ಲಾಕ್‌ಡೌನ್ ವಿರುದ್ಧ ಸಂಘಟಿತರಾಗೋಣ!

Update: 2021-12-02 03:48 GMT

‘ಲಾಕ್‌ಡೌನ್ ಇಲ್ಲ, ವದಂತಿಗಳಿಗೆ ಕಿವಿ ಗೊಡಬೇಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಸಮಾಧಾನ ಹೇಳಿದ್ದಾರೆ. ಆದರೆ ಈ ಸಮಾಧಾನದ ಮಾತುಗಳು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಯಾಕೆಂದರೆ, ಈ ಹಿಂದೆ ಯಡಿಯೂರಪ್ಪನವರು ‘ಲಾಕ್‌ಡೌನ್ ಪ್ರಶ್ನೆಯೇ ಇಲ್ಲ’ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಘೋಷಿಸಿದ್ದರು. ಲಾಕ್‌ಡೌನ್ ವಿಧಿಸುವುದಕ್ಕೆ ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲದಿದ್ದರೂ, ಕೆಲವು ಹಿತಾಸಕ್ತಿಗಳು ಮಾಧ್ಯಮಗಳ ಮೂಲಕ ಸುದ್ದಿಗಳನ್ನು ವೈಭವೀಕರಿಸಿ, ಲಾಕ್‌ಡೌನ್ ಹೇರುವಂತೆ ಮಾಡಿದ್ದರು. ಇದೀಗ ವಿಶ್ವ ಒಮೈಕ್ರಾನ್ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದೆ. ಇದನ್ನೇ ಮುಂದಿಟ್ಟು ಮಾಧ್ಯಮಗಳು ಮತ್ತೊಮ್ಮೆ ಕೊರೋನವನ್ನು ವೈಭವೀಕರಿಸುತ್ತಿವೆ. ಮತ್ತೆ ಆಸ್ಪತ್ರೆಗಳು ಇದರ ಲಾಭವನ್ನು ತನ್ನದಾಗಿಸಿಕೊಳ್ಳಲು ಹೊರಟಿವೆ. ಲಸಿಕೆ ನೀಡುವಿಕೆಯಲ್ಲಿ ಸರಕಾರದ ಸಾಧನೆಯ ತುತ್ತೂರಿಯಾಗಿದ್ದ ಮಾಧ್ಯಮಗಳೇ ಇದೀಗ ಮತ್ತೆ ಕೊರೋನ ಭಯವನ್ನು ಬಿತ್ತಲು ಹೊರಟಿರುವುದು ವಿಪರ್ಯಾಸವಾಗಿದೆ.

ಕೆಲವು ಸ್ಥಾಪಿತ ಹಿತಾಸಕ್ತಿಗಳಿಗೆ ಪೂರಕವಾಗಿ ಮಾಧ್ಯಮಗಳು ಕೊರೋನದ ಕುರಿತಂತೆ ಆತಂಕಗಳನ್ನು ಬಿತ್ತುತ್ತಿವೆ ಎನ್ನುವುದು ನುರಿತ ವೈದ್ಯರ ಅನಿಸಿಕೆಯಾಗಿದೆ. ಈಗಾಗಲೇ ಕೊರೋನ ಬಂದು ಹೋದವರು ಇನ್ನೊಂದು ಕೊರೋನಕ್ಕೆ ಹೆದರಬೇಕಾಗಿಲ್ಲ. ಅವರು ಲಸಿಕೆ ಹಾಕದಿದ್ದರೂ ಆತಂಕ ಪಡಬೇಕಾಗಿಲ್ಲ ಎನ್ನುವುದು ಕೆಲವು ವೈದ್ಯರ, ತಜ್ಞರ ಅಭಿಪ್ರಾಯ. ದೇಶದ ಬಹುಸಂಖ್ಯಾತ ಜನರು ಈಗಾಗಲೇ ಕೊರೋನವನ್ನು ಬೇರೆ ಬೇರೆ ರೂಪದಲ್ಲಿ ದೈಹಿಕವಾಗಿ ಎದುರಿಸಿದವರೇ ಆಗಿದ್ದಾರೆ. ಅಷ್ಟೇ ಅಲ್ಲ, ಸರಕಾರವೂ ನೂರು ಕೋಟಿ ಲಸಿಕೆ ನೀಡಿರುವ ಬಗ್ಗೆ ಹೇಳಿಕೊಂಡಿದೆ. ಹೀಗಿರುವಾಗ, ಕೊರೋನಕ್ಕಾಗಿ ದೇಶ ಮತ್ತೆ ಯಾಕೆ ಆತಂಕ ಪಡಬೇಕು? ಮತ್ತೆ ಲಾಕ್‌ಡೌನ್ ವದಂತಿಯನ್ನು ಯಾರು, ಯಾತಕ್ಕಾಗಿ ಹರಡುತ್ತಿದ್ದಾರೆ? ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಇದೇ ಸಂದರ್ಭದಲ್ಲಿ ಮತ್ತೆ ಕೋವಿಡ್ ಪರೀಕ್ಷೆಯ ಪ್ರಹಸನ ಆರಂಭವಾಗಿದೆ. ಕೋವಿಡ್ ಪರೀಕ್ಷೆ ಬಹುದೊಡ್ಡ ದಂಧೆ ಎರಡನೆ ಅಲೆಯಲ್ಲಿ ಬಟಾ ಬಯಲಾಗಿತ್ತು. ಕೋವಿಡ್ ಪರೀಕ್ಷೆಯೇ ಈ ಹಿಂದೆ ಆಸ್ಪತ್ರೆಯನ್ನು ತುಂಬಿ ತುಳುಕುವಂತೆ ಮಾಡಿಸಿ, ಅರ್ಹ ರೋಗಿಗಳಿಗೆ ಸ್ಥಳವಿಲ್ಲದಂತಹ ಸ್ಥಿತಿ ನಿರ್ಮಾಣ ಮಾಡಿತ್ತು. ಅದು ಅಂತಿಮವಾಗಿ ನೂರಾರು ಜನರ ಸಾವು ನೋವುಗಳಿಗೆ ಕಾರಣವಾಯಿತು. ಅನ್ಯ ಕಾಯಿಲೆಯಿಂದ ಸತ್ತವರನ್ನೆಲ್ಲ ಕೊರೋನ ಖಾತೆಗೆ ಸೇರಿಸಿ ಕೊರೋನವನ್ನು ಇನ್ನಷ್ಟು ಭೀಕರಗೊಳಿಸಲಾಯಿತು. ಕೊನೆಗೆ ಸರಕಾರವೇ, ಅನಗತ್ಯವಾಗಿ ಪರೀಕ್ಷೆ ಮಾಡಬೇಡಿ, ಆಸ್ಪತ್ರೆಗೆ ದಾಖಲಾಗಬೇಡಿ ಎಂದು ಕೋರಿಕೊಳ್ಳುವಂತಾಯಿತು.

‘ಕೊರೋನ ಮಾರಣಾಂತಿಕ ರೋಗವಲ್ಲ. ಶೀಘ್ರವಾಗಿ ಹರಡುವ ವೈರಸ್ ಅಷ್ಟೇ. ಶ್ವಾಸಕೋಶ ಸಮಸ್ಯೆ, ಉಸಿರಾಟದ ತೊಂದರೆಯಿರುವವರಷ್ಟೇ ಅನಿವಾರ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ. ಜ್ವರ, ಕೆಮ್ಮು ಇದ್ದವರು ಅಂತರ ಕಾಪಾಡಿಕೊಂಡು ಮನೆಯಲ್ಲೇ ಇರಿ. ಅನಗತ್ಯವಾಗಿ ಪರೀಕ್ಷೆ ಮಾಡಲು ಹೋದರೆ ಅದು ಇನ್ನಷ್ಟು ಹರಡುವುದಕ್ಕೆ ಕಾರಣವಾಗುತ್ತದೆ’ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಜೊತೆಗೆ, ಕೊರೋನ ಪರೀಕ್ಷೆಗೆ ಹೋದವರನ್ನು ಆಸ್ಪತ್ರೆಗಳು ದಾರಿತಪ್ಪಿಸುವ, ಅವರನ್ನು ಅನಗತ್ಯವಾಗಿ ದಾಖಲಿಸಿ ಆರ್ಥಿಕವಾಗಿ ಸುಲಿಯುವ ಸಾಧ್ಯತೆಗಳಿವೆ. ಒಂದೆಡೆ ಲಸಿಕೆಯೂ ನೀಡಲಾಗುತ್ತಿದೆ. ಇನ್ನೊಂದೆಡೆ ಈಗಾಗಲೇ ಕೊರೋನ ಬಂದು ಹೋದವರು ತಮ್ಮ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಮತ್ತೆ ಕೊರೋನ ಅಂಟಿದರೂ ಅವರು ಅದನ್ನು ಸುಲಭವಾಗಿ ಎದುರಿಸಬಲ್ಲರು. ಈ ಹಿನ್ನೆಲೆಯಲ್ಲಿ ಕೊರೋನದ ಕುರಿತಂತೆ ಜನಸಾಮಾನ್ಯರು ಗಾಬರಿಗೊಳ್ಳುವ ಅಗತ್ಯವೇ ಇಲ್ಲ.

ಲಸಿಕೆ ನೀಡುವಿಕೆಯ ಅಂಕಿಅಂಶಗಳನ್ನು ಹೆಚ್ಚಿಸಿಕೊಳ್ಳಲು ಲಾಕ್‌ಡೌನ್ ಬೆದರಿಕೆ ಒಡ್ಡಲಾಗುತ್ತಿದೆ ಎನ್ನುವ ದೂರುಗಳೂ ಇವೆ. ಲಸಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹೇರಬಾರದು ಮತ್ತು ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಧಿಸಬಾರದು ಎಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಲಸಿಕೆಗಳು ಹಲವರ ಮೇಲೆ ದುಷ್ಪರಿಣಾಮಗಳನ್ನೂ ಬೀರಿವೆ. ಇದೇ ಸಂದರ್ಭದಲ್ಲಿ ಲಸಿಕೆ ತೆಗೆದುಕೊಂಡವರು ಕೊರೋನದಿಂದ ಮೃತರಾದ ಉದಾಹರಣೆಗಳೂ ಇವೆ. ಇವೆಲ್ಲ ಗೊಂದಲಗಳಿರುವಾಗ ದುರ್ಬಲ ಮನಸ್ಥಿತಿಯ ಜನರಿಗೆ ಲಸಿಕೆಯನ್ನು ಬಲವಂತವಾಗಿ ಹೇರುವುದು ಎಷ್ಟು ಸರಿ ಎನ್ನುವುದನ್ನು ನ್ಯಾಯಾಲಯವೇ ಹೇಳಬೇಕು. ಇದರ ವಿಚಾರಣೆ ಇನ್ನೂ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ‘ಲಾಕ್‌ಡೌನ್’ ಕೊರೋನಕ್ಕೆ ಪರಿಹಾರವಲ್ಲ ಎನ್ನುವುದನ್ನು ಈ ಹಿಂದಿನ ಭೀಕರ ಪರಿಣಾಮದಿಂದ ಕಂಡುಕೊಂಡಿದ್ದೇವೆ. ಲಾಕ್‌ಡೌನ್ ವಿಧಿಸಿದ ಬಳಿಕವೂ ಕೊರೋನ ಈ ದೇಶವನ್ನು ಭೀಕರವಾಗಿ ಕಾಡಿತು. ಆದರೆ ಲಕ್ಷಾಂತರ ಜನರು ಕೊರೋನಕ್ಕಿಂತ, ಲಾಕ್‌ಡೌನ್ ದುಷ್ಪರಿಣಾಮಗಳಿಗೆ ಬಲಿಯಾದರು. ಕೊರೋನದಿಂದ ಗುಣಮುಖರಾದವರು ಲಕ್ಷಾಂತರ ಜನರಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ಸಂತ್ರಸ್ತರಾದವರು ಇನ್ನೂ ಗುಣಮುಖರಾಗಿಲ್ಲ. ಸಾವಿರಾರು ಜನರು ಆರ್ಥಿಕವಾಗಿ ಸರ್ವನಾಶವಾಗಿದ್ದಾರೆ. ಲಕ್ಷಾಂತರ ಮಕ್ಕಳು ಶಾಲೆಗಳಿಂದ ಶಾಶ್ವತವಾಗಿ ಹೊರದಬ್ಬಲ್ಪಟ್ಟರು. ಮಹಿಳೆಯರು ಅತಂತ್ರರಾದರು. ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿಗೆ ಬಿದ್ದರು. ಕೊರೋನಕ್ಕಿಂತ ಅಥವಾ ಒಮೈಕ್ರಾನ್‌ಗಿಂತ ಭೀಕರವಾದುದು ಲಾಕ್‌ಡೌನ್. ಇಂದಿಗೂ ಕಾರ್ಮಿಕರು, ಬಡವರು ಕೊರೋನಕ್ಕೆ ಹೆದರದೇ ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದಾರೆ. ಆದರೆ ಲಾಕ್‌ಡೌನ್ ಎಂದರೆ ಬೆಚ್ಚಿ ಬೀಳುತ್ತಾರೆ. ನಮಗೆ ಲಸಿಕೆ ಬೇಡ, ಉದ್ಯೋಗ ಬೇಕು ಎನ್ನುವುದು ಕಾರ್ಮಿಕರ ಆಗ್ರಹವಾಗಿದೆ.

