ಉತ್ತರ ಪ್ರದೇಶ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ತಿರುವು

Update: 2021-11-29 04:59 GMT

ಲಕ್ನೋ, ನ. 28: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ದಲಿತ ಕುಟುಂಬದ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ 23 ವರ್ಷದ ದಲಿತ ಯುವಕನೋರ್ವನನ್ನು ಬಂಧಿಸಿಸಲಾಗಿದೆ. ಅನಾಮಿಕ ಸಹವರ್ತಿಗಳೊಂದಿಗೆ ಸೇರಿ ಈತ ಈ ಹತ್ಯೆ ನಡೆಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಪ್ರತಿಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿರುವುದು ಬಾಲಕಿ ಅಲ್ಲ. ಆದುದರಿಂದ ಪೋಕ್ಸೊದ ವಿವಿಧ ಸೆಕ್ಷನ್ ಅಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಹಿಂದೆಗೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿಸಲಾದ ಯುವಕ ಹತ್ಯೆಯಾದವರ ಮನೆಯ ಹಿಂದಿರುವ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ. ಆತ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಗುರುವಾರ ಬೆಳಗ್ಗೆ ಪತ್ತೆಯಾಗಿತ್ತು. ದುಷ್ಕರ್ಮಿಗಳು ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಬಾಲಕಿಯ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿತ್ತು. ಉಳಿದ ಮೂವರ ಮೃತದೇಹ ವರಾಂಡದಲ್ಲಿ ಕಂಡು ಬಂದಿತ್ತು.

ಪ್ರಯಾಗ್ ರಾಜ್‌ನ ಹಿರಿಯ ಪೊಲೀಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಬಂಧಿತನ ಬಗೆಗಿನ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಆರೋಪಿ 23 ವರ್ಷದ ಪವನ್ ಸರೋಜ್. ಈತ ಯುವತಿಯನ್ನು ಹತ್ಯೆಗೈಯುವುದಕ್ಕೆ ಮುನ್ನ ‘ಐ ಹೇಟ್ ಯು’ ಎಂಬ ಸಂದೇಶ ಕಳುಹಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಸೊತ್ತು ವಿವಾದಕ್ಕೆ ಸಂಬಂಧಿಸಿ ನೆರೆಯ ಕುಟುಂಬ ಈ ಹತ್ಯೆಗಳನ್ನು ನಡೆಸಿದೆ ಎಂದು ಹತ್ಯೆಯಾದ ಕುಟುಂಬದ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು. ಮೇಲ್ವರ್ಗಕ್ಕೆ ಸೇರಿದ ಕುಟುಂಬದ ಸದಸ್ಯರು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದರು.

ಪೊಲೀಸರು ಪ್ರಕರಣ ದಾಖಲಿಸಿ ಮೇಲ್ಜಾತಿಯ ಕುಟುಂಬದ 8 ಮಂದಿಯನ್ನು ಬಂಧಿಸಿದ್ದರು. ಕುಟುಂಬದ ವಿರುದ್ಧ ಆರೋಪ ಹೊರಿಸಲು ಇದುವರೆಗೆ ಯಾವುದೇ ಪುರಾವೆ ದೊರೆತಿಲ್ಲ. ಅವರ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News