ಗುಜರಾತ್: ಸ್ವದೇಶಿ ಇ-ಟ್ಯಾಬ್ಲೆಟ್ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ, ನಮೋ ಯೋಜನೆ ಮತ್ತೆ ವಿಳಂಬ

Update: 2021-12-02 14:16 GMT
ಸಾಂದರ್ಭಿಕ ಚಿತ್ರ (Photo: indiatoday.in)

ಅಹ್ಮದಾಬಾದ್: ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ನಮೋ ಇ-ಟ್ಯಾಬ್ಲೆಟ್ಗಳನ್ನು ಒದಗಿಸುವ ಗುಜರಾತ್ ಸರಕಾರದ ಯೋಜನೆ ಮತ್ತೆ ವಿಳಂಬಗೊಂಡಿದೆ. ಭಾರತೀಯ ಕಂಪನಿಯು ತಯಾರಿಸಿರುವ ಈ ಸಾಧನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿರುವುದು ಇದಕ್ಕೆ ಕಾರಣ. 2020-21ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡು 1,000 ರೂ.ಗಳ ಸಾಂಕೇತಿಕ ಮೊತ್ತವನ್ನು ಪಾವತಿಸಿದ್ದ 72,000ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಟ್ಯಾಬ್ಲೆಟ್ಗಳಿಗಾಗಿ ಇನ್ನೂ ಕಾಯುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.

2016-17ರಲ್ಲಿ ಯೋಜನೆ ಆರಂಭಗೊಂಡಾಗ ಏಸರ್ ಮತ್ತು ಲೆನೊವೊ ಕಂಪನಿಗಳನ್ನು ಆಯ್ಕೆ ಮಾಡಲಾಗಿತ್ತಾದರೂ ಕಳೆದ ವರ್ಷದವರೆಗೆ ಲೆನೊವೊ ಮಾತ್ರ ಟ್ಯಾಬ್ಲೆಟ್ಗಳನ್ನು ಪೂರೈಸುತ್ತಿತ್ತು. ಬಳಿಕ ಅದನ್ನು ಭಾರತೀಯ ಬ್ರಾಂಡ್ಗೆ ಬದಲಿಸುವ ಮೂಲಕ ಸರಕಾರವು ಯೋಜನೆಯನ್ನು ಮೊದಲ ಬಾರಿಗೆ ವಿಳಂಬಿಸಿತ್ತು. ಆದರೆ ಭಾರತೀಯ ಕಂಪನಿ ಲಾವಾ ಇಂಟರ್ನ್ಯಾಷನಲ್ ತಯಾರಿಸಿರುವ ಸುಮಾರು 50,000 ಟ್ಯಾಬ್ಲೆಟ್ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದ್ದು,ಈಗ ಪದವಿ ಎರಡನೇ ತರಗತಿಯಲ್ಲಿ ಓದುತ್ತಿರುವ 72,000ಕ್ಕೂ ಅಧಿಕ ನೋಂದಾಯಿತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಈ ವಿದ್ಯಾರ್ಥಿಗಳಿಗೆ ಬಾಕಿಯಿರುವ ಟ್ಯಾಬ್ಲೆಟ್ಗಳನ್ನು ವಿತರಿಸಿದ ಬಳಿಕವೇ ಮೊದಲ ವರ್ಷದ ವಿದ್ಯಾಥಿಗಳು ತಮ್ಮ ಸಾಧನಗಳನ್ನು ಪಡೆಯಬೇಕಿದೆ ಎಂದು ವರದಿಯಾಗಿದೆ.

ಲಾವಾ ಇಂಟರ್ನ್ಯಾಷನಲ್ ಆಗಸ್ಟ್ ನಲ್ಲಿ ಟ್ಯಾಬ್ಲೆಟ್ಗಳ ಪೂರೈಕೆಗೆ ಟೆಂಡರ್ ಪಡೆದುಕೊಂಡಿತ್ತು. ಇದಕ್ಕೂ ಮುನ್ನ 3-4 ಸಲ ಟೆಂಡರ್ಗಳನ್ನು ಆಹ್ವಾನಿಸಲಾಗಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ, ತಾಂತ್ರಿಕ ವಿಶೇಷತೆಗಳಿಗೆ ಅನುಗುಣವಾದ ಟೆಂಡರ್ಗಳು ಸಲ್ಲಿಕೆಯಾಗಿರಲಿಲ್ಲ.

