ಜಾತಿ ಮತ್ತು ಸಂವಿಧಾನ (ಅಂಬೇಡ್ಕರ್‌ರ ಬರಹದಿಂದ)

Update: 2021-11-26 02:56 GMT

ಅತ್ಯಂತ ಸಂಕೀರ್ಣವಾದ ಈ ಸಾಮಾಜಿಕ ಸಮಸ್ಯೆಯನ್ನು ನಿಭಾಯಿಸಲು, ಪ್ರಜಾಪ್ರಭುತ್ವ ಭಾರತದ ನೀತಿಯಲ್ಲಿ ಜಾತ್ಯತೀತತೆಯ ತತ್ವವಾಗಿ ಅಂಬೇಡ್ಕರ್ ಮಂಡಿಸಿದರು. ಅದಕ್ಕೆ ಸಂವಿಧಾನ ಬದ್ಧ ಅಧಿಕೃತತೆಯನ್ನು ನೀಡಲು ಒತ್ತಾಯಿಸಿದರು. ರಾಜಕೀಯ ತತ್ವ ಮತ್ತು ಸಾಮಾಜಿಕ ಬದುಕಿನ ಕ್ರಮದ ನಡುವೆ ಇನ್ನೂ ಹೊಂದಾಣಿಕೆ ಸಾಧ್ಯವಾಗದಿರುವ ಈ ಸಂದರ್ಭದಲ್ಲಿ ಈ ವಾದ ಮುಂದಿಡುವ ಚಿಂತನೆಗಳು ಮುಖ್ಯವಾದವು.

ಅಸ್ಪೃಶ್ಯರ ಬೇಡಿಕೆಗಳಿಂದ ಹುಟ್ಟಿಕೊಂಡಿರುವಂತಹ ಪ್ರಶ್ನೆಗಳಿಗೆ ಸಂವಿಧಾನದಲ್ಲಿ ಏಕೆ ಪರಿಹಾರವಿರಬೇಕೆಂದು ಕೇಳಬಹುದು. ಜಗತ್ತಿನಲ್ಲೆಲ್ಲೂ ಸಂವಿಧಾನದ ಕರ್ತೃಗಳಿಗೆ ಇಂತಹ ವಿಷಯಗಳನ್ನು ಪರಿಹರಿಸಬೇಕಾದ ಅನಿವಾರ್ಯತೆ ಉಂಟಾಗಿಲ್ಲ. ಇದೊಂದು ಮಹತ್ವಪೂರ್ಣ ಪ್ರಶ್ನೆ. ಈ ಪ್ರಶ್ನೆಗಳನ್ನು ಎತ್ತುವವರು ಮತ್ತು ಇವುಗಳು ಸಂವಿಧಾನಾತ್ಮಕವಾಗಿ ಮಹತ್ವ ಪೂರ್ಣವಾದವು ಎಂದು ಒತ್ತಾಯಿಸುವವರಲ್ಲಿ ಇದಕ್ಕೆ ಪರಿಹಾರವಿರಬೇಕೆಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಪ್ರಶ್ನೆಗೆ ಉತ್ತರ ತೀರಾ ಸ್ಪಷ್ಟವಿದೆ ಎಂದು ನನಗನ್ನಿಸುತ್ತದೆ. ಭಾರತದ ಸಾಮಾಜಿಕ ಲಕ್ಷಣವೇ ಈ ಪ್ರಶ್ನೆಗೆ ಸಂವಿಧಾನಾತ್ಮಕ ಮಹತ್ವವನ್ನೂ ನೀಡಿದೆ. ಇದಕ್ಕೆ ಹಿಂದೂಗಳ ಜಾತಿವ್ಯವಸ್ಥೆ ಮತ್ತು ಧಾರ್ಮಿಕ ವ್ಯವಸ್ಥೆಯೇ ಸಂಪೂರ್ಣವಾಗಿ ಹೊಣೆ. ಈ ಸಂಕ್ಷಿಪ್ತ ಹೇಳಿಕೆ, ಹಿಂದೂ ಜಾತಿ ಮತ್ತು ಧಾರ್ಮಿಕ ವ್ಯವಸ್ಥೆಯ ಸಾಮಾಜಿಕ ಮತ್ತು ರಾಜಕೀಯ ಪರಿಣಾಮದ ಬಗ್ಗೆ ತೃಪ್ತಿಕರವಾದ ವಿವರಣೆಯನ್ನು ವಿದೇಶೀಯರಿಗೆ ಒದಗಿಸುವುದಿಲ್ಲ ಆದರೆ ಈ ಲೇಖನದ ಮಿತಿಯಲ್ಲಿ ಸಂವಿಧಾನದ ಮೇಲೆ ಜಾತಿವ್ಯವಸ್ಥೆಯ ಪರಿಣಾಮಗಳನ್ನು ಕುರಿತು ಸಮಗ್ರವಾಗಿ ವಿವೇಚಿಸುವುದೂ ಅಸಾಧ್ಯ ಎನ್ನುವುದೂ ಅಷ್ಟೇ ನಿಜ. ಈ ವಿಷಯವನ್ನು ಕುರಿತು ಪೂರ್ಣವಾದ ಹಾಗೂ ವಿವರವಾದ ನಿರೂಪಣೆಗೆ ಸ್ವಲ್ಪ ಸಮಯದ ಹಿಂದೆ ಜಾತಿಗಳ ನಿರ್ಮೂಲದ ಬಗ್ಗೆ ನಾನು ಬರೆದಿರುವ ಪುಸ್ತಕವನ್ನು ನೋಡಬಹುದು. ಅದು ಹಿಂದೂಗಳ ಜಾತಿ ಮತ್ತು ಧಾರ್ಮಿಕ ವ್ಯವಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಶಾಖೆಗಳ ಸಂಕೀರ್ಣ ರಚನೆಯ ಪರಿಣಾಮದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಬಹುದು ಎಂದು ನಂಬಿದ್ದೇನೆ. ಈ ಲೇಖನದಲ್ಲಿ ಕೆಲವು ಸಾಮಾನ್ಯ ಸಮೀಕ್ಷೆಗಳನ್ನು ಮಾಡುವುದಕ್ಕೆ ಸೀಮಿತಗೊಳಿಸುತ್ತೇನೆ. ಸಂವಿಧಾನವನ್ನು ರಚಿಸುವಾಗ ಸಾಮಾಜಿಕ ರಚನೆಯನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡಿರಬೇಕು. ಸಾಮಾಜಿಕ ಶಕ್ತಿಗಳ ಚಟುವಟಿಕೆ ಸಾಮಾಜಿಕ ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿಲ್ಲ. ಅವು ರಾಜಕೀಯ ಕ್ಷೇತ್ರಕ್ಕೂ ವ್ಯಾಪಿಸಿಕೊಂಡಿದೆ. ಇದು ಅಸ್ಪೃಶ್ಯರ ನಿಲುವು, ಈ ನಿಲುವು ವಿವಾದಾತೀತ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ. ಹಿಂದೂಗಳಿಗೆ ಈ ವಾದದ ಬಗ್ಗೆ ಮತ್ತು ಅದರ ಬಲದ ಬಗ್ಗೆ ಸಂಪೂರ್ಣ ತಿಳಿದಿದೆ. ಆದರೆ ಹಿಂದೂ ಸಮಾಜದ ರಚನೆ, ಐರೋಪ್ಯ ಸಾಮಾಜಿಕ ರಚನೆಗಿಂತ ಎಲ್ಲಾ ರೀತಿಯಲ್ಲೂ ಭಿನ್ನವಾಗಿದೆ ಎಂಬುದನ್ನು ಅವರು ಅಲ್ಲಗಳೆಯುತ್ತಾರೆ. ಹಿಂದೂಗಳ ಜಾತಿ ವ್ಯವಸ್ಥೆ ಮತ್ತು ಪಾಶ್ಚಿಮಾತ್ಯರ ವರ್ಗವ್ಯವಸ್ಥೆ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳುವುದರ ಮೂಲಕ ಈ ವಾದವನ್ನು ಎದುರಿಸಲು ಪ್ರಯತ್ನಿಸುತ್ತಾರೆ. ಇದು ಸುಳ್ಳು