ಹೊಸ ಕೊರೋನ ವೈರಸ್ ಆತಂಕ; ಭಾರತ 'ಎ' ತಂಡದ ದ.ಆಫ್ರಿಕಾ ಕ್ರಿಕೆಟ್ ಪ್ರವಾಸ ಅಬಾಧಿತ:ಬಿಸಿಸಿಐ

Update: 2021-11-27 13:38 GMT
Photo: twitter

ಮುಂಬೈ: ಹೊಸ ಕೊರೋನವೈರಸ್ ಪ್ರಬೇಧದ ಬಗೆಗಿನ ಕಳವಳವು ಭಾರತ  'ಎ' ತಂಡದ ದಕ್ಷಿಣ ಆಫ್ರಿಕಾ ಕ್ರಿಕೆಟ್  ಪ್ರವಾಸದ ಮೇಲೆ ಕರಿನೆರಳು ಮೂಡಿಸಿದೆ. ಆದರೆ ಭಾರತದ ಆಫ್ರಿಕಾ ಕ್ರಿಕೆಟ್  ಪ್ರವಾಸವು ನಿಗದಿತವಾಗಿ ಮುಂದುವರಿಯುತ್ತದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ NDTV ಗೆ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಕ್ಷಿಣ ಆಫ್ರಿಕಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ಲೋಮ್‌ಫಾಂಟೈನ್‌ನಲ್ಲಿ ನಡೆದ ಭಾರತ 'ಎ' ಮತ್ತು ದಕ್ಷಿಣ ಆಫ್ರಿಕಾ 'ಎ' ನಡುವಿನ ಮೊದಲ ಅನಧಿಕೃತ ಟೆಸ್ಟ್ ನಾಲ್ಕನೇ ಮತ್ತು ಅಂತಿಮ ದಿನದ ಆಟವು ವಾಶ್ ಔಟ್ ಆದ ನಂತರ ಡ್ರಾದಲ್ಲಿ ಕೊನೆಗೊಂಡಿತು. ಏತನ್ಮಧ್ಯೆ, ಭಾರತೀಯ ಪುರುಷರ ಹಿರಿಯ ರಾಷ್ಟ್ರೀಯ ತಂಡವು ಡಿಸೆಂಬರ್ 9 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ.

"ಹೌದು, ಪ್ರವಾಸ ನಡೆಯುತ್ತಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಅರುಣ್ ಧುಮಾಲ್ NDTVಗೆ ತಿಳಿಸಿದರು.

ಹೊಸ ಕೊರೋನವೈರಸ್ ರೂಪಾಂತರ  ಬಿ.1.1.529  ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಾರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಹೊಸ ಪ್ರಬೇಧವನ್ನು ಗುರುತಿಸಲಾಗಿದೆ. ಈ ರೂಪಾಂತರವು ಬೋಟ್ಸ್ವಾನಾ ಸೇರಿದಂತೆ ಹತ್ತಿರದ ದೇಶಗಳಿಗೆ ಹರಡಿತು. ಅಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ, 100 ಕ್ಕೂ ಹೆಚ್ಚು ಪ್ರಕರಣಗಳು ಈ ರೂಪಾಂತರಕ್ಕೆ ಸಂಬಂಧಿಸಿವೆ.

ಭಾರತ 'ಎ' ತಂಡದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ನವೆಂಬರ್ 29 ರಿಂದ ನಡೆಯಲಿದೆ.

ಮುಂದಿನ ತಿಂಗಳು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಹಿರಿಯ ತಂಡದ ಸರಣಿಗೆ ಮುನ್ನ 'ಎ' ತಂಡದ ಪ್ರವಾಸವನ್ನು ಆಯೋಜಿಸಲಾಗಿದೆ.

ಭಾರತದ ಹಿರಿಯ ತಂಡವು ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಸರಣಿಯ ಭಾಗವಾಗಿ ಮೂರು ಟೆಸ್ಟ್ ಪಂದ್ಯಗಳು, ಮೂರು ಏಕದಿನಗಳು ಹಾಗೂ  ನಾಲ್ಕು ಟಿ-20 ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ.

ಡಿಸೆಂಬರ್ 17 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಟೆಸ್ಟ್‌ನೊಂದಿಗೆ ಸರಣಿ ಆರಂಭವಾಗಲಿದೆ. ನಂತರ ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಹಾಗೂ  ಜನವರಿ 3 ರಿಂದ ಕೇಪ್ ಟೌನ್‌ನಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ.

ಮೊದಲ ಏಕದಿನ ಪಂದ್ಯವು  ಜನವರಿಯಲ್ಲಿ ಪಾರ್ಲ್‌ನಲ್ಲಿ ನಡೆಯಲಿದೆ. ನಂತರ ಕೇಪ್‌ಟೌನ್‌ನಲ್ಲಿ ಎರಡು ಏಕದಿನಗಳು ಜನವರಿ 14 ಮತ್ತು 16 ರಂದು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News