ಭಾರತದಂತಹ ಬಡದೇಶ ಲಾಕ್‌ಡೌನ್‌ನ್ನು ಹೇರಿಕೊಂಡು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ನೋಟು ನಿಷೇಧದಿಂದ ಜರ್ಜರಿತವಾಗಿರುವ ನಮ್ಮ ಆರ್ಥಿಕ ಸ್ಥಿತಿ, ಲಾಕ್‌ಡೌನ್‌ನಿಂದ ಪಾತಾಳಕ್ಕೆ ತಲುಪಿದೆ. ಇದೀಗ ಮತ್ತೆ ಲಾಕ್‌ಡೌನ್ ಬಗ್ಗೆ ವದಂತಿ ಹಬ್ಬಿಸುವುದು ಜನದ್ರೋಹದ ಕೆಲಸವಾಗಿದೆ. ಲಾಕ್‌ಡೌನ್ ವದಂತಿಯೂ ಹಲವು ದುಷ್ಪರಿಣಾಮಗಳನ್ನು ಬೀರಬಹುದು. ಲಾಕ್‌ಡೌನ್ ಭಯದಿಂದ ಜನರು ಆರ್ಥಿಕವಾಗಿ ಹೂಡಿಕೆ ಮಾಡಲು ಹೆದರುತ್ತಾರೆ. ಕಾಳ ದಾಸ್ತಾನುಗಳು ಹೆಚ್ಚಿ, ಏಕಾಏಕಿ ಬೆಲೆಯೇರಿಕೆಯಾಗಬಹುದು. ಇವೆಲ್ಲವು ಅಂತಿಮವಾಗಿ ಬಡವರ್ಗವನ್ನು ಇನ್ನಷ್ಟು ನಾಶ, ನಷ್ಟಕ್ಕೀಡು ಮಾಡಬಹುದು. ಆದುದರಿಂದ ಸರಕಾರವೇನಾದರೂ ಲಾಕ್‌ಡೌನ್ ವಿಧಿಸಲು ಮುಂದಾದರೆ ಅದನ್ನು ಸಂಘಟಿತವಾಗಿ ಎದುರಿಸುವ, ಅದಕ್ಕೆ ಅಸಹಕಾರ ನೀಡುವ, ಒಂದಾಗಿ ಪ್ರತಿಭಟಿಸುವ ದಾರಿಯಷ್ಟೇ ಜನಸಾಮಾನ್ಯರಿಗೆ ಉಳಿದಿರುವುದು. ಲಾಕ್‌ಡೌನ್‌ಗೆ ಹೆದರದೇ ಬೀದಿಯಲ್ಲಿ ಒಟ್ಟಾಗಿ ಕುಳಿತು ಕೇಂದ್ರ ಸರಕಾರವನ್ನು ಮಣಿಸಿದ ರೈತರ ಹೋರಾಟ, ನಮಗೆ ಈ ನಿಟ್ಟಿನಲ್ಲಿ ದಾರಿದೀಪವಾಗಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News