ಸ್ಪೀಡ್, ಮೆಮರಿ ಸೇರಿದಂತೆ ಹಲವಾರು ಪ್ರಮುಖ ತಾಂತ್ರಿಕ ಗುಣಮಟ್ಟದಲ್ಲಿ ಲಾವಾ ಟ್ಯಾಬ್ಲೆಟ್ಗಳು ವಿಫಲಗೊಂಡಿವೆ. ಇದೊಂದು ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿರುವುದರಿಂದ ಯಾರೂ ಮಾತನಾಡುತ್ತಿಲ್ಲ ಎಂದು ಶಿಕ್ಷಣ ಇಲಾಖೆಯಲ್ಲಿನ ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.

ಆಗಸ್ಟ್ ನಲ್ಲಿ ರಾಜಕೀಯ ಒತ್ತಡ ಮತ್ತು ವಿಳಂಬದ ಕುರಿತು ಪ್ರತಿಪಕ್ಷಗಳ ಆರೋಪಗಳಿಂದಾಗಿ ಗುಜರಾತ್ ಸರಕಾರವು ಒಂದು ತಿಂಗಳಿನಲ್ಲಿ ವಿಜಯ ರೂಪಾನಿ ಅವರ ಐದು ವರ್ಷಗಳ ಅಧಿಕಾರಾವಧಿಯ ಸಂಭ್ರಮದೊಂದಿಗೆ ಬಾಕಿ ಉಳಿದಿರುವ ಟ್ಯಾಬ್ಲೆಟ್ಗಳನ್ನು ಪೂರೈಸುವುದಾಗಿ ಭರವಸೆ ನೀಡಿತ್ತು.

ಸರಕಾರವು ‘ಮೇಕ್ ಇನ್ ಇಂಡಿಯಾ’ವನ್ನು ನೆಚ್ಚಿಕೊಂಡಿದ್ದು ವಿಳಂಬಕ್ಕೆ ಕಾರಣವಾಗಿದೆ ಮತ್ತು ಬಾಕಿಯುಳಿದಿರುವ ಟ್ಯಾಬ್ಲೆಟ್ಗಳನ್ನು ಶೀಘ್ರವೇ ವಿತರಿಸಲಾಗುವುದು ಎಂದು ಮಾಜಿ ಶಿಕ್ಷಣ ಸಚಿವ ಭೂಪೇಂದ್ರಸಿನ್ಹ ಚುಡಾಸಮಾ ಅವರು ಆಗ ತಿಳಿಸಿದ್ದರು.

ಯೋಜನೆ ಆರಂಭಗೊಂಡ ನಂತರದ ನಾಲ್ಕು ವರ್ಷಗಳಲ್ಲಿ ತಂತ್ರಜ್ಞಾನವು ಮುಂದುವರಿದಿರುವುದರಿಂದ ಎಂಟು ಇಂಚಿನ ಸ್ಕ್ರೀನ್ ಮತ್ತು ಹೆಚ್ಚಿನ ರ್ಯಾಮ್, ಬ್ಯಾಟರಿ ಬ್ಯಾಕಪ್ ಸೇರಿದಂತೆ ತಾಂತ್ರಿಕ ವಿಶೇಷತೆಗಳನ್ನು ಮೇಲ್ದರ್ಜೆಗೇರಿಸಲಾಗಿತ್ತು. ಟ್ಯಾಬ್ಲೆಟ್ನ ಮಾರುಕಟ್ಟೆ ಬೆಲೆ 12,000 ರೂ.-14,000 ರೂ.ನಡುವೆ ಇರುವ ನಿರೀಕ್ಷೆಯಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News