ಅಮೇರಿಕಾದ ಎನ್ ಜಿ ಒ ವರದಿ: ಜಗತ್ತಿನ ಅತಿ ಹೆಚ್ಚು ಪೀಡಕರಲ್ಲಿ ಮೋದಿ, ಆರೆಸ್ಸೆಸ್ ತಾಲಿಬಾನ್ ಹೋಲಿಕೆ

Update: 2021-11-25 05:09 GMT
ಪ್ರಧಾನಿ ನರೇಂದ್ರ ಮೋದಿ (File Photo)

ವಾಷಿಂಗ್ಟನ್: ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ ಎಂಬ ಹೆಸರಿನ ಅಮೆರಿಕಾದ ಕ್ರೈಸ್ತ ಎನ್‌ಜಿಒ ತನ್ನ "2011 ಪರ್ಸಿಕ್ಯೂಟರ್ ಆಫ್ ದಿ ಇಯರ್ ಅವಾರ್ಡ್ಸ್'' ವರದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಅದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅತ್ಯಂತ ಹೆಚ್ಚು ದಬ್ಬಾಳಿಕೆ ನಡೆಸುವ ಜಗತ್ತಿನ ಏಳು ಮಂದಿ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನೂ ಹೆಸರಿಸಿದೆ. ವರದಿಯು ಆರೆಸ್ಸೆಸ್ ಅನ್ನು ತಾಲಿಬಾನ್ ಮತ್ತು ಬೋಕೋ ಹರಾಮ್ ಜತೆ ಹೋಲಿಸಿದೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅತ್ಯಂತ ಹೆಚ್ಚು ದಬ್ಬಾಳಿಕೆ ನಡೆಸುವ ಜಗತ್ತಿನ ಏಳು ರಾಷ್ಟ್ರಗಳ ಪೈಕಿ ಭಾರತವನ್ನೂ ಹೆಸರಿಸಿದೆ ಎಂದು ವರದಿಯಾಗಿದೆ.

ಮೋದಿ ಸರಕಾರ ಭಾರತದಲ್ಲಿ ಎಲ್ಲಾ ವಿಧದ ಅಸಮ್ಮತಿಗೂ ಸತತ ಶಿಕ್ಷೆ ನೀಡುತ್ತಲೇ ಬಂದಿದೆ, ಈ ದಬ್ಬಾಳಿಕೆಗೆ ಅಂತ್ಯ ಹಾಡಲು ಅಮೆರಿಕಾ ಮತ್ತದರ ಮಿತ್ರ ದೇಶಗಳು ಭಾರತದ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ವಿಧಿಸಬೇಕು ಎಂದು ವರದಿ ಆಗ್ರಹಿಸಿದೆ.

ಧಾರ್ಮಿಕ ಹಕ್ಕುಗಳ ಉಲ್ಲಂಘನೆ ನಡೆಸುವ ಹಾಗೂ ಈ ಉಲ್ಲಂಘನೆಗಳನ್ನು ಬೆಂಬಲಿಸುತ್ತಿರುವುದಕ್ಕಾಗಿ ಅಮೆರಿಕಾದ ಕಾಂಗ್ರೆಸ್ ಭಾರತವನ್ನು 'ಕಂಟ್ರಿ ಆಫ್ ಪರ್ಟಿಕ್ಯುಲರ್ ಕನ್ಸರ್ನ್' ಎಂದು ಘೋಷಿಸಬೇಕು ಎಂದು ವರದಿ ಆಗ್ರಹಿಸಿದೆ. ಆದರೆ ಕಳೆದ ವಾರವಷ್ಟೇ ಇಂತಹ ಒಂದು ಪ್ರಸ್ತಾವನೆಯನ್ನು ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ತಿರಸ್ಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ ವರದಿಯಲ್ಲಿ ಮೋದಿ ಹೊರತಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಧಾರ್ಮಿಕ ದಬ್ಬಾಳಿಕೆ ನಡೆಸುವವರ ಪಟ್ಟಿಯಲ್ಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಉತ್ತರ ಕೊರಿಯಾದ ಸವಾಧಿಕಾರಿ ಕಿಮ್ ಜಾಂಗ್-ಉನ್ ಕೂಡ ಈ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News