ಎಂಬುದು ಸ್ಪಷ್ಟ ಮತ್ತು ಈ ವಾದ ಜಾತಿ ವ್ಯವಸ್ಥೆ ಮತ್ತು ವರ್ಗವ್ಯವಸ್ಥೆಯ ಬಗ್ಗೆ ಸಂಪೂರ್ಣ ಅಜ್ಞಾನವನ್ನು ತೋರಿಸುತ್ತದೆ, ಜಾತಿವ್ಯವಸ್ಥೆ, ಪ್ರತ್ಯೇಕತೆಯ ಪಿಡುಗನ್ನು ಅಂಟಿಸಿಕೊಂಡಿರುವ ಒಂದು ವ್ಯವಸ್ಥೆ. ಜಾತಿಯನ್ನು ಮತ್ತೊಂದರಿಂದ ಪ್ರತ್ಯೇಕಗೊಳಿಸುವುದನ್ನೇ ಒಂದು ಸದ್ಗುಣವನ್ನಾಗಿದೆ. ವರ್ಗ ವ್ಯವಸ್ಥೆಯಲ್ಲೂ ಪ್ರತ್ಯೇಕತೆ ಇದೆ, ಆದರೆ ಅದು ಪ್ರತ್ಯೇಕತೆಯನ್ನು ಒಂದು ಸದ್ಗುಣವೆಂದು ಭಾವಿಸುವುದಿಲ್ಲ ಅಥವಾ ಪರಸ್ಪರ ಸಾಮಾಜಿಕ ವ್ಯವಹಾರವನ್ನೂ ನಿಷೇಧಿಸುವುದಿಲ್ಲ. ವರ್ಗ ವ್ಯವಸ್ಥೆ ಗುಂಪುಗಳನ್ನು ಸೃಷ್ಟಿಸುತ್ತದೆ ಎಂಬುದು ನಿಜ. ಆದರೆ ಅವು ಜಾತಿ ಪಂಗಡಗಳಿಂತ ಭಿನ್ನವಾದವು, ವರ್ಗ ವ್ಯವಸ್ಥೆಯಲ್ಲಿನ ಗುಂಪುಗಳು ಕೇವಲ ಅಸಾಮಾಜಿಕವಾದವು, ಆದರೆ ಜಾತಿ ವ್ಯವಸ್ಥೆಯಲ್ಲಿನ ಜಾತಿಗಳು, ಅವುಗಳ ಪರಸ್ಪರ ಸಂಬಂಧದಲ್ಲಿ ನಿಶ್ಚಿತವಾಗಿ ಮತ್ತು ಇತ್ಯಾತ್ಮಕವಾಗಿ ಸಮಾಜ ವಿರೋಧಿಯಾದಂತಹವು. ಈ ವಿಶ್ಲೇಷಣೆ ನಿಜವಾದಲ್ಲಿ ಹಿಂದೂ ಸಮಾಜದ ಸಾಮಾಜಿಕ ವ್ಯವಸ್ಥೆ ಭಿನ್ನವಾದದ್ದು ಮತ್ತು ಅದರ ಪರಿಣಾಮವಾಗಿ ಅವರ ರಾಜಕೀಯ ರಚನೆಯೂ ಭಿನ್ನವಾದದ್ದಾಗಿರಲೇಬೇಕು. ಸಾಮಾನ್ಯ ಮಾತುಗಳಲ್ಲಿ ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ, ಅಸ್ಪೃಶ್ಯರು ಮನವಿ ಮಾಡಿಕೊಳ್ಳುತ್ತಿರುವುದು ಒಂದು ಗುರಿ ಮತ್ತು ಅದನ್ನು ಸಾಧಿಸುವ ಮಾರ್ಗ, ದೇಶ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರೂ ಬದಲಾಗಬೇಕು. ಯಾರು ತಮ್ಮ ಗುರಿಗೆ ಬದ್ಧರಾಗಿರುತ್ತಾರೋ ಅವರು ಈ ಅಂಶವನ್ನು ಒಪ್ಪಿಕೊಳ್ಳಬೇಕು ಮತ್ತು ಅವರು ದೃಷ್ಟಿಯಲ್ಲಿಟ್ಟುಕೊಂಡಿರುವ ಗುರಿ ನಿರರ್ಥಕವಾಗದಿರಬೇಕಾದರೆ ವಿವಿಧ ಮಾರ್ಗಗಳನ್ನು ಅಳವಡಿಸಲು ಸಮ್ಮತಿಸಬೇಕು.

