ಲಾಭಾಂಶ ಇಳಿಕೆಗೆ ವಿರೋಧ: ಪಾಕಿಸ್ತಾನದಲ್ಲಿ ಪೆಟ್ರೋಲ್ ಮಾರಾಟಗಾರರ ಮುಷ್ಕರ

Update: 2021-11-25 17:50 GMT
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್, ನ.25: ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯೊಂದಿಗಿನ ಒಪ್ಪಂದದ ಅನ್ವಯ ತೆರಿಗೆ ಏರಿಸಿ ಆದಾಯ ಹೆಚ್ಚಿಸುವ ಸರಕಾರದ ನಿರ್ಧಾರದ ಕಾರಣ ಪೆಟ್ರೋಲ್ ಚಿಲ್ಲರೆ ಮಾರಾಟಗಾರರ ಲಾಭಾಂಶದಲ್ಲಿ ಇಳಿಕೆಯಾಗಿರುವುದನ್ನು ವಿರೋಧಿಸಿ ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ಆರಂಭವಾಗಿದೆ.

ಇದು ರಾಷ್ಟ್ರವ್ಯಾಪಿ ಮುಷ್ಕರವಾಗಿದ್ದು ಅನಿರ್ಧಿಷ್ಟಾವಧಿ ಮುಂದುವರಿಯಲಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಪೆಟ್ರೋಲ್ ಪಂಪ್‌ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಪಾಕಿಸ್ತಾನದ ಪೆಟ್ರೋಲ್ ಮಾರಾಟಗಾರರ ಸಂಘದ ಮಾಹಿತಿ ಕಾರ್ಯದರ್ಶಿ ಖ್ವಾಜಾ ಆಸಿಫ್ ಅಹ್ಮದ್ ಲಾಹೋರ್‌ನಲ್ಲಿ ಹೇಳಿದ್ದಾರೆ. ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಪ್ರತಿಭಟನೆ ಆರಂಭವಾಗಿದ್ದು ಬುಧವಾರ ಸಂಜೆಯಿಂದಲೇ ಪೆಟ್ರೋಲ್ ಪಂಪ್‌ಗಳ ಎದುರು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಭಟನೆಯ ಪರಿಣಾಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಪೆಟ್ರೋಲ್ ಪೂರೈಕೆಗೆ ಯಾವುದೇ ತೊಡಕಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೇಶದ ತೈಲ ಮತ್ತು ಗ್ಯಾಸ್ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಪೆಟ್ರೋಲ್ ಪಂಪ್‌ಗಳು ಎಂದಿನಂತೆಯೇ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದ್ದು ಈ ಬಗ್ಗೆ ನಿಗಾ ವಹಿಸಲು ಪ್ರಾಧಿಕಾರದ ತಂಡವನ್ನು ರಚಿಸಲಾಗಿದೆ. ಸುಗಮ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News