ಅಸಮ್ಮತಿ ಸೂಚಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ದಿಲ್ಲಿ ಹೈಕೋರ್ಟ್

Update: 2021-11-27 08:40 GMT

ಹೊಸದಿಲ್ಲಿ: ಅಸಮ್ಮತಿಯ ದನಿಗಳನ್ನು ಅಥವಾ ಬೌದ್ಧಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅಥವಾ ಅಮುಕಲು ಯತ್ನಿಸಿದರೆ ಪ್ರಜಾಪ್ರಭುತ್ವ ತೀವ್ರ ಅಪಾಯದಲ್ಲಿರಲಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಅಭಿಪ್ರಾಯ ಪಟ್ಟಿದೆ. "ನೀವು ಹೇಳುವುದಕ್ಕೆ ನನ್ನ ಸಂಪೂರ್ಣ ಅಸಮ್ಮತಿಯಿದೆಯಾದರೂ  ಅದನ್ನು ಹೇಳುವ ನಿಮ್ಮ ಹಕ್ಕನ್ನು ನಾನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ,'' ಎಂದು ಖ್ಯಾತ ಫ್ರೆಂಚ್ ಲೇಖಕ ವೋಲ್ಟೇರ್ ಅವರ ಮಾತನ್ನೂ ಹೈಕೋರ್ಟ್ ಉಲ್ಲೇಖಿಸಿದೆ.

"ಸಂವಿಧಾನದ 18ನೇ ವಿಧಿಯನ್ವಯ ಖಾತ್ರಿಪಡಿಸಲಾದ ಸ್ವಾತಂತ್ರ್ಯವನ್ನು ಕೇವಲ ಬಹುಸಂಖ್ಯಾತ ಅಭಿಪ್ರಾಯಕ್ಕೆ ತಕ್ಕ ಮಾತುಗಳನ್ನು ಅಭಿವ್ಯಕ್ತಪಡಿಸಲು ಬಳಸಬೇಕೆಂದೇನಿಲ್ಲ. ಪ್ರಸ್ತುತ ವಿಚಾರಗಳು ಅಥವಾ ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತೆ  ವಿರೋಧ ಸೂಚಿಸುವ ಅಥವಾ ಅಸಮ್ಮತಿ ವ್ಯಕ್ತಪಡಿಸುವ ಅಥವಾ ವಿರೋಧ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳವಾಗಿದೆ,'' ಎಂದು ನ್ಯಾಯಮೂರ್ತಿ ಯಶವಂತ್ ವರ್ಮ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಅವರ 'ಸನ್‌ರೈಸ್ ಓವರ್ ಅಯ್ಯೋಧ್ಯ' ಕೃತಿಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ.

ಹಿಂದುತ್ವ ಗುಂಪುಗಳನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೊಕೊ ಹರಾಮ್ ಸಂಘಟನೆಗೆ ಸಲ್ಮಾನ್ ಖುರ್ಷೀದ್ ತಮ್ಮ ಕೃತಿಯಲ್ಲಿ ಹೋಲಿಕೆ ಮಾಡಿರುವುದರಿಂದ ಅದು ಸಾಕಷ್ಟು ವಿವಾದಕ್ಕೀಡಾಗಿದೆ.

ಈ ಕೃತಿಯಿಂದ ನಾಲ್ಕು ಕಡೆಗಳಲ್ಲಿ ಕೋಮು ಸಂಬಂಧ ಘಟನೆಗಳಿಗೆ ಕಾರಣವಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ "ಅವರಿಗೆ ಅದನ್ನು ಓದಲು ಯಾರೂ ಹೇಳಿಲ್ಲ, ಅವರು ತಮ್ಮ ಕಣ್ಣುಗಳನ್ನು ಮುಚ್ಚಬಹುದಾಗಿತ್ತು ಹಾಗೂ ಅದನ್ನು ಓದದೇ ಇರಬಹುದಾಗಿತ್ತು,'' ಎಂದು ನ್ಯಾಯಾಧೀಶರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News