ಅಂಬೇಡ್ಕರ್ ಲೇಖನಗಳ ಪ್ರಕಟಣೆಗೆ ಸರಕಾರಿ ಯೋಜನೆಯ ಸ್ಥಗಿತವನ್ನು ಸ್ವಯಂಪ್ರೇರಿತವಾಗಿ ಗಮನಿಸಿದ ಬಾಂಬೆ ಹೈಕೋರ್ಟ್

Update: 2021-12-02 15:39 GMT
ಬಾಂಬೆ ಹೈಕೋರ್ಟ್(photo:PTI)

ಮುಂಬೈ,ಡಿ.2: ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳನ್ನು ಪ್ರಕಟಿಸಲು ಮಹಾರಾಷ್ಟ್ರ ಸರಕಾರವು ಹಮ್ಮಿಕೊಂಡಿದ್ದ ಯೋಜನೆಯು ಸ್ಥಗಿತಗೊಂಡಿರುವುದನ್ನು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದೆ.

ಈ ಬಗ್ಗೆ ಮರಾಠಿ ದೈನಿಕ ಲೋಕಸತ್ತಾದಲ್ಲಿ ಪ್ರಕಟಗೊಂಡಿರುವ ಲೇಖನವೊಂದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ ಮತ್ತು ಎಸ್.ಎಂ.ಮೋಡಕ್ ಅವರ ಪೀಠವು, ಯೋಜನೆಯು ಸ್ಥಗಿತಗೊಂಡಿರುವುದು ದಯನೀಯ ಸ್ಥಿತಿಯಾಗಿದೆ ಎಂದು ಹೇಳಿತು.

ಮುಂಬೈ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದೀಪಂಕರ ದತ್ತಾ ಅವರ ಪರಿಗಣನೆಗಾಗಿ ಈ ವಿಷಯದಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವಂತೆ ಪೀಠವು ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶ ನೀಡಿತು.

‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು ’ಶೀರ್ಷಿಕೆಯ ಸಮಗ್ರ ಕೃತಿಯನ್ನು ಪ್ರಕಟಿಸಲು ಮಹಾರಾಷ್ಟ್ರ ಸರಕಾರವು ಯೋಜಿಸಿತ್ತು ಮತ್ತು ಕೃತಿಯ ಒಂಭತ್ತು ಲಕ್ಷ ಪ್ರತಿಗಳನ್ನು ಮುದ್ರಿಸಲು ಉದ್ದೇಶಿಸಿತ್ತು. ಇದಕ್ಕಾಗಿ ಸರಕಾರವು ನವಂಬರ್,2017ರಲ್ಲಿ 5.45 ಕೋ.ರೂ. ಮೌಲ್ಯದ ಮುದ್ರಣ ಕಾಗದ ಮತ್ತು 8.17 ಲ.ರೂ. ಮೌಲ್ಯದ ಬೈಂಡಿಂಗ್ ಬಟ್ಟೆಯನ್ನು ಖರೀದಿಸಿತ್ತು. ಆದರೆ 2017ರಿಂದ ಕೇವಲ 33,000 ಪ್ರತಿಗಳನ್ನು ಮುದ್ರಿಸಲಾಗಿತ್ತು ಮತ್ತು ಕೇವಲ 3,675 ಪ್ರತಿಗಳನ್ನು ವಿವಿಧ ಗ್ರಂಥಾಲಯಗಳಿಗೆ ವಿತರಣೆಗಾಗಿ ಲಭ್ಯವಾಗಿಸಲಾಗಿತ್ತು ಎಂದು ಲೋಕಸತ್ತಾದ ಲೇಖನವು ಹೇಳಿದೆ.

ಅಂಬೇಡ್ಕರ್ ಬರಹಗಳ ಈ ಸಂಪುಟಗಳಿಗೆ ಸಂಶೋಧಕರು ಮತ್ತು ವಕೀಲರು ಮಾತ್ರವಲ್ಲ,ಸಾಮಾನ್ಯ ಜನರಿಂದಲೂ ಬೇಡಿಕೆಯಿದೆ ಎಂದು ಪೀಠವು ಹೇಳಿತು.

ಮುಂಬೈ,ಪುಣೆ ಮತ್ತು ನಾಗಪುರಗಳಲ್ಲಿರುವ ಸರಕಾರಿ ಮುದ್ರಣಾಲಯಗಳಲ್ಲಿ ಸಿಬ್ಬಂದಿ ಕೊರತೆಯಿದೆ ಮತ್ತು ಅವು ಹಳೆಯ ಕಾಲದ ಮುದ್ರಣ ಯಂತ್ರಗಳನ್ನು ಹೊಂದಿವೆ,ಹೀಗಾಗಿ ನಿಗದಿತ ಅವಧಿಯಲ್ಲಿ ಅಂಬೇಡ್ಕರ್ ಕೃತಿಗಳನ್ನು ಮುದ್ರಿಸಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಲೋಕಸತ್ತಾದ ವರದಿಯ ಆಧಾರದಲ್ಲಿ ಹೇಳಿದ ಪೀಠವು,ಲೇಖನದಲ್ಲಿ ಎತ್ತಲಾಗಿರುವ ದೂರಿನ ಸ್ವರೂಪವನ್ನು ಪರಿಗಣಿಸಿ ನಾವದನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಷಯವನ್ನಾಗಿ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿತು.

ಗೋದಾಮುಗಳಲ್ಲಿ ಬಿದ್ದಿರುವ ಅಪಾರ ಪ್ರಮಾಣದ ಮುದ್ರಣ ಕಾಗದ ‘ಸುರಕ್ಷಿತ’ವಾಗಿದೆ ಎಂದು ಬಣ್ಣಿಸಿರುವ ಸರಕಾರಿ ಮುದ್ರಣ ಇಲಾಖೆಯ ಮುಖ್ಯಸ್ಥ ರೂಪೇಂದ್ರ ಮೋರೆ ಅವರು,ಕಾಗದವು ಅತ್ಯುತ್ತಮ ಗುಣಮಟ್ಟದಾಗಿದ್ದು,ಹಲವಾರು ವರ್ಷಗಳ ಬಾಳಿಕೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News