ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆ ಏಕೆ ಸಮರ್ಥನೀಯ?

Update: 2021-11-27 16:57 GMT
ಸಾಂದರ್ಭಿಕ ಚಿತ್ರ:PTI

ಚಂಡಿಗಡ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರೂ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗಳನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ಉಳಿದ ಆರು ಬೇಡಿಕೆಗಳು ಈಡೇರುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಎಂಎಸ್ಪಿ ಮುಖ್ಯವಾಗಿದೆ, ಏಕೆಂದರೆ ಎಲ್ಲ ರೈತರಿಗೂ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಲೆ ದೊರೆಯುವ ಭರವಸೆಯಿರುತ್ತದೆ ಎಂದು ಸಂಯುಕ್ತ ಕಿಸಾನ ಮೋರ್ಚಾ ಇತ್ತೀಚಿಗೆ ಪ್ರಧಾನಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತಿಳಿಸಿದೆ.

ಹೆಸರೇ ಸೂಚಿಸುವಂತೆ ಎಂಎಸ್ಪಿಯು ಸರಕಾರವು ಖಾತರಿ ಪಡಿಸಿರುವಂತೆ ರೈತರಿಗೆ ಅವರ ಉತ್ಪನ್ನಗಳಿಗೆ ದೊರೆಯಬೇಕಾದ ಕನಿಷ್ಠ ಬೆಲೆಯಾಗಿದೆ. ಸರಕಾರವೇ ಕನಿಷ್ಠ ಬೆಲೆಗಳಲ್ಲಿ ರೈತರಿಂದ ಉತ್ಪನ್ನಗಳನ್ನು ಖರೀದಿಸುವ ಎಂಎಸ್ಪಿ ವ್ಯವಸ್ಥೆಯಲ್ಲಿನ ದೊಡ್ಡ ಸಮಸ್ಯೆಯೆಂದರೆ ಅದೆಂದಿಗೂ ಸಂಸದೀಯ ಕಾಯ್ದೆಯಿಂದ ಬೆಂಬಲಿಸಲ್ಪಟ್ಟಿಲ್ಲ, ಹೀಗಾಗಿ ಅದನ್ನು ಭಾರತದಾದ್ಯಂತ ಕಾನೂನುಬದ್ಧವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ.

1960ರ ದಶಕದಲ್ಲಿ ಕಾರ್ಯಕಾರಿ ಆದೇಶವೊಂದರ ಮೂಲಕ ಎಂಎಸ್ಪಿ ವ್ಯವಸ್ಥೆಯನ್ನು ತರಲಾಗಿತ್ತು. ಈ ವ್ಯವಸ್ಥೆಯನ್ನು ಮೂಲಭೂತವಾಗಿ ಆಹಾರದ ಕೊರತೆಯನ್ನು ನೀಗಿಸಲು ಮುಖ್ಯವಾಗಿ ಗೋದಿ ಮತ್ತು ಭತ್ತವನ್ನು ಬೆಳೆಯಲು ಸರಕಾರವು ನೆಚ್ಚಿಕೊಂಡಿದ್ದ ಪಂಜಾಬ್ ಮತ್ತು ಹರ್ಯಾಣಗಳಂತಹ ಪ್ರದೇಶಗಳಲ್ಲಿಯ ರೈತರನ್ನು ಉತ್ತೇಜಿಸಲು ರೂಪಿಸಲಾಗಿತ್ತು. ಈ ಬೆಳವಣಿಗೆಯನ್ನೇ ನಂತರ ‘ಹಸಿರು ಕ್ರಾಂತಿ’ ಎಂದು ಕರೆಯಲಾಗಿತ್ತು ಎಂದು ಆರ್ಥಿಕ ತಜ್ಞ ಲಖ್ವಿಂದರ್ ಸಿಂಗ್ ಹೇಳಿದರು.