ಈ ಸಂದರ್ಭದಲ್ಲಿ ನಾನು ಉಲ್ಲೇಖಿಸಲು ಬಯಸುವ ಮತ್ತೊಂದು ವಿಷಯವಿದೆ. ನಾನು ಹೇಳಿದಂತೆ ಹಿಂದೂ ಸಮಾಜದ ಜಾತಿಯ ತಳಹದಿಗೆ ಮತ್ತು ಅದರ ಸಾಮಾಜಿಕ ರಚನೆಗೆ ಹೊಂದಿಕೆಯಾಗುವಂತಹ ಭಿನ್ನವಾದ ರಾಜಕೀಯ ರಚನೆಯೂ ಅವಶ್ಯಕ. ಕೆಲವರು ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಹಿಂದೂ ಸಮಾಜದಿಂದ ಜಾತಿವ್ಯವಸ್ಥೆಯನ್ನು ನಿರ್ಮೂಲನ ಮಾಡಬಹುದು ಎಂದು ವಾದಿಸುತ್ತಾರೆ. ನಾನು ಇದನ್ನು ಒಪ್ಪುವುದಿಲ್ಲ. ಇಂತಹ ಅಭಿಪ್ರಾಯವನ್ನು ಪ್ರತಿಪಾದಿಸುವವರು, ಜಾತಿ ವ್ಯವಸ್ಥೆಯನ್ನು ಒಂದು ಕ್ಲಬ್ ಅಥವಾ ಒಂದು ಮುನಿಸಿಪಾಲಿಟಿ ಅಥವಾ ಹಳ್ಳಿಯ ಒಂದು ಸಮಿತಿಯಂತಹ ಒಂದು ಸಂಸ್ಥೆ ಎಂದು ಭಾವಿಸುತ್ತಾರೆ. ಇದೊಂದು ದೊಡ್ಡ ತಪ್ಪು. ಇಲ್ಲಿ ಜಾತಿಯೇ ಒಂದು ಧರ್ಮ. ಹಾಗಾಗಿ ಒಂದು ಧರ್ಮ ಏನೇ ಆದರೂ ಸಂಸ್ಥೆ ಆಗಲಿಕ್ಕೆ ಸಾಧ್ಯವಿಲ್ಲ. ಅದನ್ನು ಸಾಂಸ್ಥೀಕರಿಸಬಹುದು, ಆದರೆ ಅದೇ ಧರ್ಮವಲ್ಲ. ಧರ್ಮ, ಪ್ರತಿ ವ್ಯಕ್ತಿಯ ಬದುಕಿನಲ್ಲಿ ವ್ಯಾಪಿಸಿಕೊಂಡು ಅವನ ಸ್ವಭಾವವನ್ನು ರೂಪಿಸುವಂತಹ, ಅವನ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಅವನ ಆಸಕ್ತಿ-ನಿರಾಸಕ್ತಿಯನ್ನು ನಿರ್ಧರಿಸುವಂತಹ ಒಂದು ಪ್ರಭಾವ ಅಥವಾ ಒಂದು ಶಕ್ತಿ. ಈ ಇಷ್ಟಾನಿಷ್ಟಗಳು, ಕ್ರಿಯೆ, ಪ್ರತಿಕ್ರಿಯೆ, ಇವುಗಳು ತರಿದುಹಾಕಿ ಬಿಡಬಹುದಾದ ಸಂಸ್ಥೆಗಳಲ್ಲ. ಅವುಗಳನ್ನು ನಿಯಂತ್ರಿಸುವ ಹಾಗೂ ನಿಶ್ಚಲಗೊಳಿಸುವುದರಿಂದಷ್ಟೇ ಎದುರಿಸಬಹುದಾದಂತಹ ಪ್ರಭಾವ ಅಥವಾ ಶಕ್ತಿ ಅವುಗಳಾಗಿವೆ. ಸಾಮಾಜಿಕ ಶಕ್ತಿಗಳು ರಾಜಕೀಯವನ್ನು