ಕೋವಿಡ್ ಲಸಿಕೆಯ ಬಗ್ಗೆ ನಾವು ಅನುಮಾನಿಸುವಂತಿಲ್ಲ: ಸುಪ್ರೀಂ ಕೋರ್ಟ್

Update: 2021-11-27 15:33 GMT

ಹೊಸದಿಲ್ಲಿ,ನ.27: ಕೋವಿಡ್ ಲಸಿಕೆಗಳ ಬಗ್ಗೆ ತಾನು ಅನುಮಾನ ತಳೆಯುವಂತಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಲಸಿಕೆ ಪಡೆದುಕೊಳ್ಳುವುದರಿಂದ ಭಾರೀ ಪ್ರಯೋಜನಗಳಿವೆ ಎಂದಿದೆ.

ಲಸಿಕೆ ಪಡೆದುಕೊಂಡ 30ದಿನಗಳಲ್ಲಿ ಸಂಭವಿಸಿರುವ ಸಾವುಗಳ ಅನುಸರಣೆ ಮತ್ತು ದಾಖಲೀಕರಣಕ್ಕಾಗಿ ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಹೆಚ್ಚುತ್ತಿರುವ ಸಾವುಗಳು ಮತ್ತು ಪ್ರತಿಕೂಲ ಪರಿಣಾಮಗಳು ವರದಿಯಾಗಿವೆ ಎಂದು ಅರ್ಜಿದಾರರು ಹೇಳಿದ್ದಾರೆ.

 ಅರ್ಜಿ ಸಲ್ಲಿಸಿದ್ದ ಸಮಯದಲ್ಲಿ ದೇಶಾದ್ಯಂತ ಸುಮಾರು 900 ಸಾವುಗಳು ಲಸಿಕೆಯೊಂದಿಗೆ ತಳುಕು ಹಾಕಿಕೊಂಡಿದ್ದವು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಹೇಳಿದರು.

ಆದಾಗ್ಯೂ ಲಸಿಕೆಗಳು ಸಾವುಗಳಿಗೆ ಕಾರಣವಲ್ಲದಿರಬಹುದು ಎಂದು ನ್ಯಾ.ಡಿ.ವೈ.ಚಂದ್ರಚೂಡ ಅವರು ಅಭಿಪ್ರಾಯಿಸಿದರು.

ಈ ಸಾವುಗಳನ್ನು ದಾಖಲಿಸಿಕೊಳ್ಳಲು ಮೇಲ್ವಿಚಾರಣೆ ವ್ಯವಸ್ಥೆಯ ಅಗತ್ಯವಿದೆ. 2015ರಲ್ಲಿ ಕೇಂದ್ರವು ಹೊರಡಿಸಿದ್ದ ಮಾರ್ಗಸೂಚಿಗಳನ್ವಯ ಆರೋಗ್ಯ ಕಾರ್ಯಕರ್ತರು ಲಸಿಕೆ ಶಿಬಿರವನ್ನು ನಡೆಸಲಾದ ಗ್ರಾಮಗಳಲ್ಲಿ ನಿಗಾ ಇರಿಸುವುದು ಅಗತ್ಯವಾಗಿದೆ. 2020ರಲ್ಲಿ ಈ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಬಳಿಕ ಅವು ನಿಷ್ಕ್ರಿಯ ಕಣ್ಗಾವಲನ್ನು ಮಾತ್ರ ಒದಗಿಸುತ್ತಿವೆ ಮತ್ತು ಇದಕ್ಕಾಗಿ ಸಂಬಂಧಿತ ಕುಟುಂಬವು ದೂರನ್ನು ಸಲ್ಲಿಸುವುದು ಅಗತ್ಯವಾಗುತ್ತದೆ ಎಂದು ಗೊನ್ಸಾಲ್ವಿಸ್ ತಿಳಿಸಿದರು.

 ಪರಿಷ್ಕೃತ ಮಾರ್ಗಸೂಚಿಗಳು ಗಂಭೀರ ಮತ್ತು ಕಿರು ಪ್ರತಿಕೂಲ ಪರಿಣಾಮಗಳ ಜಾಡು ಹಿಡಿಯಲು ಬೇರೆ ಮಾರ್ಗವನ್ನು ಒದಗಿಸಿವೆ ಮತ್ತು ಮಾಸಿಕ ಪ್ರಗತಿ ವರದಿಗಳನ್ನು ರವಾನಿಸಲು ಬಾಹ್ಯ ಆರೋಗ್ಯ ಸಿಬ್ಬಂದಿಗಳು ಅದಕ್ಕೆ ಅಗತ್ಯವಾಗಿದ್ದಾರೆ ಎಂದು ಹೇಳಿದ ನ್ಯಾ.ಚಂದ್ರಚೂಡ,‘ನಾವು ಲಸಿಕೆಗಳು ನೀಡುವ ಪ್ರತಿಲಾಭಗಳನ್ನು ನೋಡಬೇಕಿದೆ.ಲಸಿಕೆಗಳಲ್ಲಿ ಏನೋ ದೋಷವಿದೆ ಎಂಬ ಸಂದೇಶವನ್ನು ನಾವು ರವಾನಿಸುವಂತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಗಳ ಪರವಾಗಿ ಮಾತನಾಡಿದೆ,ವಿಶ್ವಾದ್ಯಂತ ದೇಶಗಳೂ ಅದನ್ನೇ ಮಾಡುತ್ತಿವೆ. ಜನರಿಗೆ ಲಸಿಕೆಯನ್ನು ನೀಡದಿರುವ ಮೂಲಕ ಉದಾಸೀನತೆಯ ಬೆಲೆಯನ್ನು ಭರಿಸಲು ದೇಶಕ್ಕೆ ಸಾಧ್ಯವಿಲ್ಲ ’ ಎಂದರು.

ಅಮೆರಿಕ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಹಲವಾರು ಕೋವಿಡ್ ಲಸಿಕೆಗಳನ್ನು ಹೊಂದಿವೆ ಎಂದು ನ್ಯಾಯಾಲಯವು ಬೆಟ್ಟು ಮಾಡಿದಾಗ,ಸಕ್ರಿಯ ಕಣ್ಗಾವಲಿಗಾಗಿ ಈ ದೇಶಗಳು ಕಾರ್ಯವಿಧಾನವನ್ನು ಹೊಂದಿವೆ,ಆದರೆ ಭಾರತದಲ್ಲಿ ಇಲ್ಲ ಎಂದು ಗೊನ್ಸಾಲ್ವಿಸ್ ಹೇಳಿದರು.

ಅರ್ಜಿಯ ಪ್ರತಿಯನ್ನು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ನೀಡುವಂತೆ ಗೊನ್ಸಾಲ್ವಿಸ್‌ರಿಗೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News