ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದ ದಿಲ್ಲಿ ವಿಧಾನ ಸಭೆ

Update: 2021-11-26 18:14 GMT

ಹೊಸದಿಲ್ಲಿ, ನ. 26: ಲಖಿಂಪುರಖೇರಿ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಆಶಿಷ್ ಮಿಶ್ರಾ ಅವರ ತಂದೆ, ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಿಲ್ಲಿ ವಿಧಾನ ಸಭೆ ನಿರ್ಣಯ ಅಂಗೀಕರಿಸಿದೆ.

ಲಖಿಂಪುರಕೇರಿ ಹಿಂಸಾಚಾರ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರ ಹೆಸರು ಕೇಳಿ ಬರುತ್ತಿದ್ದಂತೆ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿ ಬಂದ ಬಳಿಕ ದಿಲ್ಲಿ ವಿಧಾನ ಸಭೆ ಈ ನಿರ್ಣಯ ತೆಗೆದುಕೊಂಡಿದೆ.

ಇದಲ್ಲದೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ಪ್ರಸ್ತಾಪಿತ ಕಾಯ್ದೆ, ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ಸಂದರ್ಭ ಮೃತಪಟ್ಟ ರೈತರ ಕುಟುಂಬದ ಸದಸ್ಯರಿಗೆ ಪರಿಹಾರ ನೀಡುವ ಕುರಿತಂತೆ ಕೂಡ ದಿಲ್ಲಿ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಉತ್ತರಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ಅಕ್ಟೋಬರ್ 3ರಂದು ನಡೆದ ರೈತರ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಬನ್ಬಿರ್‌ಪುರಕ್ಕೆ ಭೇಟಿ ನೀಡಲಿದ್ದ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ವೌರ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಲು ರೈತರು ಲಖಿಂಪುರಖೇರಿಯಲ್ಲಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News