ಪ್ರಧಾನಿ ಭೇಟಿಯಾದ ಮಮತಾ ಬ್ಯಾನರ್ಜಿ: ಬಿಎಸ್‌ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ ಪ್ರಸ್ತಾವ
ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಿಎಸ್‌ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆಯನ್ನು ಪ್ರಸ್ತಾವಿಸಿ ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಒಕ್ಕೂಟ ರಚನೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು ಎಂದು ಮೋದಿಗೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾನರ್ಜಿ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಜಾಗತಿಕ ವ್ಯಾಪಾರ ಶೃಂಗಸಭೆಯನ್ನು ಉದ್ಘಾಟಿಸಲು ತಾನು ಪ್ರಧಾನಿಯನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದರು.
ತ್ರಿಪುರಾದಲ್ಲಿ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಪ್ರಸ್ತಾವಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಕುರಿತು ಮಾತನಾಡಿದ ಅವರು, "ಅಖಿಲೇಶ್ (ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್) ಅವರಿಗೆ ನಮ್ಮ ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ" ಎಂದು ಹೇಳಿದರು.