ಕೊರೋನವೈರಸ್: ದಕ್ಷಿಣ ಆಫ್ರಿಕಾದಿಂದ ಆಗಮಿಸುವ ಪ್ರಯಾಣಿಕರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್

Update: 2021-11-27 14:22 GMT
ಸಾಂದರ್ಭಿಕ ಚಿತ್ರ:PTI

ಮುಂಬೈ,ನ.27: ಕೊರೋನವೈರಸ್‌ನ ಹೊಸ ಪ್ರಭೇದವು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಮತ್ತು ಅವರ ಸ್ಯಾಂಪಲ್‌ಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಶನಿವಾರ ಇಲ್ಲಿ ತಿಳಿಸಿದರು.

ಮುಂಬೈ ನಿಲ್ದಾಣದಿಂದ ವಿಮಾನಯಾನಗಳ ನಿರ್ಗಮನದ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ. ಹಿಂದಿನ ಅನುಭವವನ್ನು ಗಮನದಲ್ಲಿರಿಸಿಕೊಂಡು ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿದೇಶಗಳಲ್ಲಿ ಕೊರೋನವೈರಸ್ ಅಪಾಯವು ಹೆಚ್ಚುತ್ತಿದೆ,ಹೀಗಾಗಿ ಹೊರಗಿನಿಂದ ಆಗಮಿಸುವವರು ಜೆನೋಮ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಪೆಡ್ನೇಕರ್ ಹೇಳಿದರು.

ಕೋವಿಡ್‌ನ ಹೊಸ ಪ್ರಭೇದವನ್ನು ‘ಕಳವಳಕಾರಿ ರೂಪಾಂತರಿ’ ಎಂದು ಶುಕ್ರವಾರ ವರ್ಗೀಕರಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ಅದನ್ನು ಒಮಿಕ್ರಾನ್ ಎಂದು ಹೆಸರಿಸಿದೆ. ಮೊದಲ ಬಾರಿಗೆ ನ.24ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಈ ಹೊಸ ಪ್ರಭೇದದ ಪ್ರಕರಣಗಳು ಬೋಟ್ಸ್‌ವಾನಾ,ಬೆಲ್ಜಿಯಂ ಮತ್ತು ಹಾಂಗ್‌ಕಾಂಗ್‌ಗಳಲ್ಲಿಯೂ ವರದಿಯಾಗಿವೆ.

ಹೊಸ ಪ್ರಭೇದವು ರೂಪಾಂತರಿಗಳ ‘ಅತ್ಯಂತ ಅಪರೂಪದ ಪುಂಜ’ವನ್ನು ಹೊಂದಿದ್ದು,ಇದು ವೈರಸ್ ಶರೀರದ ಪ್ರತಿರೋಧ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರ ಸಂಭಾವ್ಯ ಪರಿಣಾಮಗಳನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

ಇದೇ ವೇಳೆ ಹಲವಾರು ರಾಷ್ಟ್ರಗಳು ದಕ್ಷಿಣ ಆಫ್ರಿಕಾದ ಮೇಲೆ ಪ್ರಯಾಣ ನಿರ್ಬಂಧಗಳನ್ನು ಹೇರಿವೆ. ಅಮೆರಿಕವು ದ.ಆಫ್ರಿಕಾ,ಬೋಟ್ಸ್‌ವಾನಾ,ನಮೀಬಿಯಾ, ಝಿಂಬಾಬ್ವೆ,ಲೆಸೊಥೊ,ಎಸ್ವಾಟಿನಿ ಮತ್ತು ಮಲಾವಿಗಳಿಂದ ವಿಮಾನಗಳ ಆಗಮನವನ್ನು ನಿರ್ಬಂಧಿಸಿದೆ. ಅತ್ತ ಬ್ರಿಟನ್ ಕೂಡ ತನ್ನ ಮತ್ತು ಐರಿಷ್ ಪ್ರಜೆಗಳನ್ನು ಹೊರತುಪಡಿಸಿ ಈ ದೇಶಗಳಿಂದ ಆಗಮಿಸುವವರಿಗೆ ಪ್ರವೇಶವನ್ನು ನೀಡದಿರಲು ನಿರ್ಧರಿಸಿದೆ.

ಈ ನಡುವೆ ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸುವಂತೆ ರಾಜ್ಯಗಳಿಗೆ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News