ಜವಾದ್ ಚಂಡಮಾರುತ ಭೀತಿ: ಅಂತರ್ ರಾಷ್ಟ್ರೀಯ ಮರಳುಶಿಲ್ಪ ಉತ್ಸವ ದಿಢೀರ್ ರದ್ದು

Update: 2021-12-04 02:35 GMT
ಫೈಲ್ ಫೋಟೊ 

ಭುವನೇಶ್ವರ: ಐತಿಹಾಸಿಕ ಕೊನಾರ್ಕ್ ಉತ್ಸವ ಮತ್ತು ಅಂತರ್ ರಾಷ್ಟ್ರೀಯ ಮರಳು ಕಲಾಶಿಲ್ಪ ಉತ್ಸವಗಳನ್ನು ಒಡಿಶಾ ಪ್ರವಾಸೋದ್ಯಮ ಇಲಾಖೆ ಜವಾದ್ ಚಂಡಮಾರುತ ಹಿನ್ನೆಲೆಯಲ್ಲಿ ದಿಢೀರನೇ ರದ್ದುಪಡಿಸಿದೆ.

"ಭಾರತದ ಹವಾಮಾನ ಇಲಾಖೆಯ ವರದಿ ಮತ್ತು ವಿಶೇಷ ಪರಿಹಾರ ಆಯುಕ್ತರು ಬಿಡುಗಡೆ ಮಾಡಿರುವ ಸಲಹಾಸೂಚಿಗಳ ಪ್ರಕಾರ, ಜವಾದ್ ಚಂಡಮಾರುತ ಒಡಿಶಾ ಕರಾವಳಿಯನ್ನು ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊನಾರ್ಕ್ ಉತ್ಸವ ಮತ್ತು ಅಂತರ್ ರಾಷ್ಟ್ರೀಯ ಮರಳು ಕಲಾಶಿಲ್ಪ ಉತ್ಸವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ" ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ.

ಐದು ದಿನಗಳ ಅಂತರ್ ರಾಷ್ಟ್ರೀಯ ಮರಳು ಶಿಲ್ಪ ಉತ್ಸವ ಡಿಸೆಂಬರ್ ಒಂದರಿಂದ ಕೊನಾರ್ಕ್‌ನ ಚಂದ್ರಭಾಗ ಬೀಚ್‌ನಲ್ಲಿ ನಡೆಸಲಾಗುತ್ತಿತ್ತು. ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತ ತೀವ್ರತೆ ಪಡೆದು ಜವಾದ್ ಚಂಡಮಾರುತವಾಗಿ ರೂಪುಗೊಂಡು ಉತ್ತರ ಆಂಧ್ರ ಕರಾವಳಿ ಮತ್ತು ಒಡಿಶಾವನ್ನು ಶನಿವಾರ ಮುಂಜಾನೆ ವೇಳೆಗೆ ತಲುಪಲಿದೆ.

ಸುಮಾರು 100 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸಲಿದೆ ಎಂದು ಇದಕ್ಕೂ ಮುನ್ನ ಭಾರತದ ಹವಾಮಾನ ಇಲಾಖೆ ಹೇಳಿತ್ತು. ಚಂಡಮಾರುತದ ಪರಿಣಾಮ ಆಂಧ್ರ ಹಾಗೂ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News