ಟರ್ಕಿ: ಬಡ್ಡಿದರ ಕಡಿತ ಮುಂದುವರಿಕೆ; ಅಧ್ಯಕ್ಷರ ಘೋಷಣೆ

Update: 2021-12-01 16:30 GMT
ಟರ್ಕಿಯ ಅಧ್ಯಕ್ಷ ರಿಸೆಪ್ ಎರ್ದೋಗನ್(photo:PTI)

ಅಂಕಾರ, ಡಿ.1: ಟರ್ಕಿಯಲ್ಲಿ ಬಡ್ಡಿದರ ಕಡಿತ ಮುಂದುವರಿಯಲಿದ್ದು ಈ ಮೂಲಕ ಅಲ್ಪಾವಧಿಯ ವಿದೇಶಿ ನಗದಿನ ಅವಲಂಬನೆಯಿಂದ ಮುಕ್ತಗೊಂಡ ಮತ್ತು ಸ್ಥಳೀಯ ಉತ್ಪಾದನೆ ಮತ್ತು ರಫ್ತು ಆಧಾರಿತ ಆರ್ಥಿಕ ಅಭಿವೃದ್ಧಿ ಸಾಧಿಸಲು ವೇದಿಕೆ ರೂಪುಗೊಳ್ಳಲಿದೆ ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ಎರ್ದೋಗನ್ ಹೇಳಿದ್ದಾರೆ.

ಕಡಿಮೆ ಬಡ್ಡಿದರದ ಸಾಲದ ನೆರವು ಉತ್ಪಾದನೆಗೆ ಉತ್ತೇಜನ ನೀಡುವ ಜತೆಗೆ ಉದ್ಯೋಗ ಸೃಷ್ಟಿಸಲಿದೆ ಮತ್ತು ಗ್ರಾಹಕ ಹಣದುಬ್ಬರ ದರವನ್ನು ತಗ್ಗಿಸಲಿದೆ ಮತ್ತು ಇದರಿಂದ ದೇಶದ ಕರೆನ್ಸಿ ಸದೃಢಗೊಳ್ಳಲಿದೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಟಿಆರ್‌ಟಿಗೆ ನೀಡಿದ ಸಂದರ್ಶನದಲ್ಲಿ ಎರ್ದೋಗನ್ ಹೇಳಿದ್ದಾರೆ.

ವಿದೇಶದ ಹೂಡಿಕೆಯನ್ನು ಆಕರ್ಷಿಸುವ ಯಾವುದೇ ಪ್ರಯತ್ನವನ್ನೂ ಟರ್ಕಿ ಮಾಡುವುದಿಲ್ಲ. ಯಾಕೆಂದರೆ ದೇಶದ ಆರ್ಥಿಕತೆಯನ್ನು ಕ್ಷಿಪ್ರವಾಗಿ ಹಿಂದಕ್ಕೆ ಪಡೆಯಬಲ್ಲ ‘ಬಿಸಿ ಬಂಡವಾಳ’ ದ ಮರ್ಜಿಗೆ ಒಳಪಡಿಸಲು ಇಷ್ಟವಿಲ್ಲ. ನಮ್ಮ ದೇಶ ಈ ವಿಷಮಚಕ್ರವನ್ನು ಮುರಿಯುವ ಹಂತಕ್ಕೆ ಬಂದಿದೆ ಮತ್ತು ಇಲ್ಲಿಂದ ಹಿಂದೆ ತಿರುಗುವ ಮಾತೇ ಇಲ್ಲ ಎಂದವರು ಹೇಳಿದ್ದಾರೆ.

ಸೆಪ್ಟಂಬರ್‌ನಲ್ಲಿ ಟರ್ಕಿಯ ಸೆಂಟ್ರಲ್ ಬ್ಯಾಂಕ್ ಸುಲಭ ಆರ್ಥಿಕ ನೆರವು ಯೋಜನೆಗೆ ನೀಡಿದಂದಿನಿಂದ ಮತ್ತು ಬೆಂಚ್‌ಮಾರ್ಕ್ ಬಡ್ಡಿದರವನ್ನು 4% ಅಂಕದಷ್ಟು ಇಳಿಸಿದಂದಿನಿಂದ ದೇಶದ ಕರೆನ್ಸಿ ಲಿರಾ ಸುಮಾರು 28%ದಷ್ಟು ಅಪಮೌಲ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಕಡಿತವನ್ನು ಅಂತ್ಯಗೊಳಿಸುವ ಬಗ್ಗೆ ಡಿಸೆಂಬರ್‌ನಲ್ಲಿಯೇ ಪರಿಶೀಲಿಸುವುದಾಗಿ ಆರ್ಥಿಕ ತಜ್ಞರು ಹೇಳಿರುವುದರಿಂದ ಸೆಂಟ್ರಲ್ ಬ್ಯಾಂಕ್ ಇಕ್ಕಟ್ಟಿಗೆ ಸಿಲುಕಿದೆ.

ಅಧ್ಯಕ್ಷ ಎರ್ದೋಗನ್ ಹೇಳಿಕೆಯ ಬಳಿಕ ಲಿರಾ ಕರೆನ್ಸಿಯ ಮುಖಬೆಲೆ ಮತ್ತಷ್ಟು ಕುಸಿದಿದ್ದು ಅಮೆರಿಕದ ಡಾಲರ್ ಎದುರು 8.1% ಕುಸಿತ ಕಂಡಿದೆ.

ಈ ನೀತಿಯ ಪರಿಣಾಮ ಆದಾಯದ ಅಸಮಾನತೆ ಇನ್ನಷ್ಟು ಹೆಚ್ಚಲಿದೆ ಮತ್ತು ಕೋವಿಡ್ ಸೋಂಕಿನಿಂದ ಆಗಿರುವ ಹಾನಿ (ಅಂದರೆ ಸಂಭಾವ್ಯ ಸಾಮಾಜಿಕ ವೆಚ್ಚ) ಈ ಬಾರಿ ಅಧಿಕವಾಗಲಿದೆ. ಲಿರಾ ಕರೆನ್ಸಿಯ ನಿರಂತರ ಅಪಮೌಲ್ಯದಿಂದ 84 ಮಿಲಿಯನ್ ಜನಸಂಖ್ಯೆಯ ದೇಶದಲ್ಲಿ ಜೀವನ ವೆಚ್ಚ ಇನ್ನಷ್ಟು ದುಬಾರಿಯಾಗಲಿದೆ.

ಆದರೆ ಸುಳ್ಳು ಚೌಕಟ್ಟಿನ ಭರವಸೆಯ ಆಧಾರ ಹೊಂದಿರುವ ಹಳೆಯ ಕಾರ್ಯನೀತಿ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ನಮ್ಮ ಮೇಲೆ ಹೇರಲಾದ ಹೆಚ್ಚಿನ ಬಡ್ಡಿದರದ ವಿದ್ಯಮಾನ ಹೊಸ ವಿದ್ಯಮಾನವಲ್ಲ. ಇದು ದೇಶೀಯ ಉತ್ಪಾದನೆಯನ್ನು ನಾಶಗೊಳಿಸುವ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ಮೂಲಕ ರಚನಾತ್ಮಕ ಹಣದುಬ್ಬರವನ್ನು ಶಾಶ್ವತವಾಗಿಸುವ ಮಾದರಿಯಾಗಿದೆ. ಈ ಆವರ್ತವನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದು ಎರ್ದೋಗನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News