ಕಲುಷಿತಗೊಳಿಸದಂತೆ ಮತ್ತು ಕೆಲವೇ ಮಂದಿಯ ಅಧಿಕಾರವನ್ನು ಹೆಚ್ಚಿಸದಂತೆ, ಆ ಮೂಲಕ ಬಹುಸಂಖ್ಯಾತರ ಅವನತಿಗೆ ಕಾರಣವಾಗದಂತೆ ಅವುಗಳನ್ನು ನಿಯಂತ್ರಿಸಬೇಕು ಎಂದಾದಲ್ಲಿ ಈ ಸಾಮಾಜಿಕ ಶಕ್ತಿಗಳನ್ನು ಸಡಿಲಬಿಟ್ಟಲ್ಲಿ ಅವು ಉಂಟುಮಾಡಬಹುದಾದ ಪೂರ್ವಾಗ್ರಹಗಳನ್ನು ಎದುರಿಸಬಲ್ಲಂತಹ ಹಾಗೂ ಅನ್ಯಾಯಗಳನ್ನು ತೊಡೆದುಹಾಕುವಂತಹ ತಂತ್ರಗಳನ್ನು ಒಳಗೊಂಡಿರುವ ರಾಜಕೀಯ ರಚನೆಯನ್ನು ರೂಪಿಸಬೇಕು.

ಈವರೆಗೂ ಹಿಂದೂ ಸಮಾಜದ ವಿಲಕ್ಷಣ ಸಾಮಾಜಿಕ ರಚನೆಗೆ ಹೊಂದಿಕೊಳ್ಳುವ ಅಷ್ಟೇ ವಿಲಕ್ಷಣವಾದ ರಾಜಕೀಯ ರಚನೆಯ ಅವಶ್ಯಕತೆ ಇದೆ ಮತ್ತು ಬೇರೆ ದೇಶದ ಸಂವಿಧಾನ ಕರ್ತೃಗಳನ್ನು ಕಾಡದಿದ್ದ ಈ ಸಮಸ್ಯೆಗಳಿಂದ ಭಾರತೀಯ ಸಂವಿಧಾನ ಕರ್ತೃಗಳು ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ವಿವರಿಸಿದ್ದೇನೆ. ಭಾರತದ ಸಂವಿಧಾನದಲ್ಲಿ ಕೋಮುವಾದಿ ಯೋಜನೆಗೆ ಏಕೆ ಅವಕಾಶವಿರಬಾರದು ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅಸ್ಪೃಶ್ಯರಿಗೆ ಸ್ಥಾನವನ್ನು ಏಕೆ ನಿಗದಿಗೊಳಿಸಬೇಕು ಹಾಗೂ ಅದು ಅವರ ಪ್ರತ್ಯೇಕ ಆಸ್ತಿ ಎಂಬಂತೆ ಅವರಿಗೆ ಮೀಸಲಿಡಬೇಕು ಎನ್ನುವಂತಹ ನಿರ್ದಿಷ್ಟವಾದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಇಂತಹ ಬೇಡಿಕೆಗಳ ಸಮರ್ಥನೆ ಸುಲಭ ಹಾಗೂ ಸ್ಪಷ್ಟ. ಅಸ್ಪೃಶ್ಯರನ್ನು ಹಿಂದೂಗಳಿಂದ ಬೇರ್ಪಡಿಸಿರುವುದು ಕೇವಲ ಗೌಣವಾದ ಭಿನ್ನತೆಗಳಷ್ಟೇ ಅಲ್ಲ ಎಂಬ ನಿರಾಕರಿಸಲಾಗದ ಸತ್ಯದಿಂದಲೇ ಈ ಬೇಡಿಕೆಗಳಿಗೆ ಸಮರ್ಥನೆಯೂ ಹುಟ್ಟಿಕೊಳ್ಳುತ್ತದೆ. ಅದು ಮೂಲಭೂತ ವಿರಸ ಮತ್ತು ದ್ವೇಷಕ್ಕೆ ಸಂಬಂಧಿಸಿದ ವಿಷಯ. ಈ ದ್ವೇಷ ಮತ್ತು ವಿರಸಕ್ಕೆ ಯಾವ ಪುರಾವೆಯೂ ಬೇಕಿಲ್ಲ. ಹಿಂದೂಗಳು ಮತ್ತು ಅಸ್ಪೃಶ್ಯರ ನಡುವೆ ಅಂತರ್ಗತವಾಗಿರುವ ವೈರಕ್ಕೆ, ಅಸ್ಪೃಶ್ಯತಾ ವ್ಯವಸ್ಥೆಗಿಂತ ಬೇರಿನ್ನೇನು ಪುರಾವೆ ಬೇಕು? ಈ ವೈಷಮ್ಯವನ್ನು ಹಿನ್ನೆಲೆಯಲ್ಲಿಟ್ಟುಕೊಂಡಾಗ, ಹಿಂದೂಗಳಿಗೆ ಬ್ರಿಟಿಷರಿಂದ ಮುಕ್ತಿ ದೊರೆತು ಸ್ವಾತಂತ್ರ ದೊರಕಿದಾಗ, ಅವರು ಅಸ್ಪೃಶ್ಯರಿಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ನಂಬಿಕೊಳ್ಳಿ ಮತ್ತು ಅವರನ್ನು ನೆಚ್ಚಿಕೊಂಡಿರಿ ಎಂದು ಅಸ್ಪಶ್ಯರಿಗೆ ಹೇಳುವುದು ಸಾಧ್ಯವೇ ಇಲ್ಲ. ತಾನು ಹಿಂದೂಗಳನ್ನು ನಂಬುವುದಿಲ್ಲ ಎಂದು ಹೇಳುವ ಅಸ್ಪೃಶ್ಯ ತಪ್ಪಾಡುತ್ತಿದ್ದಾನೆ ಎಂದು ಯಾರು ತಾನೇ ಹೇಳಬಲ್ಲರು? ಅವನಿಗೆ ಒಬ್ಬ ಯುರೋಪಿಯನ್ ಎಷ್ಟು ಪರಕೀಯನೋ, ಒಬ್ಬ ಹಿಂದುವೂ ಅಷ್ಟೇ ಪರಕೀಯ ಮತ್ತು ಅದಕ್ಕಿಂತ ಹೆಚ್ಚಿನ ದುರಂತವೆಂದರೆ ಪರಕೀಯ ಐರೋಪ್ಯ ತಟಸ್ಥವಾಗಿರುತ್ತಾನೆ; ಆದರೆ ಒಬ್ಬ ಹಿಂದೂ, ತನ್ನ ವರ್ಗಕ್ಕೆ ಅತ್ಯಂತ ನಿರ್ಲಜ್ಜೆಯಿಂದ ಪಕ್ಷಪಾತ ತೋರುತ್ತಾನೆ ಮತ್ತು ಅಸ್ಪೃಶ್ಯರನ್ನು ದ್ವೇಷಿಸುತ್ತಾನೆ. ಹಿಂದೂಗಳು ಅಸ್ಪೃಶ್ಯರನ್ನು ಬೇರೆ ಜನಾಂಗದವರು ಎಂಬ ಕಾರಣಕ್ಕಲ್ಲದಿದ್ದರೂ, ಸಮಾಜದಲ್ಲಿ ತಿರಸ್ಕಾರಾರ್ಹವಾದ ವರ್ಗಕ್ಕೆ ಸೇರಿದವರು ಎಂದು ಶತಮಾನಗಳಿಂದಲೂ ಅವರನ್ನು ಕಡೆಗಣಿಸುತ್ತಾ ಅಲಕ್ಷ ಮಾಡುತ್ತಾ ಹಾಗೂ ತಮ್ಮವರಲ್ಲ ಎನ್ನುತ್ತಾ ಬಂದಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ತಮ್ಮದೇ ಆದ ಪೂರ್ವಾಗ್ರಹಗಳಲ್ಲಿ ಮುಳುಗಿರುವ ಮತ್ತು ಅಸ್ಪೃಶ್ಯರ ಆಕಾಂಕ್ಷೆಗಳನ್ನು ಎಂದೂ ಹಂಚಿಕೊಳ್ಳದೆ, ಅವರೊಂದಿಗೆ ಯಾವ ಸಂಬಂಧವನ್ನೂ ಹೊಂದದೆ ಅವರ ಆಸಕ್ತಿಗೆ ವಿರುದ್ಧವಾದ ಆಸಕ್ತಿಯನ್ನು ಹೊಂದಿರುವ ಹಿಂದೂಗಳು ತಮ್ಮದೇ ಆದ ನಡಾವಳಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಅಂತಹವರ ಕೈಗೆ ಅಸ್ಪೃಶ್ಯರು ತಮ್ಮ ಭವಿಷ್ಯವನ್ನೇಕೆ ಒಪ್ಪಿಸಬೇಕು? ವಾಸ್ತವಿಕವಾಗಿ ಅಸ್ಪೃಶ್ಯರಿಗೆ ವಿರುದ್ಧವಾದ ಆಸಕ್ತಿ ಮತ್ತು ಉದ್ದೇಶವನ್ನು ಹೊಂದಿರುವ ಅಸ್ಪೃಶ್ಯರಲ್ಲಿನ ಜ್ವಲಂತ ಸಮಸ್ಯೆಯ ಬಗ್ಗೆ ಸಹಾನುಭೂತಿಯನ್ನು ಹೊಂದಿರದ; ಅಸ್ಪಶ್ಯರಿಗಿಂತ ಭಿನ್ನವಾದ ಬೇಡಿಕೆ, ಬಯಕೆ ಹಾಗೂ ಆಸಕ್ತಿಯನ್ನು ಹೊಂದಿರುವ, ಅಸ್ಪಶ್ಯರ ಆಶಯಗಳಿಗೆ ವೈರಿಗಳಾದ: ಯಾವ ಕಾರಣಕ್ಕೂ ಖಂಡಿತವಾಗಿಯೂ ಅವರಿಗೆ ನ್ಯಾಯ ದೊರಕಿಸಿಕೊಡದ, ಅವರ ವಿರುದ್ಧ ಪಕ್ಷಪಾತ ಮನೋಭಾವ ಹೊಂದಿರುವ ಮತ್ತು ಅವರ ವಿರುದ್ಧ ಯಾವುದೇ ಬಗೆಯ ಅಮಾನವೀಯ ಆಚರಣೆಗಳನ್ನು ಬಳಸಲೂ ಹಿಂಜರಿಯದ ಜನರ ಕೈಯಲ್ಲಿ ತಮ್ಮ ಆಸಕ್ತಿಯನ್ನು ಕೊಡಲು ಹೇಗೆ ತಾನೆ ಒಬ್ಬ ಅಸ್ಪೃಶ್ಯ ಒಪ್ಪಬಹುದು? ಅಂತಹ ಜನರ ವಿರುದ್ಧ ಇರುವ ಏಕೈಕ ರಕ್ಷಣೆ ಎಂದರೆ, ಹಿಂದೂ ಬಹುಸಂಖ್ಯಾತರ ನಿರಂಕುಶತೆಯ ವಿರುದ್ಧ ರಕ್ಷಣೆಯಾಗಿ ರಾಜಕೀಯ ಹಕ್ಕನ್ನು ಸಂವಿಧಾನದಲ್ಲಿ ವ್ಯಾಖ್ಯಾನಿಸಬೇಕು. ಅಸ್ಪೃಶ್ಯರು ಈ ಸಂರಕ್ಷಣೆಗೆ ಒತ್ತಾಯಿಸುತ್ತಿರುವುದರಲ್ಲಿ ವೈಪರೀತ್ಯವಾದರೂ ಏನಿದೆ?

Writer - ಸಂಪಾದನೆ: ಬಿ.ಯು. ಸುಮಾ

contributor

Editor - ಸಂಪಾದನೆ: ಬಿ.ಯು. ಸುಮಾ

contributor

Similar News