ದ್ವಿತೀಯ ಟೆಸ್ಟ್: ನಾಲ್ಕನೆ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್, ಭಾರತ 221/4

Update: 2021-12-03 12:20 GMT

ಮುಂಬೈ: ಭಾರತದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಶುಕ್ರವಾರ ಆರಂಭವಾದ ನ್ಯೂಝಿಲ್ಯಾಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ತಂಡವನ್ನು ಆಧರಿಸಿದ್ದಾರೆ. ಭಾರತವು ಮೊದಲ ದಿನದಾಟದಂತ್ಯಕ್ಕೆ 70 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

ಶುಭಮನ್ ಗಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ಮೊದಲ ವಿಕೆಟ್ ಗೆ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಗಿಲ್ ಔಟಾದ ಬಳಿಕ ಚೇತೇಶ್ವರ ಪೂಜಾರ(0) ಹಾಗೂ ನಾಯಕ ವಿರಾಟ್ ಕೊಹ್ಲಿ(0)ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ (18 ರನ್)ಅವರೊಂದಿಗೆ 4ನೇ ವಿಕೆಟ್ ಗೆ 80 ರನ್ ಜೊತೆಯಾಟ ನಡೆಸಿದ ಮಯಾಂಕ್ ತಂಡಕ್ಕೆ ಆಸರೆಯಾದರು. ಅಯ್ಯರ್ 18 ರನ್  ಗಳಿಸಿ ಔಟಾದರು.

ಒಂದಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ಕನ್ನಡಿಗ ಮಯಾಂಕ್ 196 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 3 ಸಿಕ್ಸರ್ ಗಳ ಸಹಿತ ನಾಲ್ಕನೇ ಟೆಸ್ಟ್ ಶತಕ ಸಿಡಿಸಿದರು. ಔಟಾಗದೆ 120 ರನ್ (246 ಎಸೆತ,14 ಬೌಂಡರಿ, 4 ಸಿಕ್ಸರ್) ಗಳಿಸಿರುವ  ಮಯಾಂಕ್ ಅವರು ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ (ಔಟಾಗದೆ 25, 53 ಎಸೆತ, 3 ಬೌಂ.1 ಸಿ.) ಅವರೊಂದಿಗೆ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿ ತಂಡವು 70 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News