ನಾಯಿ ಮಾಂಸ ನಿಷೇಧ: ಕ್ರಿಯಾ ಪಡೆ ರಚಿಸಿದ ದಕ್ಷಿಣ ಕೊರಿಯಾ

Update: 2021-11-25 17:21 GMT
ಸಾಂದರ್ಭಿಕ ಚಿತ್ರ:PTI

ಸಿಯೋಲ್, ನ.25: ನಾಯಿ ಮಾಂಸ ಭಕ್ಷಣೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸುವುದಾಗಿ ದಕ್ಷಿಣ ಕೊರಿಯಾ ಗುರುವಾರ ಘೋಷಿಸಿದೆ.

ದೇಶದಲ್ಲಿ ಶತಮಾನಗಳಿಂದಲೂ ಚಾಲ್ತಿಯಲ್ಲಿರುವ ಸಂಪ್ರದಾಯವನ್ನು ಅಂತ್ಯಗೊಳಿಸುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷರು ಇತ್ತೀಚೆಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಯುವ ಜನಾಂಗ ನಾಯಿ ಮಾಂಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದರಿಂದ ಮತ್ತು ಸಾಕುಪ್ರಾಣಿಗಳಾಗಿ ನಾಯಿಗಳ ಬಗ್ಗೆ ಒಲವು ಹೆಚ್ಚಿರುವುದರಿಂದ ಆ ದೇಶದಲ್ಲಿ ನಾಯಿ ಮಾಂಸದ ಖಾದ್ಯ ಬಡಿಸುವ ಹೋಟೆಲ್‌ಗಳು ಕ್ರಮೇಣ ಕಡಿಮೆಯಾಗುತ್ತಿವೆ. ನಾಯಿ ಮಾಂಸ ಹೆಚ್ಚಿನವರು ತಿನ್ನದಿದ್ದರೂ ನಾಯಿ ಮಾಂಸ ನಿಷೇಧಕ್ಕೆ ಬಹುತೇಕ ಜನತೆ ವಿರೋಧಿಸುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯ ವರದಿ ತಿಳಿಸಿದೆ.

ನಾಯಿ ಮಾಂಸ ನಿಷೇಧದ ಬಗ್ಗೆ ಸಲಹೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು, ನಾಗರಿಕ ತಜ್ಞರು, ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಕೃಷಿ ಇಲಾಖೆ ಸಹಿತ 7 ಇಲಾಖೆಗಳ ಹೇಳಿಕೆ ತಿಳಿಸಿದೆ. ಆದರೆ ಈ ಉಪಕ್ರಮವು ನಾಯಿಮಾಂಸ ನಿಷೇಧದ ಪ್ರಥಮ ಪ್ರಕ್ರಿಯೆ ಎಂದು ಭಾವಿಸಲಾಗದು ಎಂದು ಸರಕಾರ ಹೇಳಿದ್ದು ಇದಕ್ಕೆ ನಾಯಿಗಳ ಮಾರಾಟಗಾರರು ಹಾಗೂ ಪ್ರಾಣಿ ಹಕ್ಕು ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜನತೆ ಏನನ್ನು ತಿನ್ನಬೇಕು ಎಂಬ ಹಕ್ಕಿನಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ.

ಇದನ್ನು ಪ್ರತಿಭಟಿಸಿ, ಸರಕಾರ ಆಯೋಜಿಸುವ ಯಾವುದೇ ಸಭೆಯಲ್ಲೂ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ ಎಂದು ವಾಣಿಜ್ಯ ಉದ್ದೇಶಕ್ಕಾಗಿ ನಾಯಿ ಸಾಕುವವರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜು ಯಾಂಗ್‌ಬಾಂಗ್ ಹೇಳಿದ್ದಾರೆ. ಸರಕಾರದ ಘೋಷಣೆಯಲ್ಲಿ ಯಾವುದೇ ದೃಢ ಯೋಜನೆಯಿಲ್ಲ. ಇದೊಂದು ನಿರಾಶಾಜನಕ ನಿರ್ಧಾರ ಎಂದು ಕೊರಿಯಾ ಪ್ರಾಣಿ ದಯಾ ಸಂಘದ ಮುಖ್ಯಸ್ಥ ಲೀ ವೋನ್ ಬಾಕ್ ಟೀಕಿಸಿದ್ದಾರೆ.

ನಾಯಿ ಮಾಂಸವನ್ನು ದಕ್ಷಿಣ ಕೊರಿಯಾದಲ್ಲಿ ಮಾತ್ರ ತಿನ್ನುವುದಿಲ್ಲ, ಚೀನಾ, ಉತ್ತರ ಕೊರಿಯಾ, ವಿಯೆಟ್ನಾಮ್‌ನಲ್ಲೂ ತಿನ್ನುತ್ತಾರೆ ದಕ್ಷಿಣ ಕೊರಿಯಾದಲ್ಲಿ ಪ್ರತೀ ವರ್ಷ ಆಹಾರಕ್ಕಾಗಿ ಸುಮಾರು 1ರಿಂದ 1.5 ಮಿಲಿಯನ್ ನಾಯಿಗಳನ್ನು ಹತ್ಯೆ ಮಾಡಲಾಗುತ್ತದೆ. ಮಾಂಸಕ್ಕಾಗಿ ನಾಯಿಗಳನ್ನು ಬೆಳೆಸುವ ಕಾರ್ಯದಲ್ಲಿ ಸಾವಿರಾರು ಮಂದಿ ತೊಡಗಿದ್ದಾರೆ. ಇವರಲ್ಲಿ ಬಹುತೇಕರು ಕಡುಬಡವರಾಗಿದ್ದು ಈಗಲೇ ನಾಯಿ ಮಾಂಸ ನಿಷೇಧಿಸಿದರೆ ಇವರೆಲ್ಲಾ ಬೀದಿಗೆ ಬೀಳಬಹುದು. ಆದ್ದರಿಂದ ಹಂತಹಂತವಾಗಿ ಮುಂದಿನ 20 ವರ್ಷದಲ್ಲಿ ನಾಯಿ ಮಾಂಸ ನಿಷೇಧಿಸುವ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News