ನಂತರದ ವರ್ಷಗಳಲ್ಲಿ ಸರಕಾರವು 23 ಬೆಳೆಗಳಿಗೆ ಎಂಎಸ್ಪಿಯನ್ನು ಪ್ರಕಟಿಸಿತ್ತು, ಆದರೆ ಸರಕಾರದಿಂದ ವಾಸ್ತವಿಕ ಖರೀದಿಯು ಮುಖ್ಯವಾಗಿ ಗೋದಿ ಮತ್ತು ಭತ್ತಕ್ಕೆ ಸೀಮಿತವಾಗಿತ್ತು, ಅದೂ ಹಸಿರು ಕ್ರಾಂತಿಯ ತೊಟ್ಟಿಲು ಆಗಿದ್ದ ಉತ್ತರದ ರಾಜ್ಯಗಳಿಗೆ. ಈ ರಾಜ್ಯಗಳ ರೈತರು ಇಂದಿಗೂ ಅದೇ ಹುರುಪಿನಿಂದ ದೇಶಸೇವೆಯನ್ನು ಮುಂದುವರಿಸಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆ ಸಮರ್ಥನೀಯವಾಗಿದೆ. ಈಗ ಹಿಂದೆಗೆದುಕೊಳ್ಳಲಾಗಿರುವ ಕೃಷಿ ಕಾಯ್ದೆಗಳು ರೈತರನ್ನು ಮಾರುಕಟ್ಟೆ ಶಕ್ತಿಗಳ ಕರುಣೆಗೆ ತಳ್ಳುತ್ತಿದ್ದವು ಎಂದು ಸಿಂಗ್ ಹೇಳಿದರು.

ಮೋದಿ ಸರಕಾರವು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿದಾಗಿನಿಂದ ರೈತರ ಆಂದೋಲನವು ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಬೇಡಿಕೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ರೈತರ ಬೇಡಿಕೆಯನ್ನು ಬೆಂಬಲಿಸಿ ಶೈಕ್ಷಣಿಕ ಕೇತ್ರದಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹಲವಾರು ಧ್ವನಿಗಳು ಕೇಳಿ ಬರುತ್ತಿದ್ದು, ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸುವುದರ ಪರಿಣಾಮಗಳನ್ನು ಬೆಟ್ಟು ಮಾಡಿವೆ.
ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸಿದರೆ ಎಂಎಸ್ಪಿಯನ್ನು ಪ್ರಕಟಿಸಲಾದ ಬೆಳೆಗಳ ಪ್ರತಿಯೊಂದೂ ಕಾಳನ್ನು ಖರೀದಿಸುವ ಕಾನೂನು ಬಾಧ್ಯತೆಯನ್ನು ಸರಕಾರವು ಹೊಂದಿರುತ್ತದೆ. ಕಳೆದ ವರ್ಷ ಸರಕಾರ ಮತ್ತು ರೈತ ಸಂಘಟನೆಗಳ ನಡುವಿನ ಮಾತುಕತೆಗಳ ಸಂದರ್ಭ ಸರಕಾರಿ ಅಧಿಕಾರಿಗಳು ಅಂದಾಜಿಸಿದ್ದಂತೆ ಇದಕ್ಕಾಗಿ ಕೇಂದ್ರವು 17 ಲ.ಕೋ.ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಇದರ ಜೊತೆಗೆ ಖರೀದಿಸಿದ ಧಾನ್ಯಗಳನ್ನು ದಾಸ್ತಾನಿರಿಸಲು ಸೌಲಭ್ಯಗಳನ್ನು ಸೃಷ್ಟಿಸಲೂ ಸರಕಾರವು ಭಾರೀ ಮೊತ್ತವನ್ನು ಒದಗಿಸಬೇಕಾಗುತ್ತದೆ.

ದೇಶದಲ್ಲಿ ಎಲ್ಲಿಯೇ ಆದರೂ ಖಾಸಗಿ ಸಂಸ್ಥೆಗಳು ಅಥವಾ ಸರಕಾರಿ ಏಜೆನ್ಸಿಗಳು ನಿಗದಿತ ಬೆಲೆಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವಂತಾಗಲು ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸಿದರೆ ಬೆಲೆಏರಿಕೆ ಮತ್ತು ಹಣದುಬ್ಬರ ಏರಿಕೆಯಾಗುತ್ತದೆ ಎನ್ನುವುದು ರೈತರ ಬೇಡಿಕೆಗೆ ವಿರುದ್ಧವಾದ ಇನ್ನೊಂದು ವಾದವಾಗಿದೆ.
‘ಪ್ರಸಕ್ತ ಎಂಎಸ್ಪಿಗಳಲ್ಲಿ 23 ಬೆಳೆಗಳ ಖರೀದಿಗೆ 17 ಲ.ಕೋ.ರೂ.ಗಳ ಅಂದಾಜು ದೋಷಯುಕ್ತವಾಗಿದೆ. ನನ್ನ ಅಂದಾಜಿನಂತೆ ಇದಕ್ಕೆ ಒಂಭತ್ತು ಲ.ಕೋ.ರೂ.ಗಿಂತ ಹೆಚ್ಚಿನ ಹಣ ವೆಚ್ಚವಾಗುವುದಿಲ್ಲ ’ ಎಂದು ಪಂಜಾಬ್ ಕೃಷಿ ವಿವಿಯ ಪ್ರಧಾನ ಆರ್ಥಿಕ ತಜ್ಞ ಸುಖಪಾಲ್ ಸಿಂಗ್ ಹೇಳಿದರು.

