ರೈತರ ಸಾಲಮನ್ನಾಗೆ ಆರ್ಥಿಕ ಇಲಾಖೆ ಕೊಕ್ಕೆ

Update: 2021-12-01 02:51 GMT

ಬೆಂಗಳೂರು: ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿದೆ. ಅಲ್ಲದೆ ಒಂದು ಲಕ್ಷ ರೂ. ಸಾಲ ಮನ್ನಾ ಯೋಜನೆ ಮುಂದುವರಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೆಚ್ಚುವರಿ ಅನುದಾನ ಕೋರಿಕೆಯ ಪ್ರಸ್ತಾವವೂ ನೆನೆಗುದಿಗೆ ಬಿದ್ದಿದೆ. ಪ್ರಸಕ್ತ ಆರ್ಥಿಕ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು ಎಂದು ಆರ್ಥಿಕ ಇಲಾಖೆಯು ಪುನರುಚ್ಛರಿಸಿದೆ.

ಆರ್ಥಿಕ ಇಲಾಖೆಯು ಈ ನಿಲುವು ಅಕಾಲಿಕ ಮಳೆ, ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರ ಮೇಲೆ ಗದಾ ಪ್ರಹಾರ ಮಾಡಿದಂತಾಗಿದೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆಯು 2021ರ ಆಗಸ್ಟ್‌ನಿಂದ ನವೆಂಬರ್ 29ರವರೆಗೆ ನಡೆಸಿರುವ ಪತ್ರ ವ್ಯವಹಾರ ಮತ್ತು ಟಿಪ್ಪಣಿ ಹಾಳೆ, ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2021ರ ನವೆಂಬರ್ 8ರಂದು ಬರೆದಿರುವ ಪತ್ರ ‘the-file.in’ ವೆಬ್‌ಸೈಟ್‌ಗೆ ಲಭ್ಯವಾಗಿದೆ.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ 9,146 ರೈತರಿಗೆ ಸಂಬಂಧಿಸಿದಂತೆ 4707.42 ಲಕ್ಷ ರೂ.ಗಳ ಸಾಲ ಮನ್ನಾ ಮಾಡಲು ಹಸಿರು ಪಟ್ಟಿ ನೀಡಿ ವರದಿ ಸಲ್ಲಿಸಿದೆ. 1.00 ಲಕ್ಷ ರೂ. ಸಾಲ ಮನ್ನಾ ಮತ್ತು 50,000 ರೂ. ಸಾಲ ಮನ್ನಾ ಯೋಜನೆಗೆ ಸೇರಿ ಒಟ್ಟು 361.67 ಕೋಟಿ ರೂ. ಗಳನ್ನು ಪೂರಕ ಅಂದಾಜಿನಲ್ಲಿ ಒದಗಿಸಲು ಸಹಕಾರ ಇಲಾಖೆಯು 2021ರ ಮಾರ್ಚ್ 6ರಂದು ಕೋರಿದ್ದ ಪ್ರಸ್ತಾವನೆಯನ್ನು ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ತಿರಸ್ಕರಿಸಿತ್ತು. ಇದೀಗ ಆರ್ಥಿಕ ಇಲಾಖೆಗೆ ಮತ್ತೊಮ್ಮೆ ಸಹಕಾರ ಸಂಘಗಳ ನಿಬಂಧಕರು ಇದೇ ಪ್ರಸ್ತಾವ ಸಲ್ಲಿಸಿದ್ದಾರೆ. ಇದನ್ನು ಒಪ್ಪಬೇಕೇ ಬೇಡವೇ ಎಂು ಆರ್ಥಿಕ ಇಲಾಖೆಯು ಚರ್ಚಿಸುತ್ತಿದೆ.

ಅಲ್ಲದೆ 1.00 ಲಕ್ಷ ರೂ.ಗಳ ಸಾಲ ಮನ್ನಾ ಯೋಜನೆ ಯಡಿಯಲ್ಲಿ 232.00 ಕೋಟಿ ರೂ. ಹಾಗೂ 50,000 ರೂ. ಸಾಲ ಮನ್ನಾ ಯೋಜನೆಗೆ 129.67 ಕೋಟಿ ರೂ. ಸೇರಿ ಒಟ್ಟು 361.67 ಕೋಟಿ ರೂ. ಅನುದಾನವನ್ನು ಆಯವ್ಯಯ ಪೂರಕ ಅಂದಾಜಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು 2021ರ ನವೆಂಬರ್ 25ರಂದು ಮತ್ತೊಮ್ಮೆ ಕೋರಿದೆ. ಸದ್ಯ ಆದೇಶವು ಅನುಮೋದನೆಗೆ ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಂದಿರುವುದು ತಿಳಿದು ಬಂದಿದೆ.

 ಸದ್ಯಕ್ಕೆ 1.00 ಲಕ್ಷ ರೂ. ಸಾಲ ಮನ್ನಾ ಯೋಜನೆಗಾಗಿ 120.43 ಕೋಟಿ ರೂ., 47.07 ಕೋಟಿ ರೂ. ಸೇರಿ ಒಟ್ಟು 167.50 ಕೋಟಿ ಬಿಡುಗಡೆಗೆ ಸಮ್ಮತಿ ನೀಡಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾವ ಸಲ್ಲಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವವೂ ಈಗಾಗಲೇ ತಿರಸ್ಕೃತವಾಗಿದ್ದರಿಂದ 2020-21ನೇ ಸಾಲಿನ ಆಯವ್ಯಯದ (ಲೆಕ್ಕ ಶೀರ್ಷಿಕೆ 2425-00-107-2-56 ರಡಿ)ಲ್ಲಿ 278.40 ಕೋಟಿ ರೂ. ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ 34.73 ಕೋಟಿ ರೂ. ಸೇರಿದಂತೆ ಸಾಲಮನ್ನಾ ಯೋಜನೆಯ ಹಸಿರು ಪಟ್ಟಿಯಲ್ಲಿ, ಬಾಕಿ ಇರುವ 57,229 ರೈತರಿಗೆ ಸಾಲ ಮನ್ನಾ ಯೋಜನೆಗಾಗಿ 295.14 ಕೋಟಿ ರೂ.ಒದಗಿಸಿತ್ತು.

 2021-22ನೇ ಸಾಲಿನಲ್ಲಿಯೂ 21,857 ರೈತರಿಗೆ ಈಗಾಗಲೇ ಹಸಿರು ಪಟ್ಟಿ ನೀಡಲಾಗಿತ್ತು. ಇದಕ್ಕಾಗಿ 120.43 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಕೋರಿತ್ತು. ಅದೇ ರೀತಿ ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರಿಗೆ ಹಸಿರು ಪಟ್ಟಿ ದೊರೆಯಲಿದ್ದು, ಇದಕ್ಕಾಗಿ 111.57 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಅಂದಾಜಿಸಿತ್ತು. ಆದರೆ 201-2 22ನೇ ಸಾಲಿನ ಆಯವ್ಯಯದಲ್ಲಿ (ಲೆಕ್ಕ ಶೀರ್ಷಿಕೆ 2425-00-107-2-56 ರಡಿ) ಯಾವುದೇ ಅನುದಾನ ಒದಗಿಸಿರಲಿಲ್ಲ.

‘ಅಲ್ಲದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಸಿರು ಪಟ್ಟಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದಲೂ ಪ್ರಸ್ತಾವಗಳು ಸಲ್ಲಿಕೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರು ಹಸಿರು ಪಟ್ಟಿಗೆ ಸೇರುವುದರಿಂದ ಈ ಒಂದು ಪ್ರಕರಣದಲ್ಲಿ ಅನುದಾನ ಒದಗಿಸಿದ ಪಕ್ಷದಲ್ಲಿ ಬಹಳ ವರ್ಷಗಳವರೆಗೂ ಅನುದಾನ ಒದಗಿಸುತ್ತಾ ಇರಬೇಕಾಗುತ್ತದೆ. ಆದ್ದರಿಂದ 2021ರ ಮಾರ್ಚ್ 6ರಂದು ತಳೆದಿದ್ದ ನಿಲುವಿಗೆ ಬದ್ಧವಾಗಿರಬೇಕು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಪಟ್ಟಿದೆ.

