ಫೋರ್ಬ್ಸ್ ಮಹಿಳಾ ಸಾಧಕಿಯರ ಪಟ್ಟಿಯಲ್ಲಿ ಆಶಾ ಕಾಯಕರ್ತೆ ಮತಿಲ್ಡಾ ಕುಲ್ಲು

Update: 2021-11-28 14:03 GMT
ಆಶಾ ಕಾಯಕರ್ತೆ ಮತಿಲ್ಡಾ ಕುಲ್ಲು (Photo: news18.com)

ಭುವನೇಶ್ವರ, ನ.28: 'ಫೋರ್ಬ್ಸ್ ಇಂಡಿಯಾ ಡಬ್ಲ್ಯು-ಪವರ್ 2021' ಪಟ್ಟಿಯಲ್ಲಿ ಒಡಿಶಾದ ಸುಂದರಗಡ ಜಿಲ್ಲೆಯ ಆಶಾ ಕಾರ್ಯಕರ್ತೆ ಮತಿಲ್ಡಾ ಕುಲ್ಲು ಅವರು ಸ್ಥಾನ ಪಡೆದಿದ್ದಾರೆ. ನಟಿಯರಾದ ಸಾನ್ಯಾ ಮಲ್ಹೋತ್ರಾ ಮತ್ತು ರಸಿಕಾ ದುಗ್ಗಲ್ ಮತ್ತು ಇತರ ಹಲವಾರು ಮಹಿಳಾ ಸಾಧಕಿಯರು ಈ ಪಟ್ಟಿಯಲ್ಲಿದ್ದಾರೆ. ಕೋವಿಡ್ ಯೋಧೆಯಾಗಿರುವ ಮತಿಲ್ಡಾ ಕಳೆದ 15 ವರ್ಷಗಳಿಂದಲೂ ಸುಂದರಗಡ ಜಿಲ್ಲೆಯ ಬಾರಾಗಾಂವ್ ತಾಲೂಕಿನ ಗರ್ಗದಬಹಾಲ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಜನತೆಯ ಸನಿಹಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು news18.com ವರದಿ ಮಾಡಿದೆ.

ಬೆಳಿಗ್ಗೆ ಐದು ಗಂಟೆಗೆ ಏಳುವ ಮತಿಲ್ಡಾ (45) ಮನೆಗೆಲಸಗಳನ್ನು ಮುಗಿಸಿ, ಕುಟುಂಬಕ್ಕೆ ತಿಂಡಿಯನ್ನು ಸಿದ್ಧಗೊಳಿಸಿ, ಜಾನುವಾರುಗಳಿಗೆ ಮೇವುಣಿಸಿದ ಬಳಿಕ ತನ್ನ ಸೈಕಲ್ ನಲ್ಲಿ ಮನೆ ಮನೆ ಭೇಟಿಯನ್ನು ಆರಂಭಿಸುತ್ತಾರೆ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ಹೇಳಿದೆ.

ಮೂಢನಂಬಿಕೆ, ಜಾತೀಯತೆ ಮತ್ತು ಅಸ್ಪೃಶ್ಯತೆಯಂತಹ ಹಲವಾರು ಸವಾಲುಗಳನ್ನು ಎದುರಿಸಿರುವ ಮತಿಲ್ಡಾ ಪಾಲಿಗೆ ಅದು ಸುಲಭದ ಪಯಣವಾಗಿರಲಿಲ್ಲ. ಮಾಟಮಂತ್ರವನ್ನು ಅವಲಂಬಿಸುವುದನ್ನು ನಿಲ್ಲಿಸುವಂತೆ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರು ಗ್ರಾಮಸ್ಥರಿಗೆ ತಿಳಿಹೇಳಬೇಕಾಗಿತ್ತು.

ಕೋವಿಡ್ ಸಾಂಕ್ರಾಮಿಕವು ಮತಿಲ್ಡಾರನ್ನು ಅತ್ಯಂತ ವ್ಯಸ್ತರನ್ನಾಗಿಸಿತ್ತು, ವಾಸ್ತವದಲ್ಲಿ ಅವರು ತನ್ನ ಮಿತಿಯನ್ನು ಮೀರಿ ದುಡಿದಿದ್ದರು. ಮಾಸಿಕ 4,500 ರೂ.ಗಳ ವೇತನದಲ್ಲಿ ಅವರು ಏಕಾಂಗಿಯಾಗಿ ಗ್ರಾಮದಲ್ಲಿಯ ಸುಮಾರು 964 ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು.

ಮನೆಗಳಿಗೆ ಭೇಟಿ, ಔಷಧಿಗಳ ಪೂರೈಕೆ, ಪೋಲಿಯೊ ಮತ್ತು ಇತರ ಲಸಿಕೆಗಳ ನೀಡಿಕೆಯಂತಹ ತನ್ನ ನಿಗದಿತ ಕರ್ತವ್ಯಗಳ ಜೊತೆಗೆ ಗರ್ಭಿಣಿಯರ ಹೆರಿಗೆಗೂ ಮತಿಲ್ಡಾ ನೆರವಾಗುತ್ತಾರೆ.

‘ಜನರಿಗಾಗಿ,ವಿಶೇಷವಾಗಿ ನನ್ನ ಗ್ರಾಮದ ಜನರಿಗಾಗಿ ದುಡಿಯುವುದು ನನಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಇಂದು ಫೋರ್ಬ್ಸ್ ನನ್ನನ್ನು ಗುರುತಿಸಿರುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ’ ಎಂದು ಮತಿಲ್ಡಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News