ಕಾನೂನುಬದ್ಧ ಎಂಎಸ್ಪಿಗಾಗಿ ರೈತರ ಬೇಡಿಕೆಯನ್ನು ಬೆಂಬಲಿಸಿದ ಹಿರಿಯ ಬಿಜೆಪಿ ನಾಯಕ ಚೌಧರಿ ಬೀರೇಂದ್ರ ಸಿಂಗ್ ಅವರು, ಭಾರತವು ರೈತರನ್ನು ಕಡೆಗಣಿಸಿ ಐದು ಲಕ್ಷ ಕೋಟಿ ಡಾ.ಆರ್ಥಿಕತೆಯನ್ನು ಸಾಧಿಸಲು ಸಾಧ್ಯವಿಲ್ಲ. ರೈತರಿಂದ ಹತಾಶ ಮಾರಾಟವನ್ನು ತಡೆಯುವುದು ಮತ್ತು ಅವರ ಬೆಳೆಗಳಿಗೆ ಸಾಕಷ್ಟು ಪ್ರತಿಫಲವನ್ನು ನೀಡುವುದು ಇಲ್ಲಿ ಮುಖ್ಯವಾಗಿದೆ. ಇದನ್ನು ಸಾಧಿಸಲು ಅತ್ಯುತ್ತಮ ಮಾರ್ಗವೆಂದರೆ ಎಂಎಸ್ಪಿಯನ್ನು ಮಾನದಂಡವನ್ನಾಗಿಸುವುದು ಮತ್ತು ಇದಕ್ಕೂ ಕಡಿಮೆ ಬೆಲೆಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಖಾಸಗಿ ಅಥವಾ ಸರಕಾರಿ ಕ್ಷೇತ್ರಕ್ಕೆ ಅವಕಾಶ ನೀಡದಿರುವುದು ಎಂದರು.

ಭಾರತವು ಚೀನಾದ ನಂತರ ಅತ್ಯಂತ ಹೆಚ್ಚಿನ ಆಹಾರ ಧಾನ್ಯಗಳನ್ನು ಬೆಳೆಯುವ ದೇಶವಾಗಿದೆ. ಹಾಲು ಉತ್ಪಾದನೆ ಮತ್ತು ಪೌಲ್ಟ್ರಿ ಕೇತ್ರದಲ್ಲಿಯೂ ಅದು ಪ್ರಮುಖ ಆರ್ಥಿಕತೆಯಾಗಿದೆ. ಇಷ್ಟೆಲ್ಲ ಇದ್ದರೂ ವಾಸ್ತವದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಇದು ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಗಣನೀಯ ಅಂತರವಿದೆ ಮತ್ತು ಇದನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬ ಅತ್ಯಂತ ಮುಖ್ಯ ಅಂಶದ ಮೇಲೆ ಬೆಳಕು ಚೆಲ್ಲುತ್ತಿದೆ. ಹೀಗಾಗಿ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಸಿಂಧುವಾಗಿತ್ತು ಮತ್ತು ಸಮರ್ಥನೀಯವಾಗಿತ್ತು,ಹಾಗೆಯೇ ಕಾನೂನುಬದ್ಧ ಎಂಎಸ್ಪಿ ಸೇರಿದಂತೆ ಅವರ ಇತರ ಬೇಡಿಕೆಗಳೂ ಸಮರ್ಥನೀಯವಾಗಿವೆ ಎಂದರು.

ಕೃಪೆ: thewire.in

Writer - ವಿವೇಕ್ ಗುಪ್ತಾ - thewire.in

contributor

Editor - ವಿವೇಕ್ ಗುಪ್ತಾ - thewire.in

contributor

Similar News