ಸಹಕಾರ ಇಲಾಖೆಯು ಒಟ್ಟಾರೆ ಹಸಿರು ಪಟ್ಟಿಯ ರೈತರನ್ನು ಗುರುತಿಸುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ಅಂತಿಮ ಪಟ್ಟಿ ತಯಾರಿಸಿದ ನಂತರ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುವವರೆಗೂ ಪ್ರಸ್ತಾವವನ್ನು ವಿಲೇ ಇಡಬೇಕು ಎಂದು 2021ರ ಅಕ್ಟೋಬರ್‌ನಲ್ಲಿ ಹೇಳಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಮಂಜೂರಾಗಲಿದ್ದ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಿ ಈ ಯೋಜನೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿತ್ತು. ಅಲ್ಲದೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗಿತ್ತು. ಹೀಗಾಗಿ ಈ ಯೋಜನೆಯನ್ನು ಪುನರ್ ತೆರೆಯುವ ಹಾಗೂ ಈ ಪ್ರಕರಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಮೇಯವೇ ಇಲ್ಲ ಎಂದು ಆರ್ಥಿಕ ಇಲಾಖೆ 2021ರ ಮಾರ್ಚ್ 6ರಂದು ತಿಳಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ 2021ರ ಜೂನ್ 25ರಂದು ಸಭೆ ನಡೆದಿತ್ತು. ಈ ಅವಧಿಯವರೆಗೆ 1706049 ರೈತರಿಗೆ ಹಸಿರು ಪಟ್ಟಿ ನೀಡಲಾಗಿತ್ತು. 59,618 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ 21,035 ರೈತರು ಅದೇ ದಿನಾಂಕದಂದು ಅರ್ಹತೆ ಹೊಂದಿದ್ದರು. ಈ ಪೈಕಿ ಒಂದು ಕುಟುಂಬಕ್ಕೆ 1 ಲಕ್ಷ ರೂ. ಹೊರತುಪಡಿಸಿ 10,000 ರೈತರು ಸಾಲ ಮನ್ನಾಗೆ ಅರ್ಹತೆ ಹೊಂದಿದ್ದರು ಎಂಬುದು ತಿಳಿದು ಬಂದಿದೆ.

2021ರ ಸೆ.7ರ ಹೊತ್ತಿಗೆ 20,697 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ ಪ್ರಮುಖವಾಗಿ 12,237 ರೈತರ ಪಡಿತರ ಚೀಟಿಗಳು ರೈತರು ದಾಖಲೆ ಸಲ್ಲಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದತ್ತಾಂಶಕ್ಕೆ ತಾಳೆ ಇತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶವು ಈ ಪಡಿತರ ಚೀಟಿಗಳನ್ನು ತಂತ್ರಾಂಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸರಿ ಇದೆ ಎಂದು ದೃಢೀಕರಿಸಿರಲಿಲ್ಲ.

ರೈತರು ಸಲ್ಲಿಸಿದ ಆಧಾರ್, ಪಡಿತರ ಚೀಟಿ ಮತ್ತು ಆರ್‌ಟಿಸಿಗಳು ತಂತ್ರಾಂಶದಲ್ಲಿನ ಕೆಲವು ನ್ಯೂನತೆಗಳಿಂದ ಸಂಬಂಧಿಸಿದ ಇಲಾಖೆಗಳ ದತ್ತಾಂಶದೊಂದಿಗೆ ತಾಳೆಯಾಗದ ಕಾರಣ ಸ್ವಯಂ ದೃಢೀಕರಿಸಿ ಇಂತಹ ಪ್ರಕರಣಗಳನ್ನು ಸರಿಪಡಿಸಲಾಗಿತ್ತು.

Writer - ಜಿ. ಮಹಾಂತೇಶ್

contributor

Editor - ಜಿ. ಮಹಾಂತೇಶ್

contributor

Similar News