ ಪ್ರತಿಭಟನೆಗಳ ಸುತ್ತ ರಾಜಕೀಯ ಚಟುವಟಿಕೆ ಇತ್ತು, ಜನರು ಅವರನ್ನು ಬೆಂಬಲಿಸಲು ಮತ್ತು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ಶ್ರೀ ಪಹ್ವಾ ಗಮನಸೆಳೆದಿದ್ದಾರೆ.

"ರಾಜಕೀಯ ನಿರೂಪಣೆಯ ಯುದ್ಧವನ್ನು ಗೆಲ್ಲಲು ಇದು ಆಟದ ಒಂದು ಭಾಗವಾಗಿದೆ" ಎನ್ನುವುದು ಅವರ ನಿಲುವು

ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ಅನ್ನು ಹೊಂದಿರುವ ಕಂಪನಿಯಾದ ಟ್ವಿಟರ್ ಮತ್ತು ಮೆಟಾದೊಂದಿಗೆ ಬಿಬಿಸಿ ಈ ವರದಿಯನ್ನು ಹಂಚಿಕೊಂಡಿದ್ದು, ಪ್ರತಿಕ್ರಿಯೆಗಾಗಿ ವಿನಂತಿಸಿಕೊಂಡಿದೆ.

"ಪ್ಲಾಟ್‍ಫಾರ್ಮ್ ಮ್ಯಾನಿಪ್ಯುಲೇಷನ್" ಮತ್ತು ನಕಲಿ ಖಾತೆಗಳನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸಿದೆ.

"ಈ ಸಮಯದಲ್ಲಿ, ವ್ಯಾಪಕವಾದ ಸಮನ್ವಯ, ಏಕ ವ್ಯಕ್ತಿಗಳಿಂದ ಬಹು ಖಾತೆಗಳ ಬಳಕೆ ಅಥವಾ ಇತರ ಪ್ಲಾಟ್‍ಫಾರ್ಮ್ ಮ್ಯಾನಿಪ್ಯುಲೇಷನ್ ತಂತ್ರಗಳಿಗೆ ಯಾವುದೇ ಪುರಾವೆಗಳಿಲ್ಲ." ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.

ಮೆಟಾ ತನ್ನ "ಅಸಮರ್ಪಕ ನಡವಳಿಕೆ" ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿನ ಖಾತೆಗಳನ್ನು ಸಹ ತೆಗೆದುಹಾಕಿದೆ.

ಈ ಖಾತೆಗಳು "ಜನರನ್ನು ತಮ್ಮ ವಿಷಯದ ಮೂಲ ಮತ್ತು ಜನಪ್ರಿಯತೆಯ ಬಗ್ಗೆ ತಪ್ಪುದಾರಿಗೆಳೆಯುತ್ತವೆ ಮತ್ತು ಜನರನ್ನು ಸ್ಪ್ಯಾಮ್ ಮಾಡಲು ಮತ್ತು ನಮ್ಮ ಜಾರಿಯಿಂದ ತಪ್ಪಿಸಿಕೊಳ್ಳಲು ನಕಲಿ ಖಾತೆಗಳನ್ನು ಬಳಸಿದವು" ಎಂದು ಮೆಟಾ ವಕ್ತಾರರು ಹೇಳಿದ್ದಾರೆ.

ಕೃಪೆ: bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News