ಡೆಲ್ಟಾ ಬಳಿಕ ಇದೀಗ ಒಮಿಕ್ರಾನ್: ನೀವು ತಿಳಿಯಲೇಬೇಕಾದ ಅಂಶಗಳು...

Update: 2021-11-27 02:54 GMT
ಫೈಲ್ ಫೋಟೊ

ಹೊಸದಿಲ್ಲಿ: ಮಾರಕ ಕೋವಿಡ್-19 ವೈರಸ್‌ನ ಹೊಸ ಪ್ರಭೇದ ವಿಶ್ವಾದ್ಯಂತ ಅರೋಗ್ಯ ತಜ್ಞರಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಕೆಲ ತಿಂಗಳುಗಳ ಹಿಂದೆ ವಿಶ್ವದ ಪ್ರತಿ ಖಂಡವನ್ನೂ ಅಲ್ಲೋಲ ಕಲ್ಲೋಲ ಮಾಡಿದ ಡೆಲ್ಟಾ ಪ್ರಬೇಧಕ್ಕಿಂತಲೂ ಅಪಾಯಕಾರಿ ಎನ್ನಲಾದ ಒಮಿಕ್ರಾನ್ ಪ್ರಬೇಧದ ವೈರಾಣುವನ್ನು ಹಲವು ಮಂದಿ ತಜ್ಞರು ಈಗಾಗಲೇ ಅತ್ಯಂತ ಆತಂಕಕಾರಿ ಎಂದು ಬಣ್ಣಿಸಿದ್ದಾರೆ.

ಅತ್ಯಧಿಕ ಪ್ರಸರಣ ಸಾಮರ್ಥ್ಯದ ಕಾರಣದಿಂದಾಗಿ ಬಿ.1.1.529 ಪ್ರಭೇದ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಹಲವು ದೇಶಗಳು ಈಗಾಗಲೇ ವಾಯು ಪ್ರಯಾಣವನ್ನು ನಿಷೇಧಿಸಲು ಮುಂದಾಗಿದ್ದು, ಜಾಗತಿಕ ಮಾರುಕಟ್ಟೆಯೂ ತಲ್ಲಣಗೊಂಡಿದೆ. ಅಪಾಯ ಸಾಧ್ಯತೆಯನ್ನು ಅಂದಾಜಿಸಲು ವಿಜ್ಞಾನಿಗಳು ತುರ್ತು ಸಭೆಗಳನ್ನು ನಡೆಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಒಮಿಕ್ರಾನ್ ಪ್ರಬೇಧವನ್ನು ಆತಂಕಕಾರಿ ಎಂದು ವರ್ಗೀಕರಿಸಿದೆ. ಡೆಲ್ಟಾಗಿಂತಲೂ ಹೆಚ್ಚಿನ ಅಪಾಯ ಸಾಧ್ಯತೆಯನ್ನು ತಂದೊಡ್ಡಲಿದೆ ಎಂದು ಡಬ್ಲ್ಯುಎಚ್‌ಓ ಎಚ್ಚರಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ಪ್ರಬೇಧ ಹುಟ್ಟಿಕೊಂಡಿದೆ ಎಂದು ನಂಬಲಾಗಿದ್ದು, ಇದು ಸೋಂಕಿನ ಪ್ರಮಾಣ ದಿಢೀರ್ ಹೆಚ್ಚಳಕ್ಕೆ ಕಾರಣವಾಗಿದೆ. ಬಿ.1.1.529 ಪ್ರಬೇಧದ ಸೋಂಕು ಮೊದಲ ಬಾರಿಗೆ ನವೆಂಬರ್ 9ರಂದು ಸಂಗ್ರಹಿಸಿದ ಮಾದರಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ. ಬೆಲ್ಜಿಯಂ, ಹಾಂಕಾಂಗ್, ಇಸ್ರೇಲ್ ಹಾಗೂ ದಕ್ಷಿಣ ಆಫ್ರಿಕಾದ ಪ್ರವಾಸಿಗಳಲ್ಲಿ ಈ ಪ್ರಭೇದದ ಸೋಂಕು ಕಂಡುಬಂದಿದೆ.

ಹಿಂದಿನ ಪ್ರಭೇದಗಳಿಗೆ ಹೋಲಿಸಿದರೆ, ಮರು ಸೋಂಕಿನ ಅಪಾಯ ಈ ಪ್ರಬೇಧದಲ್ಲಿ ಅಧಿಕ ಎನ್ನುವುದಕ್ಕೆ ಆರಂಭಿಕ ಪುರಾವೆಗಳು ಸಿಕ್ಕಿವೆ. ಅಂದರೆ ಒಮ್ಮೆ ಕೋವಿಡ್-19 ಸೋಂಕಿಗೆ ತುತ್ತಾದವರಿಗೆ ಮತ್ತೆ ಸೋಂಕು ತಗುಲುವ ಅಪಾಯ ಇದೆ. ಆಫ್ರಿಕಾದ ಬೋತ್ಸುವಾನಾದಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ ಸಂಶೋಧಕರು ಈ ಹೊಸ ಪ್ರಭೇದವನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಹಿಂದಿನ ಪ್ರಬೇಧಗಳಿಗೆ ಹೋಲಿಸಿದರೆ ಸುಮಾರು 30 ರೂಪಾಂತರಗಳು ಕಂಡುಬಂದಿದ್ದು, ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News