ಮುಂಗಾರು ಅಧಿವೇಶನದಲ್ಲಿ 'ಹಿಂಸಾತ್ಮಕ ವರ್ತನೆ'ಗಾಗಿ ವಿರೋಧ ಪಕ್ಷದ 12 ಸಂಸದರ ಅಮಾನತು

Update: 2021-11-29 17:44 GMT

ಹೊಸದಿಲ್ಲಿ,ನ,29: ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಸದನದಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಾರೆಂಬ ಕಾರಣಕ್ಕಾಗಿ ಪ್ರತಿಪಕ್ಷಗಳ 12 ಮಂದಿ ರಾಜ್ಯಸಭಾ ಸದಸ್ಯರನ್ನು ಚಳಿಗಾಲದ ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿದೆ. ದುರ್ವರ್ತನೆ, ಅವಹೇಳನಕಾರಿ,ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗಾಗಿ ಮತ್ತು ಸಂಸತ್‌ನ ಭದ್ರತಾ ಸಿಬ್ಬಂದಿ ಮೇಲೆ ಉದ್ದೇಶಪೂರ್ವಕ ದಾಳಿಗಾಗಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಟಿಪ್ಪಣಿಯು ತಿಳಿಸಿದೆ.

ರಾಜ್ಯಸಭಾ ಸದಸ್ಯರಾದ ಶಿವಸೇನಾದ ಪ್ರಿಯಾಂಕ ಚತುರ್ವೇದಿ ಹಾಗೂ ಅನಿಲ್ ದೇಸಾಯಿ, ತೃಣಮೂಲ ಕಾಂಗ್ರೆಸ್‌ನ ಡೋಲಾ ಸೇನ್ ಹಾಗೂ ಶಾಂತಾ ಚೇತ್ರಿ, ಸಿಪಿಎಂನ ಎಲಾಮಾರಾಮ್ ಕರೀಂ,ಸಿಪಿಐನ ಬಿನಯ್ ವಿಸ್ವಂ, ಮತ್ತು ಕಾಂಗ್ರೆಸ್ ಸಂಸದರಾದ ರಾಜಮಣಿ ಪಟೇಲ್,ಫುಲೋ ದೇವಿ ನೇತಾಮ್,ಛಾಯಾ ವರ್ಮಾ ರಿಪುನ್ ಬೋರಾ, ಸೈಯದ್‌ನಝೀರ್ ಹುಸೇನ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ ಎಂದು ಟಿಪ್ಪಣಿ ತಿಳಿಸಿದೆ.

ಪ್ರತಿಪಕ್ಷ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ರಾಜಕೀಯ ಮುಖಂಡರ ಸಂಭಾಷಣೆ ಹಾಗೂ ಸಂದೇಶಗಳ ಕದ್ದಾಲಿಕ ನಡೆಸಿರುವ ಪೆಗಾಸಸ್ ಸ್ಪೈವೇರ್ ಹಗರಣದ ಕುರಿತು ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹಕ್ಕೆ ಕೇಂದ್ರ ಸರಕಾರವು ಮಣಿಯದೆ ಇದ್ದುದರಿಂದ ಸಂಸತ್‌ನ ಮುಂಗಾರುವ ಅಧಿವೇಶನದ ಬಹುತೇಕ ಕಲಾಪಗಳು ಸಂಸದರ ಗದ್ದಲ ಹಾಗೂ ಕೋಲಾಹಲಗಳಿಗೆ ಬಲಿಯಾಗಿದ್ದವು. ಆಗಸ್ಟ್ 11ರಂದು ಚಳಿಗಾಲದ ಅಧಿವೇಶನವು ಮುಕ್ತಾಯಗೊಂಡ ಸಂದರ್ಭ ಕೆಲವು ಸಂಸದರು ಹಿಂಸಾತ್ಮವಾಗಿ ವರ್ತಿಸಿದ್ದರಲ್ಲದೆ, ಮಹಿಳಾ ಮಾರ್ಶಲ್‌ಗಳ ಮೇಲೂ ಹಲ್ಲೆ ನಡೆಸಿದ್ದಾರೆಂಬ ಆರೋಪ ಹೊರಿಸಲಾಗಿತ್ತು.

ಸಂಸತ್ ಅಧಿವೇಶನದ ಕೊನೆಯದಿನದಂದು ಕೇಂದ್ರ ಸರಕಾರವು ಜನರಲ್ ಇನ್ಶೂರೆನ್ಸ್ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕವನ್ನು ಮಂಡಿಸಿತ್ತು. ಈ ವಿಧೇಯಕವನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಯ ಪ್ರಸ್ತಾವನೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಒಪ್ಪದೆ ಇದ್ದುದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತಲ್ಲದೆ, ಕೆಲವು ಸಂಸದರು ಹಿಂಸಾತ್ಮಕವಾಗಿ ವರ್ತಿಸಿದ್ದರೆಂದು ಆರೋಪಿಸಲಾಗಿತ್ತು.

ಪ್ರತಿಪಕ್ಷ ಸಂಸದರು, ಮಹಿಳಾ ಮಾರ್ಶಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಸರಕಾರ ಆರೋಪಿಸಿದ್ದರೆ, ಪ್ರತಿಪಕ್ಷಗಳು ಈ ಬಗ್ಗೆ ಜಂಟಿ ಹೇಳಿಯೊಂದನ್ನು ನೀಡಿ ‘‘ ಪ್ರತಿಪಕ್ಷಗಳ ನಾಯಕರು ಹಾಗೂ ಸದಸ್ಯರು ಸೇರಿದಂತೆ ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಲು ಆಡಳಿತ ಪಕ್ಷದವರು ಹೊರಗಿನವರನ್ನು ಕರೆತಂದಿದ್ದಾರೆ’’ ಎಂದು ಆಪಾದಿಸಿವೆ.

ಆದರೆ ಪ್ರತಿಪಕ್ಷಗಳ ಈ ಆರೋಪವನ್ನು ಕೇಂದ್ರ ಸರಕಾರ ನಿರಾಕರಿಸಿತ್ತು ಹಾಗೂ ಪ್ರಕರಣವನ್ನು ತನಿಖೆಗಾಗಿ ಸಂಸದರ ವಿಶೇಷ ಸಮಿತಿಯ ಪ್ರಸ್ತಾವನೆಗೆ ಸಲ್ಲಿಸಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News