ಸಂಸದರ ನಿಧಿ ಜಾರಿಗೆ ತರಾತುರಿಯೇಕೆ?

Update: 2021-11-30 08:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್ ಕಾರಣಕ್ಕಾಗಿ ತಡೆ ಹಿಡಿದಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯನ್ನು ಪುನರಾರಂಭಿಸಲು ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ತೀರ್ಮಾನಿಸಿದೆ. ಈ ನಿಧಿಯ ಉಪಯುಕ್ತತೆಯ ಬಗ್ಗೆ ಇದು ಆರಂಭವಾದಾಗಿನಿಂದ ಆಗಾಗ ಟೀಕೆ, ವಿಮರ್ಶೆಗಳು ಬರುತ್ತಲೇ ಇದ್ದವು. ಅನಗತ್ಯವಾದ ಈ ನಿಧಿಯನ್ನು ರದ್ದುಪಡಿಸಬೇಕೆಂದು ಹಿಂದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿಯವರು ಸಲಹೆ ನೀಡಿದ್ದರು. ಈಗ ಅದರ ಪ್ರಸ್ತಾಪ ಬೇಡ.ಕೊರೋನ ಕಾರಣಕ್ಕಾಗಿ ಎರಡು ವರ್ಷ ಅಮಾನತಿನಲ್ಲಿಡಲು ನಿರ್ಧರಿಸಿದ್ದ ಈ ಸಂಸದರ ನಿಧಿ ಯೋಜನೆಗೆ ಅವಧಿ ಮುಗಿಯುವ ಮೊದಲೇ ಮರು ಚಾಲನೆ ನೀಡುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿಯೊಬ್ಬ ಸಂಸದನ ಮತಕ್ಷೇತ್ರಕ್ಕೆ ತಲಾ 2 ಕೋಟಿ ರೂಪಾಯಿ ಅನುದಾನ ಲಭ್ಯವಾಗಲಿದೆ. ಮುಂದಿನ ಹಣಕಾಸು ವರ್ಷದಿಂದ ಐದು ಕೋಟಿ ರೂಪಾಯಿ ಹಣಕಾಸು ಒದಗಿಸಲಾಗುವುದೆಂದು ಸರಕಾರ ಪ್ರಕಟಿಸಿದೆ.

ಕೋವಿಡ್ ಕಾರಣಕ್ಕಾಗಿ 2020-21ನೇ ಹಣಕಾಸು ವರ್ಷದಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ಬಳಕೆಯಾಗದೆ ಉಳಿದ 4,000 ಕೋಟಿ ರೂಪಾಯಿ ನಿಧಿಯನ್ನು ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಯಿತು ಹಾಗೂ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಇದರಿಂದ ಹೇಗೆ ಸಹಾಯವಾಯಿತು ಎಂಬುದನ್ನು ತಿಳಿಯುವ ಹಕ್ಕು ದೇಶದ ಜನರಿಗೆ ಇದೆ. ಸರಕಾರ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಜನರ ಸಂದೇಹ ನಿವಾರಣೆಗೆ ಸ್ಪಷ್ಟೀಕರಣ ನೀಡಬೇಕು. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಜ್ಯಸಭೆಯ ಸದಸ್ಯರು ಸೇರಿದಂತೆ ನಲವತ್ತು ಮಂದಿ ಸಂಸತ್ತಿನಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಅವರೆಲ್ಲರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಮಂಜೂರಾದ ಮೊತ್ತ 200 ಕೋಟಿ ರೂಪಾಯಿ. ಈ ಹಣವನ್ನು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಬಳಸಬಹುದಾಗಿತ್ತು.ವಿಶೇಷವಾಗಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಉಪಯೋಗಿಸಬಹುದಾಗಿತ್ತು. ತಮ್ಮ ಸಂಸದರ ನಿಧಿಯ ಹಣವನ್ನು ಕೇಳುವ ಅರಿವು ಮತ್ತು ಧೈರ್ಯವಿಲ್ಲದ ರಾಜ್ಯದ ಬಹುತೇಕ ಸಂಸದರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರಿದವರು. ಇವರಿಗೆ ಪ್ರತಿಪಕ್ಷಗಳನ್ನು ಟೀಕಿಸುವಾಗ ಬರುವ ರೋಷಾವೇಶದ ಮಾತುಗಳು ತಮ್ಮನ್ನು ಚುನಾಯಿಸಿದ ರಾಜ್ಯದ ಅಭಿವೃದ್ಧಿಯ ಬಗ್ಗೆ ಒತ್ತಾಯಿಸಲು ಬಾಯಿಯಿಂದ ಹೊರಬರುವುದಿಲ್ಲ. ಆ ಪರಿ ಇವರು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾರಿಗೆ ಹೆದರುತ್ತಾರೆ.

14ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಬರಬೇಕಾಗಿದ್ದ 40 ಸಾವಿರ ಕೋಟಿ ರೂಪಾಯಿ ಖೋತಾ ಆದರೂ ನಮ್ಮ ರಾಜ್ಯದ ಸಂಸದರು ಬಾಯಿ ಬಿಡುತ್ತಿಲ್ಲ. ನೀರಾವರಿ ಯೋಜನೆಗಳಿಗೆ ಬರುತ್ತಿದ್ದ ಅನುದಾನ ನಿಂತು ಹೋಗಿದೆ. ಆದರೂ ನಮ್ಮ ರಾಜ್ಯದ ಸಂಸದರು ತೆಪ್ಪಗಿದ್ದಾರೆ. ರಾಜ್ಯದ ಬೇಡಿಕೆಗಳ ಬಗ್ಗೆ ಮೌನವಾಗಿರುವ ಇವರು ಪ್ರತಿಪಕ್ಷಗಳನ್ನು ಟೀಕಿಸಲು ತಮ್ಮ ನಾಲಿಗೆಯಲ್ಲಿ ಆಡಬಾರದ ಮಾತನ್ನು ಆಡುತ್ತಾರೆ.

ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಸಂಸದರನ್ನು ಓಲೈಸಿ ಹಿಡಿತದಲ್ಲಿ ಇಟ್ಟುಕೊಳ್ಳಲು ತಂದ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯ ಪಾರದರ್ಶಕತೆಯ ಬಗ್ಗೆ ಮೊದಲಿನಿಂದಲೂ ಸಂದೇಹಗಳು ಇದ್ದೇ ಇವೆ. ಈ ನಿಧಿಯ ದುರ್ಬಳಕೆ, ದುರ್ವಿನಿಯೋಗ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂತಾದವುಗಳ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಅಷ್ಟೇ ಅಲ್ಲ, ಮಹಾಲೇಖಪಾಲರ(ಸಿಎಜಿ) ವರದಿಗಳಲ್ಲಿ ಕೂಡ ಇದು ದಾಖಲಾಗಿದೆ. ಈ ನಿಧಿಯನ್ನು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಮೂಲಭೂತ ಸೌಕರ್ಯ ಹಾಗೂ ಪ್ರಾಥಮಿಕ ಶಿಕ್ಷಣ ಮುಂತಾದವುಗಳಿಗೆ ಉಪಯೋಗಿಸಿಕೊಳ್ಳಬೇಕೆಂದು ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆದರೆ ಇದು ಬಳಕೆಯಾಗುತ್ತಿರುವುದು ಯಾವುದಕ್ಕಾಗಿ? ಚುನಾವಣೆಯಲ್ಲಿ ಓಟು ಹಾಕಿಸಿಕೊಳ್ಳಲು ದೇವಾಲಯಗಳು ಹಾಗೂ ವಿವಿಧ ಜಾತಿಗಳಿಗೆ ಸೇರಿದ ಸಮುದಾಯ ಭವನಗಳ ನಿರ್ಮಾಣಕ್ಕೆ ಈ ಸಂಸದರ ನಿಧಿ ಬಳಕೆಯಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.ಅನುದಾನ ಹಂಚಿಕೆಯ ವಿವೇಚನಾಧಿಕಾರವನ್ನೇನೋ ಸಂಸದರಿಗೆ ನೀಡಲಾಗಿದೆ. ಆದರೆ ಇದಕ್ಕೆ ಉತ್ತರದಾಯಿತ್ವದ ಹೊಣೆಗಾರಿಕೆ ನಿಗದಿ ಪಡಿಸದಿರುವುದು ಈ ಯೋಜನೆಯ ಪಾರದರ್ಶಕತೆಯ ಬಗ್ಗೆ ಸಂದೇಹ ಮೂಡಲು ಕಾರಣವಾಗಿದೆ.ರಾಜಕೀಯವಾಗಿ ಮತ್ತು ನೈತಿಕವಾಗಿ ಲೋಪದಿಂದ ಕೂಡಿದ ಈ ಯೋಜನೆಯನ್ನು ಮನಬಂದಂತೆ ಜಾರಿಗೆ ತರುವ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣೆಯ ನಿಯಮವನ್ನು ಉಲ್ಲಂಘಿಸಲಾಗಿದೆ. ಈ ಯೋಜನೆಯನ್ನು ಮುಂದುವರಿಸುವ ಔಚಿತ್ಯದ ಬಗ್ಗೆ ಚಿಂತನೆ ನಡೆಯಬೇಕಾಗಿದೆ.

ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಅವುಗಳದೇ ಆದ ಕಾರ್ಯವ್ಯಾಪ್ತಿಗಳಿವೆ.ಒಂದರಲ್ಲಿ ಇನ್ನೊಂದು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಯಾವ ಯೋಜನೆ ಕಾರ್ಯಗತವಾಗಬೇಕೆಂಬುದನ್ನು ಸಂಸದರು ತೀರ್ಮಾನಿಸುವುದು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಲ್ಲದೆ ಬೇರೇನೂ ಅಲ್ಲ. ಯಾವುದೋ ಸಂದರ್ಭದಲ್ಲಿ ಅಂದು ಅಧಿಕಾರದಲ್ಲಿ ಇದ್ದವರ ರಾಜಕೀಯ ಅನುಕೂಲಕ್ಕಾಗಿ ಜಾರಿಗೆ ಬಂದಿರುವ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆ ಈಗ ಪ್ರಸ್ತುತವೇ? ಎಂಬ ಬಗ್ಗೆ ಪರಾಮರ್ಶೆ ನಡೆಯಬೇಕಾಗಿದೆ. ಜನತೆಯ ಬೊಕ್ಕಸದ ಹಣ ದುರ್ಬಳಕೆಯಾಗಬಾರದು. ಸಾರ್ವಜನಿಕ ಹಣವನ್ನು ವ್ಯಯಿಸುವಾಗ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

ಸಂಸದರಿಗಾಗಿ ಈಗಾಗಲೇ ಸಂಬಳ, ಭತ್ತೆ, ಪ್ರವಾಸ ಭತ್ತೆ, ದೂರವಾಣಿ ಸೌಕರ್ಯ, ವಸತಿ ಸೌಕರ್ಯ ಸೇರಿದಂತೆ ಹಲವಾರು ಅನುಕೂಲಗಳನ್ನು ಕಲ್ಪಿಸಲು ಸರಕಾರದ ಖಜಾನೆಯಿಂದ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಇದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆಂದು ಕೋಟ್ಯಂತರ ರೂಪಾಯಿ ಒದಗಿಸುವುದರಲ್ಲಿ ಅರ್ಥವಿಲ್ಲ.

ಸಾರ್ವಜನಿಕ ಹಣಕಾಸನ್ನು ವ್ಯಯ ಮಾಡುವಾಗ ಅಧಿಕಾರದಲ್ಲಿದ್ದವರು ತುಂಬಾ ಎಚ್ಚರದ ಹೆಜ್ಜೆಯನ್ನಿಡಬೇಕು. ಭಾರತ ಈಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರೋನ ಎರಡೂ ಅಲೆಗಳ ನಂತರವಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಇಂತಹ ಸನ್ನಿವೇಶದಲ್ಲಿ ಸ್ಥಗಿತಗೊಳಿಸಲಾಗಿದ್ದ ಸಂಸದರ ಅಭಿವೃದ್ಧಿ ನಿಧಿ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರಲು ಸರಕಾರ ಆತುರದ ತೀರ್ಮಾನ ಕೈಗೊಳ್ಳಬಾರದಿತ್ತು. ಈಗಲಾದರೂ ಇದನ್ನು ಕೈ ಬಿಡುವುದು ಸೂಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News