ಪ್ರಾಮಾಣಿಕತೆಗೆ ಶಿಕ್ಷೆ: ಅಂತರರಾಷ್ಟ್ರೀಯ ನಿರ್ಬಂಧಕ್ಕೆ ಆಫ್ರಿಕಾ ದೇಶಗಳ ತೀಕ್ಷ್ಣ ಪ್ರತಿಕ್ರಿಯೆ

Update: 2021-11-28 04:40 GMT

ದಕ್ಷಿಣ ಆಫ್ರಿಕಾ: ಕೋವಿಡ್-19 ವೈರಸ್‌ನ ಒಮಿಕ್ರಾನ್ ಪ್ರಬೇಧ ಆಫ್ರಿಕನ್ ದೇಶಗಳಲ್ಲಿ ಪತ್ತೆಯಾದ ಬೆನ್ನಲ್ಲೇ ವಿಶ್ವದ ಶ್ರೀಮಂತ ದೇಶಗಳು, ಆಫ್ರಿಕಾ ದೇಶಗಳಿಂದ ಪ್ರಯಾಣ ನಿರ್ಬಂಧ ಹೇರಿರುವುದನ್ನು ಈ ದೇಶಗಳು ಕಟುವಾಗಿ ಟೀಕಿಸಿವೆ.

ಈ ನಿರ್ಬಂಧಗಳ ವಿರುದ್ಧ ಶನಿವಾರ ಪ್ರತಿಭಟನೆ ಸಲ್ಲಿಸಿದ ಆಫ್ರಿಕನ್ ದೇಶಗಳು, ಕೋವಿಡ್ ಆರಂಭದಿಂದಲೂ ಗಡಿಗಳನ್ನು ಮುಚ್ಚಿರುವ ಮತ್ತು ಇದರಿಂದಾಗಿ ಲಸಿಕೆ ಸುರಕ್ಷೆ ದೊರೆಯದ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳ ಬಗೆಗಿನ ಚರ್ಚೆಯನ್ನು ಮುನ್ನಲೆಗೆ ತಂದಿವೆ.

ದಕ್ಷಿಣ ಆಫ್ರಿಕಾದಿಂದ ಬರುವ ವಿಮಾನಗಳನ್ನು ಹಲವು ದೇಶಗಳು ನಿಷೇಧಿಸಿರುವುದು, ಅತ್ಯಾಧುನಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಮತ್ತು ಹೊಸ ಪ್ರಬೇಧಗಳನ್ನು ತ್ವರಿತವಾಗಿ ಪತ್ತೆ ಮಾಡುವ ಸಾಮರ್ಥ್ಯಕ್ಕೆ ವಿಧಿಸಿರುವ ಶಿಕ್ಷೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಪ್ರತಿಕ್ರಿಯಿಸಿದೆ.

ಈ ಪ್ರಕರಣಗಳಿಗೂ ದಕ್ಷಿಣ ಆಫ್ರಿಕಾಗೂ ವಾಸ್ತವವಾಗಿ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ, ಈ ದೇಶಗಳಿಗೆ ಜಾಗತಿಕ ಪ್ರತಿಕ್ರಿಯೆ ಭಿನ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಯಾಣ ನಿರ್ಬಂಧಗಳನ್ನು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವಾಲಯ, "ನಿರಂಕುಶ, ಹತಾಶ ಮತ್ತು ದಿಕ್ಕುತಪ್ಪಿಸುವ ನಿರ್ಧಾರ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿಯಮ ಮತ್ತು ಸಲಹೆಗಳಿಗೆ ವಿರುದ್ಧವಾದದ್ದು" ಎಂದು ಬಣ್ಣಿಸಿದೆ.

ವಿಶ್ವವ್ಯಾಪಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೆಲ ದೇಶಗಳ ನಾಯಕರು ಬಲಿಪಶುಗಳನ್ನು ಹುಡುಕಿದ್ದಾರೆ ಎನ್ನುವುದು ನಮ್ಮ ಭಾವನೆ ಎಂದು ಆರೋಗ್ಯ ಸಚಿವ ಜೋ ಫಾಲ್ಹಾ ಹೇಳಿದ್ದಾರೆ.

"ಕೆಲವೊಮ್ಮೆ ಪಾರದರ್ಶಕವಾಗಿರುವುದಕ್ಕೆ ಮತ್ತು ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುವುದಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ" ಎಂದು ಒಮಿಕ್ರಾನ್ ವೈರಾಣು ಪ್ರಬೇಧ ಪತ್ತೆ ಮಾಡಿದ ವೈರಾಣು ತಜ್ಞ ತುಲಿಯೊ ಡೆ ಒಲಿವೇರಿಯಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

"ಆಫ್ರಿಕಾ ವಿರುದ್ಧ ಹೇರಿರುವ ಈ ಅವೈಜ್ಞಾನಿಕ ಪ್ರಯಾಣ ನಿರ್ಬಂಧವನ್ನು ತಕ್ಷಣ ನಿಲ್ಲಿಸಬೇಕು" ಎಂದು ಆಫ್ರಿಕಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಉಪ ನಿರ್ದೇಶಕ ಅಹ್ಮದ್ ಆಗ್ವೆಲ್ ಟ್ವೀಟ್ ಮಾಡಿದ್ದಾರೆ.

"ಕೋವಿಡ್-19 ಸಾಂಕ್ರಾಮಿಕಕ್ಕೆ ಸಾರ್ವಜನಿಕ ಆರೋಗ್ಯ ಕ್ರಮಗಳು, ತಪಾಸಣೆ ಮತ್ತು ಲಸಿಕೆಯಂಥ ಪುರಾವೆಗಳನ್ನು ಬಳಸಿ. ಪ್ರಯಾಣ ನಿರ್ಬಂಧ ಒಂದು ರಾಜಕೀಯ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News